ಆ ಒಂದು ಧ್ವನಿ ಸಾಕು, ಜಗತ್ತಿನ ನಾನಾ ಭಾಗದ ಸಂಗೀತಪ್ರೇಮಿಗಳನ್ನು ಮಂತ್ರಮುಗ್ಧರನ್ನು ಮಾಡಲು. ಅವನು ನೋಡಲು ಕೂಡಾ ಅಷ್ಟೇ ಹ್ಯಾಂಡಸಮ್. ಕೇವಲ 28 ವರ್ಷದಲ್ಲೇ ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಈ ಹಾಡು ಕೋಗಿಲೆಗೆ ಈಗ ತುಟಿ ಅಲ್ಲಾಡಿಸಲೂ ಆಗುತ್ತಿಲ್ಲ. ಒಂದು ಕಣ್ಣು ಮಿಟುಕಿಸಲೂ ಆಗುತ್ತಿಲ್ಲ. ಈ ರೀತಿಯ ವಿಚಿತ್ರ ಆರೋಗ್ಯ ಸಮಸ್ಯೆಗೆ ಒಳಗಾದವರು ಕೆನಡಾ ಮೂಲದ ವಿಶ್ವ ಪ್ರಸಿದ್ಧ ಗಾಯಕ ಮತ್ತು ಗೀತ ರಚನೆಕಾರ ಜಸ್ಟಿನ್ ಬೀಬರ್.
ಜಸ್ಟಿನ್ ಬೀಬರ್ ಅವರ ಸಂಗೀತ ಕಾರ್ಯಕ್ರಮಕ್ಕೆ ವಿಶ್ವಾದ್ಯಂತ ಬೇಡಿಕೆ ಇದೆ. ಆದರೆ, ಕಳೆದ ಕೊರೊನಾ ಸಂದರ್ಭದಲ್ಲಿ ಅವರಿಗೆ ಪ್ರವಾಸ ಮಾಡಲು ಆಗದೆ ಅಭಿಮಾನಿಗಳು ನಿರಾಶರಾಗಿದ್ದರು. ಕೊರೊನಾ ಬಳಿಕ ಕಾರ್ಯಕ್ರಮಗಳು ಆಯೋಜನೆ ಆದವಾದರೂ ಈಗ ಅವರೇ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿದ್ದಾರೆ. ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬ ಅಭಿಮಾನಿಗಳ ಪ್ರಶ್ನೆಗಳಿಗೆ ಸ್ವತಃ ಬೀಬರ್ ಅವರೇ ಉತ್ತರ ಕೊಟ್ಟಿದ್ದಾರೆ: ಕ್ಷಮಿಸಿ, ನಾನು ಸದ್ಯಕ್ಕೆ ಹಾಡಲಾರೆ!
ಖುದ್ದು ಜಸ್ಟಿನ್ ಬೀಬರ್ ತನ್ನ ಅಧಿಕೃತ ಇನ್‌ಸ್ಟಾ ಗ್ರಾಮ್ ಖಾತೆಯ ಮೂಲಕ ಈ ವಿಷಯ ಖಚಿತ ಪಡಿಸಿದ್ದಾರೆ. ವಿಡಿಯೊ ಹಂಚಿಕೊಂಡಿರುವ ಅವರು, ತನಗೆ ರಾಮ್ಸೀ ಹಂಟ್ ಸಿಂಡ್ರೋಮ್ (Ramsay Hunt syndrome) ಆವರಿಸಿರುವುದನ್ನು ವಿವರಿಸಿದ್ದಾರೆ. ʻʻನನ್ನ ಕಾರ್ಯಕ್ರಮಗಳು ರದ್ದಾಗುತ್ತಿರುವ ಬಗ್ಗೆ ಬೇಸರಗೊಂಡಿರುವ ಅಭಿಮಾನಿಗಳಿಗೆ ಹೇಳಬಯಸುವುದೇನೆಂದರೆ, ದೈಹಿಕವಾಗಿ ನಾನೀಗ ಶೋಗಳನ್ನು ಮಾಡುವ ಸ್ಥಿತಿಯಲ್ಲಿಲ್ಲ. ನಾನು ಸ್ವಲ್ಪ ನಿಧಾನಗತಿಯಲ್ಲಿ ಚಲಿಸಬೇಕು ಎಂದು ನನ್ನ ದೇಹ ಹೇಳುತ್ತಿದೆ, ನಿಮಗೆಲ್ಲ ನನ್ನ ಸಮಸ್ಯೆ ಅರ್ಥವಾಗುತ್ತದೆ ಅಂದುಕೊಂಡಿದ್ದೇನೆ.ʼ ಎಂದಿದ್ದಾರೆ.
ʻʻನೋಡಿ ನನ್ನ ಒಂದು ಕಣ್ಣನ್ನು ನನಗೆ ಮಿಟುಕಿಸಲೂ ಆಗುತ್ತಿಲ್ಲ. ಮುಖದ ಒಂದು ಭಾಗದಿಂದ ನಾನು ನಗಲಿಕ್ಕೂ ಸಾಧ್ಯವಾಗುತ್ತಿಲ್ಲ. ಮೂಗಿನ ಒಂದು ಭಾಗ ನಾನು ಹೇಳಿದಂತೆ ಕೇಳುತ್ತಿಲ್ಲ. ಅಂದರೆ ಒಂದು ಭಾಗವನ್ನು ಪಾರ್ಶ್ವವಾಯು ಪೂರ್ತಿಯಾಗಿ ಆವರಿಸಿದೆʼʼ ಎಂದು ವಿಡಿಯೊದಲ್ಲಿ ವಿವರಣೆ ನೀಡಿದ್ದಾರೆ.
ʻʻಇದೆಲ್ಲ ಸರಿಯಾಗುವುದಕ್ಕೆ ಎಷ್ಟು ಸಮಯ ಬೇಕಾದೀತು ಎನ್ನುವುದು ನನಗೇ ಗೊತ್ತಿಲ್ಲ. ಆದರೂ ವಿಶ್ರಾಂತಿ ಮತ್ತು ಚಿಕಿತ್ಸೆಯ ಮೂಲಕ ಪೂರ್ಣವಾಗಿ ಚೇತರಿಸಿಕೊಳ್ಳುವ ಧೈರ್ಯ ನನಗಿದೆ. ನಾನೀಗ ಮುಖದ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ. ನೂರಕ್ಕೆ ನೂರು ಸರಿಯಾಗಿ ಮರಳಿ ಬರಬೇಕು ಎಂಬ ಆಸೆಯೊಂದಿಗೆ ನನ್ನೆಲ್ಲ ಸಮಯವನ್ನು ವಿಶ್ರಾಂತಿಗಾಗಿ ಬಳಸುತ್ತಿದ್ದೇನೆ. ನಾನು ಯಾಕಾಗಿ ಜನ್ಮ ತಳೆದಿದ್ದೇನೋ ಅದನ್ನು ಮಾಡಲು ನಾನೀಗ ಪೂರ್ಣ ಪ್ರಮಾಣದಲ್ಲಿ ಮತ್ತೆ ಸಿದ್ಧವಾಗಬೇಕಾಗಿದೆʼʼ ಎಂದು ಭಾವುಕವಾಗಿ ಹೇಳಿದ್ದಾರೆ.
ಜಸ್ಟಿನ್ ಅವರ ವಿಡಿಯೊವನ್ನು ಕೆಲವೇ ಗಂಟೆಗಳಲ್ಲಿ 14 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಸಂಗೀತ ಲೋಕದ ಗಣ್ಯಾತಿಗಣ್ಯರು ಬೇಗನೆ ಚೇತರಿಸಿ ಎಂದು ಹಾರೈಸಿದ್ದಾರೆ.
ಅಮ್ಮನ ಮೂಲಕ ಫೇಮ್
ಇವತ್ತು ಜಗತ್ತಿನ ಮಹಾನ್ ಗಾಯಕರಲ್ಲಿ ಒಬ್ಬನೆಂದು ಗುರುತಿಸಲಾಗುತ್ತಿರುವ ಜಸ್ಟಿನ್‌ನ್ನು ಫೇಮಸ್ ಮಾಡಿದ್ದು ಅವನ ತಾಯಿ. ಜಸ್ಟಿನ್‌ಗೆ 13 ವರ್ಷ ಆಗಿದ್ದಾಗ ಅವನು ಹಾಡುತ್ತಿದ್ದ ಹಾಡುಗಳನ್ನು ಅಮ್ಮ ಯೂ ಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದರು. ಅದು ಜನಪ್ರಿಯವಾಗಿ ಜಾಗತಿಕ ಜನಪ್ರಿಯತೆ ಪಡೆಯಿತು. ಎರಡು ಗ್ರಾಮಿ ಸೇರಿದಂತೆ 22 ಜಾಗತಿಕ ಪ್ರಶಸ್ತಿಗಳು ದೊರೆತವು.
ಇಷ್ಟೆಲ್ಲ ಸಾಧನೆ ಮಾಡಿದ ಈ ಹುಡುಗನನ್ನು ಕಾಡಿದ ರೋಗ ಯಾವುದು? ಅದರ ಲಕ್ಷಣಗಳೇನು ಅಂತ ನೋಡೋಣ.
ರಾಮ್ಸೀ ಹಂಟ್ ಸಿಂಡ್ರೋಮ್ ಎಂದರೇನು?
