ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ (Imran Khan) ಅವರು ಪಂಜಾಬ್ ಪ್ರಾಂತ್ಯದ ವಜೀರಾಬಾದ್‌ನಲ್ಲಿ ನಡೆದ ರ‍್ಯಾಲಿ ವೇಳೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಲಾಹೋರ್ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ, ಇಮ್ರಾನ್ ಖಾನ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ದುಷ್ಕರ್ಮಿಯು ಇಮ್ರಾನ್ ಖಾನ್ ಮೇಲೆ ಗುಂಡು ಹಾರಿಸಿದಾಗ ವ್ಯಕ್ತಿಯೊಬ್ಬ ದುಷ್ಕರ್ಮಿಯ ಮೇಲೆ ಜಿಗಿದ ಕಾರಣ ಅಪಾಯದಿಂದ ಪಾಕ್ ಮಾಜಿ ಪ್ರಧಾನಿ ಬಚಾವಾಗಿದ್ದಾರೆ. ಹಾಗಾಗಿ, ಇಮ್ರಾನ್ ಖಾನ್ ಪ್ರಾಣ ಉಳಿಸಿದ ವ್ಯಕ್ತಿಯನ್ನು ಆ ದೇಶದ ನಾಗರಿಕರು ಹೀರೊ ಎಂಬಂತೆ ನೋಡುತ್ತಿದ್ದಾರೆ.
ಇಮ್ರಾನ್ ಖಾನ್ ರ‍್ಯಾಲಿ ನಡೆಸುವಾಗ ದುಷ್ಕರ್ಮಿಯು ಏಕಾಏಕಿ ಗುಂಡಿನ ದಾಳಿ ನಡೆಸಿದೆ. ಇದೇ ವೇಳೆ, ಇಮ್ರಾನ್ ಖಾನ್‌ರಿಂದ 10-12 ಅಡಿ ದೂರದಲ್ಲಿ ಇಬ್ತಿಸಮ್ ಎಂಬ ವ್ಯಕ್ತಿಯು ದುಷ್ಕರ್ಮಿಯ ಮೇಲೆ ಜಿಗಿದಿದ್ದಾನೆ. ಆಗ ಇಮ್ರಾನ್ ಬಚಾವಾಗಿದ್ದಾರೆ. ಅಲ್ಲದೆ, ಇಬ್ತಿಸಮ್ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, “ದೂರದಲ್ಲಿದ್ದ ದುಷ್ಕರ್ಮಿಯು ಗನ್ ಲೋಡ್ ಮಾಡುವಾಗಲೇ ನನಗೆ ಅನುಮಾನ ಬಂತು. ಆತ ಗುಂಡಿನ ದಾಳಿ ಮಾಡುತ್ತಲೇ ನಾನು ಅವನ ಮೇಲೆ ಜಿಗಿದೆ. ಆಗ ಗನ್ ಬೇರೆ ಕಡೆ ಬಿತ್ತು” ಎಂದು ಹೇಳಿದ್ದಾರೆ. ವ್ಯಕ್ತಿಯ ಸಾಹಸದ ಬಗ್ಗೆ ಪಾಕ್ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಮ್ರಾನ್ ಖಾನ್ ಅವರ ಬಲಗಾಲಿಗೆ ಮೂರು ಗುಂಡುಗಳು ತಾಗಿದ ಕಾರಣ ಅವರು ಲಾಹೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಳಿಯನ್ನು ಪಾಕಿಸ್ತಾನದ ಹಲವರು ಖಂಡಿಸಿದ್ದಾರೆ. “ಇದು ಇಮ್ರಾನ್ ಖಾನ್ ಹತ್ಯೆಗೆ ಮಾಡಿದ ಸಂಚು” ಎಂದು ಪಿಟಿಐ ಖಂಡಿಸಿದೆ. ಘಟನೆಯ ಕುರಿತು ಪಾಕ್ ಸರ್ಕಾರವು ವರದಿ ಕೇಳಿದೆ. ಇಮ್ರಾನ್ ಖಾನ್ ಅವರು ದೇಶದಲ್ಲಿ ಅವಧಿ ಪೂರ್ವ ಚುನಾವಣೆಗೆ ಆಗ್ರಹಿಸಿ ರ‍್ಯಾಲಿ, ಬೃಹತ್ ನಡಿಗೆ ಆಯೋಜಿಸುತ್ತಿದ್ದಾರೆ. ಇದರ ಭಾಗವಾಗಿಯೇ ಗುರುವಾರ ರ‍್ಯಾಲಿ ನಡೆಸಿದ್ದರು.
ಇದನ್ನೂ ಓದಿ | Imran Khan March | ಪಿಟಿಐ ರ‍್ಯಾಲಿ ವೇಳೆ ಗುಂಡಿನ ದಾಳಿ, ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಗಾಯ