ಟೋಕಿಯೊ: ಕಳೆದ ವರ್ಷದ ಕೊನೆಯಲ್ಲಿ ಜಪಾನ್‌ನಲ್ಲಿ ಅನಿರೀಕ್ಷಿತ ಆರ್ಥಿಕ ಹಿಂಜರಿತ (Japan recession) ಕಾಣಿಸಿಕೊಂಡಿದ್ದು, ವಿಶ್ವದ ಟಾಪ್ ಆರ್ಥಿಕತೆಗಳ (Top Economies) ಪಟ್ಟಿಯಲ್ಲಿ ಒಂದು ಸ್ಥಾನ ಕೆಳಕ್ಕೆ ಜಾರಿದೆ. ಮೂರನೇ ಸ್ಥಾನದಲ್ಲಿದ್ದ ಜಪಾನ್ (Japan Economy) ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಜಪಾನಿನಲ್ಲಿ ಹಿಂದಿನ ತ್ರೈಮಾಸಿಕದಲ್ಲಿ ಎಕಾನಮಿ 3.3% ಕುಸಿತವಾಗಿದ್ದು, ದೇಶದ ಒಟ್ಟು ದೇಶೀಯ ಉತ್ಪನ್ನ (GDP) ಅಕ್ಟೋಬರ್- ಡಿಸೆಂಬರ್ ಅವಧಿಯಲ್ಲಿ ವಾರ್ಷಿಕ 0.4%ರಷ್ಟು ಕುಸಿಯಿತು. ಸದ್ಯ ಅಮೆರಿಕ, ಚೀನಾ, ಜರ್ಮನಿ, ಜಪಾನ್, ಭಾರತ ಕ್ರಮವಾಗಿ ಜಗತ್ತಿನ ಟಾಪ್ 5 ಆರ್ಥಿಕತೆಗಳಾಗಿವೆ. ಜರ್ಮನಿ ನಾಲ್ಕರಿಂದ ಮೂರನೇ ಸ್ಥಾನಕ್ಕೆ ಏರಿದೆ. ಜಪಾನ್ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ ಎಂಬ ಬಿರುದನ್ನು ಕಳೆದುಕೊಂಡಿದೆ.
ಸಡಿಲವಾದ ವಿತ್ತೀಯ ನೀತಿ ಇದಕ್ಕೆ ಕಾರಣ ಎನ್ನಲಾಗಿದೆ. ಕೆಲವು ವಿಶ್ಲೇಷಕರು ಪ್ರಸ್ತುತ ತ್ರೈಮಾಸಿಕದಲ್ಲಿ ಮತ್ತೊಂದು ಕುಸಿತದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಜಪಾನ್‌ನ ಉತ್ಪನ್ನಗಳಿಗೆ ಚೀನಾದಿಂದ ಬೇಡಿಕೆ ದುರ್ಬಲವಾಗಿದೆ. ಬಳಕೆ ನಿಧಾನಗತಿಯಲ್ಲಿದೆ ಹಾಗೂ ಟೊಯೊಟಾ ಮೋಟಾರ್ ಕಾರ್ಪ್ ಘಟಕದಲ್ಲಿ ಉತ್ಪಾದನೆ ಸ್ಥಗಿತಗೊಂಡಿದೆ. ಎಲ್ಲವೂ ಆರ್ಥಿಕ ಚೇತರಿಕೆ ಮತ್ತು ನೀತಿ ರಚನೆಗೆ ಸವಾಲಿನ ಹಾದಿಯನ್ನು ಸೂಚಿಸಿವೆ.
“ದೇಶೀಯ ಬೇಡಿಕೆಯ ಪ್ರಮುಖ ಆಧಾರವಾಗಿರುವ ಬಳಕೆ ಮತ್ತು ಬಂಡವಾಳ ವೆಚ್ಚದಲ್ಲಿನ ನಿಧಾನಗತಿಯು ಗಮನಾರ್ಹವಾಗಿದೆ” ಎಂದು ಡೈ-ಇಚಿ ಲೈಫ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಕಾರ್ಯನಿರ್ವಾಹಕ ಅರ್ಥಶಾಸ್ತ್ರಜ್ಞ ಯೋಶಿಕಿ ಶಿಂಕೆ ಹೇಳುತ್ತಾರೆ.
