ಇಸ್ರೇಲ್ ರಾಜಧಾನಿ ಜೆರುಸಲೇಮ್ನಲ್ಲಿರುವ ಯಹೂದಿಗಳ ಪ್ರಾರ್ಥನಾಮಂದಿರದ ಮೇಲೆ ಭಯೋತ್ಪಾದಕನೊಬ್ಬ ನಡೆಸಿದ ದಾಳಿಯಲ್ಲಿ (Jerusalem Terror Attack) 8 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಬಗ್ಗೆ ಇಸ್ರೇಲ್ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆ ಮಾಡಿದೆ.
ಈ ಪ್ರಾರ್ಥನಾ ಮಂದಿರ ನೆವೆ ಯಾಕೋವ್ ರಸ್ತೆಯಲ್ಲಿದ್ದು, ಅಲ್ಲಿನ ಕಾಲಮಾನದ ಪ್ರಕಾರ ಸಂಜೆ 8.15ರ ಹೊತ್ತಿಗೆ ಉಗ್ರ ದಾಳಿ ಮಾಡಿದ್ದಾನೆ. ದಾಳಿ ನಡೆದ ಬೆನ್ನಲ್ಲೇ ಆ ಸ್ಥಳವೆಲ್ಲ ರಕ್ತಸಿಕ್ತವಾಗಿತ್ತು. ಗಾಯಗೊಂಡವರು ಅಲ್ಲೇ ನರಳಾಡುತ್ತಿದ್ದರು. ರಕ್ಷಣಾ ಪಡೆಗಳ ಜತೆ ಪ್ಯಾರಾಮೆಡಿಕಲ್ ಸಿಬ್ಬಂದಿ ಆಗಮಿಸಿ, ಗಾಯಾಳುಗಳಿಗೆ ಸ್ಥಳದಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಸಾಗಿಸುವ ಕಾರ್ಯವೂ ನಡೆದಿದೆ. ಅಷ್ಟೇ ಅಲ್ಲ, ದಾಳಿ ನಡೆಸಿದವನನ್ನು ಕೆಲವೇ ಹೊತ್ತಲ್ಲಿ ಪೊಲೀಸರು ಕೊಂದು ಹಾಕಿದ್ದಾರೆ.
ಇಸ್ರೇಲ್ಗೆ ಕಂಟಕವಾಗಿರುವ ಪ್ಯಾಲೆಸ್ಟೀನ್ ಮೂಲದ ಹಮಾಸ್ ಭಯೋತ್ಪಾದಕರ ವಿರುದ್ಧ ಆ ರಾಷ್ಟ್ರ ಸಮರ ಸಾರಿದೆ. ಅವರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಹಲವು ವರ್ಷಗಳಿಂದ ನಡೆಯುತ್ತಿದೆ. ಗುರುವಾರವಷ್ಟೇ ವೆಸ್ಟ್ ಬ್ಯಾಂಕ್ ಸಿಟಿಯ ಜೆನಿನ್ನಲ್ಲಿರುವ ಹಮಾಸ್ ಉಗ್ರರ ನಿರಾಶ್ರಿತ ಶಿಬಿರದ ಮೇಲೆ ಇಸ್ರೇಲ್ ಸೇನಾಪಡೆ ದಾಳಿ ನಡೆಸಿತ್ತು. ಇದರಲ್ಲಿ ಪ್ಯಾಲಿಸ್ಟೀನ್ನ ವಯಸ್ಸಾದ ಮಹಿಳೆ ಸೇರಿ 9 ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: Kabul Hotel Attack | ಕಾಬೂಲ್‌ನಲ್ಲಿರುವ ಚೀನಾ ಹೋಟೆಲ್ ಮೇಲೆ ಮುಂಬೈ ಮಾದರಿ ಉಗ್ರ ದಾಳಿ, ಮೂವರ ಸಾವು
ಇನ್ನು ಹಮಾಸ್ ಉಗ್ರರು ಇಸ್ರೇಲ್ನ ವಿವಿಧ ಸ್ಥಳಗಳ ಮೇಲೆ ರಾಕೆಟ್ ದಾಳಿ ನಡೆಸಿದ ಬೆನ್ನಲ್ಲೇ, ಇಸ್ರೇಲ್ ಸೇನಾ ಪಡೆಯೂ ಗಾಜಾಪಟ್ಟಿಯಲ್ಲಿ ಸರಣಿ ವೈಮಾನಿಕ ದಾಳಿ ನಡೆಸಿದೆ. ಒಟ್ಟಾರೆ ಹಮಾಸ್ ಉಗ್ರರ ವಿರುದ್ಧ ಇಸ್ರೇಲ್ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೆನ್ನಲ್ಲೇ, ಭಯೋತ್ಪಾದಕರೂ ಕೂಡ ಪ್ರತಿದಾಳಿ ನಡೆಸುತ್ತಿದ್ದಾರೆ.