ಟೋಕಿಯೊ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಚಂದ್ರಯಾನ-3 ಮಿಷನ್‌ಅನ್ನು ಯಶಸ್ವಿಯಾಗಿ ಕೈಗೊಂಡು ಇತಿಹಾಸ ಸೃಷ್ಟಿಸಿದ ಬೆನ್ನಲ್ಲೇ ಜಪಾನ್ ಕೂಡ ಚಂದ್ರಯಾನ (Japan Moon Mission) ಕೈಗೊಂಡಿದೆ. ತನೆಗಾಶಿಮಾ ಬಾಹ್ಯಾಕಾಶ ಕೇಂದ್ರದಿಂದ ಸ್ಲಿಮ್ (SLIM) ನೌಕೆಯನ್ನು ಹೊತ್ತುಕೊಂಡ H-IIA ರಾಕೆಟ್ ನಭಕ್ಕೆ ನೆಗೆದಿದೆ ಎಂದು ಜಪಾನ್ ಏರೋಸ್ಪೇಸ್ ಎಕ್ಸ್‌ಪ್ಲೋರೇಷನ್ ಏಜೆನ್ಸಿ (JAXA) ಮಾಹಿತಿ ನೀಡಿದೆ. ಇನ್ನು ಉಡಾವಣೆ ಯಶಸ್ವಿಯಾಗುತ್ತಲೇ ಜಪಾನ್ ಬಾಹ್ಯಾಕಾಶ ಸಂಸ್ಥೆಗೆ ಇಸ್ರೋ ಅಭಿನಂದನೆ ಸಲ್ಲಿಸಿದೆ.
ಜಪಾನ್ ಚಂದ್ರಯಾನಕ್ಕೆ ‘ಮೂನ್ ಸ್ನೈಪರ್’ (Moon Sniper) ಎಂದು ಹೆಸರಿಟ್ಟಿದೆ. ಸ್ಮಾರ್ಟ್ ಲ್ಯಾಂಡರ್ ಇನ್ವೆಸ್ಟಿಗೇಟಿಂಗ್ ಮೂನ್ (ಸ್ಲಿಮ್) ನೌಕೆಯನ್ನು ಚಂದ್ರನ ಮೈಲ್ಮೈನ ನಿಗದಿತ ಸ್ಥಳದ 100 ಮೀಟರ್ ವ್ಯಾಪ್ತಿಯಲ್ಲಿಯೇ ಲ್ಯಾಂಡ್ ಮಾಡುವುದು ಜಪಾನ್ ಬಾಹ್ಯಾಕಾಶ ಸಂಸ್ಥೆಯ ಗುರಿಯಾಗಿದೆ. ಕಳೆದ ತಿಂಗಳು ಜಪಾನ್ ಚಂದ್ರಯಾನ ಕೈಗೊಳ್ಳಬೇಕಿತ್ತು. ಆದರೆ, ಹವಾಮಾನ ವೈಪರೀತ್ಯದಿಂದಾಗಿ ಮೂರು ಬಾರಿ ಉಡಾವಣೆಯನ್ನು ಮುಂದೂಡಿತ್ತು.
ಉಡಾವಣೆಯ ವಿಡಿಯೊ
ಮಿಷನ್ ಉದ್ದೇಶ ಏನು?
“ಮೂನ್ ಸ್ನೈಪರ್ ಉಡಾವಣೆ ಯಶಸ್ವಿಯಾಗಿದೆ. ಚಂದ್ರನದಲ್ಲಿ ನಿಖರ ಲ್ಯಾಂಡಿಂಗ್ ಸಾಧನೆಗಾಗಿ ಚಂದ್ರಯಾನ ಕೈಗೊಳ್ಳಲಾಗಿದೆ. ನಾವು ಚಂದ್ರನ ಮೇಲ್ಮೈನಲ್ಲಿ ಎಲ್ಲಿ ಬಯಸಿದ್ದೇವೋ ಅಲ್ಲಿ ಲ್ಯಾಂಡ್ ಮಾಡುವುದಕ್ಕಿಂತ, ಎಲ್ಲಿ ಲ್ಯಾಂಡ್ ಮಾಡಬಹುದು ಎಂಬುದನ್ನು ಪತ್ತೆಹಚ್ಚುವ ಸಾಧನೆ ಮಾಡುವ ಗುರಿ ಹೊಂದಿದ್ದೇವೆ” ಎಂದು JAXA ಅಧ್ಯಕ್ಷ ಹಿರೋಶಿ ಯಮಕಾವಾ ತಿಳಿಸಿದ್ದಾರೆ.
ಸಾಫ್ಟ್ ಲ್ಯಾಂಡ್ ಯಾವಾಗ?
ಜಪಾನ್ ಸುದೀರ್ಘ ಚಂದ್ರಯಾನ ಕೈಗೊಂಡಿದೆ. ಫೆಬ್ರವರಿಯಲ್ಲಿ ಸ್ಲಿಮ್ ನೌಕೆಯು ಚಂದ್ರನ ಅಂಗಳದಲ್ಲಿ ಲ್ಯಾಂಡ್ ಆಗುವ ಸಾಧ್ಯತೆ ಇದೆ. ಯಶಸ್ವಿಯಾಗಿ ಲ್ಯಾಂಡ್ ಆದರೆ, ಚಂದ್ರಯಾನ ಕೈಗೊಂಡ ಐದನೇ ರಾಷ್ಟ್ರ ಎಂಬ ಖ್ಯಾತಿಗೆ ಜಪಾನ್ ಭಾಜನವಾಗಲಿದೆ. ಆಗಸ್ಟ್ 23ರಂದು ಭಾರತದ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಆಯಿತು. ಆ ಮೂಲಕ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡ್ ಮಾಡಿದ ಜಗತ್ತಿನ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಭಾಜನವಾಗಿದೆ. ಕಳೆದ ತಿಂಗಳು ರಷ್ಯಾದ ಲೂನ್ 25 ನೌಕೆಯು ಸಾಫ್ಟ್ ಲ್ಯಾಂಡ್ ಆಗುವಲ್ಲಿ ವಿಫಲವಾಗಿದೆ.