ಎರಡು ಸತತ ತ್ರೈಮಾಸಿಕಗಳಲ್ಲಿ ಆರ್ಥಿಕ ಸಂಕೋಚನ ಉಂಟಾದರೆ ಅದನ್ನು ಸಾಮಾನ್ಯವಾಗಿ ಆರ್ಥಿಕ ಹಿಂಜರಿತ ಎನ್ನಲಾಗುತ್ತದೆ. ಬ್ಯಾಂಕ್ ಆಫ್ ಜಪಾನ್ ಈ ವರ್ಷ ತನ್ನ ಬೃಹತ್ ವಿತ್ತೀಯ ಉತ್ತೇಜನವನ್ನು ಹಂತಹಂತವಾಗಿ ಹೊರತರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ದುರ್ಬಲ ಡೇಟಾದ ಹಿನ್ನೆಲೆಯಲ್ಲಿ ಈ ಮುನ್ಸೂಚನೆಯ ಕುರಿತು ಅನುಮಾನವಿದೆ. ಏರುತ್ತಿರುವ ವೇತನವು ಬಳಕೆಯನ್ನು ಬೆಂಬಲಿಸಲಿದೆ ಮತ್ತು ಹಣದುಬ್ಬರವನ್ನು ಅದರ 2% ಗುರಿಯತ್ತ ಬರುವಂತೆ ಮಾಡುತ್ತದೆ.
“ಜಿಡಿಪಿಯಲ್ಲಿ ಸತತ ಎರಡು ಕುಸಿತಗಳು ಮತ್ತು ದೇಶೀಯ ಬೇಡಿಕೆಯಲ್ಲಿ ಸತತ ಮೂರು ಕುಸಿತಗಳು ಋಣಾತ್ಮಕವಾಗಿವೆ” ಎಂದು ಮೂಡೀಸ್ ಅನಾಲಿಟಿಕ್ಸ್‌ನ ಹಿರಿಯ ಅರ್ಥಶಾಸ್ತ್ರಜ್ಞ ಸ್ಟೀಫನ್ ಆಂಗ್ರಿಕ್ ಹೇಳಿದ್ದಾರೆ. ಆರ್ಥಿಕ ಸಚಿವ ಯೋಶಿತಾಕ ಶಿಂಡೋ ಅವರು ಹೆಚ್ಚುತ್ತಿರುವ ಬೆಲೆಗಳಿಂದಾಗಿ ಬಳಕೆದಾರ ಬೆಳವಣಿಗೆಯ ಕೊರತೆ ಉಂಟಾಗಿದೆ ಎಂದು ವಿವರಿಸಿದ್ದು, ವೇತನ ಏರಿಕೆಯ ಬೆಳವಣಿಗೆಯನ್ನು ಸಾಧಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
ರಾಷ್ಟ್ರೀಯ ಕರೆನ್ಸಿ ಯೆನ್ ಮೌಲ್ಯ ಇಂದು ಕೊನೆಯದಾಗಿ ಪ್ರತಿ ಡಾಲರ್‌ಗೆ 150.22ರಷ್ಟಕ್ಕೆ ಇಳಿದಿದೆ. ಈ ವಾರದ ಆರಂಭದಲ್ಲಿ ಮೂರು ತಿಂಗಳ ಅತಿ ಕಡಿಮೆ ಮೌಲ್ಯ ದಾಖಲಾಗಿದೆ.
ಇದನ್ನೂ ಓದಿ: Japan earthquake: ಜಪಾನ್ ಭೂಕಂಪದಲ್ಲಿ ಸತ್ತವರ ಸಂಖ್ಯೆ 73ಕ್ಕೆ ಏರಿಕೆ, ಅವಶೇಷಗಳಡಿ ಹುಡುಕಾಟ