ರಾಮ್ಸೀ ಹಂಟ್ ಸಿಂಡ್ರೋಮ್ (RHS) ಎಂಬುದು ಮುಖದ ನರದ ಪಾರ್ಶ್ವವಾಯು (ಮುಖದ ಪಾಲ್ಸಿ). ಇದು ಕಿವಿ ಅಥವಾ ಬಾಯಿಯ ಮೇಲೆ ಪರಿಣಾಮ ಬೀರುವ ದದ್ದುಗಳಿಂದ ನಿರೂಪಿಸಲ್ಪಟ್ಟ ಅಪರೂಪದ ನರವೈಜ್ಞಾನಿಕ ಅಸ್ವಸ್ಥತೆಯಾಗಿದೆ. ಕಿವಿಯಲ್ಲಿ ರಿಂಗಣಿಸುವುದು (ಟಿನ್ನಿಟಸ್) ಮತ್ತು ಶ್ರವಣ ನಷ್ಟದಂತಹ ಕಿವಿ ಅಸಹಜತೆಗಳು ಸಹ ಇರಬಹುದು. ರಾಮ್ಸೀ ಹಂಟ್ ಸಿಂಡ್ರೋಮ್ ವೆರಿಸೆಲ್ಲಾ ಜೋಸ್ಟರ್ ವೈರಸ್ ನಿಂದ ಉಂಟಾಗುತ್ತದೆ.
ಇದು ಚಿಕನ್ ಪಾಕ್ಸ್ ಗೆ ಕಾರಣವಾಗುವ ವೈರಸ್ ನಿಂದ ಉಂಟಾಗುತ್ತದೆ. ಚಿಕನ್ ಪಾಕ್ಸ್ ನಿಂದ ಗುಣಮುಖರಾದ ನಂತರ, ವೈರಸ್ ನಮ್ಮ ನರಗಳಲ್ಲಿ ಇನ್ನೂ ಜೀವಂತವಾಗಿರುತ್ತದೆ. ವರ್ಷಗಳ ನಂತರ, ಅದು ಮತ್ತೆ ಸಕ್ರಿಯಗೊಳ್ಳಬಹುದು. ನಂತರ ನಿಮ್ಮ ಮುಖದ ನರಗಳ ಮೇಲೆ ಪರಿಣಾಮ ಬೀರಬಹುದು. ಶಾಶ್ವತ ಮುಖದ ಸ್ನಾಯು ದೌರ್ಬಲ್ಯ ಮತ್ತು ಕಿವುಡುತನವೂ ಬರಬಹುದು. ತ್ವರಿತ ಚಿಕಿತ್ಸೆಯಿಂದ ನಂತರದ ಅಪಾಯವನ್ನು ಕಡಿಮೆ ಮಾಡಬಹುದು.
ಸಿಂಡ್ರೋಮ್ ಲಕ್ಷಣಗಳು
ಮುಖದ ಪಾರ್ಶ್ವವಾಯು(Facial paralysis) ರಾಮ್ಸೀ ಹಂಟ್ ಸಿಂಡ್ರೋಮ್ ನ ಪ್ರಮುಖ ರೋಗಲಕ್ಷಣ ಹೀಗಿವೆ:-ಒಂದು ಕಿವಿಯ ಮೇಲೆ, ಒಳಗೆ ಮತ್ತು ಸುತ್ತಲೂ ದ್ರವ ತುಂಬಿದ ಗುಳ್ಳೆಗಳು ಬರುತ್ತದೆ. ಆ ಭಾಗದಲ್ಲಿ ದುದ್ದು ಅಂದರೆ ಕೆರೆತ,ನೋವು ಕಾಣಿಸುತ್ತದೆ. ನಂತರ ಬಾಧಿತ ಕಿವಿಯ ಮುಖದ ಭಾಗವನ್ನು ಅದು ಆಕ್ರಮಿಸಿಕೊಳ್ಳುತ್ತದೆ.
- ಕಿವಿ ನೋವು
- ಶ್ರವಣ ನಷ್ಟ
- ಕಿವಿಗಳಲ್ಲಿ ಏನೋ ರಿಂಗಣಿಸಿದಂತಾಗುವುದು (ಟಿನ್ನಿಟಸ್)
- ಒಂದು ಕಣ್ಣು ಮುಚ್ಚಲು ಕಷ್ಟವಾಗುವುದು
- ಅತ್ತಿತ್ತ ಓಲಾಡಿದಂತೆ ಆಗುವುದು (ವರ್ಟಿಗೋ)
- ರುಚಿ ಗ್ರಹಿಕೆಯಲ್ಲಿ ಬದಲಾವಣೆ ಅಥವಾ ರುಚಿಯ ನಷ್ಟ
- ಶುಷ್ಕ ಬಾಯಿ ಮತ್ತು ಕಣ್ಣುಗಳು.
ಈ ಮೇಲಿನ ರೋಗಲಕ್ಷಣಗಳು ಕಂಡು ಬಂದ 3 ದಿನಗಳ ಒಲಗೆ ವ್ಯೆದ್ಯರನ್ನು ಸಂಪರ್ಕಿಸಬೇಕು. ಚಿಕನ್ ಪಾಕ್ಸ್ ಬಂದುಹೋಗಿರುವ ಯಾರಿಗಾದರೂ ಸಮಸ್ಯೆ ಉಂಟಾಗಬಹುದು. ಇದು ಸಾಮಾನ್ಯವಾಗಿ 60 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುತ್ತದೆ. ಈ ಸಿಂಡ್ರೋಮ್ ಮಕ್ಕಳಲ್ಲಿ ವಿರಳವಾಗಿದೆ.
ಇದನ್ನೂ ಓದಿ:ಕಿಕ್ಕಿರಿದು ತುಂಬಿತ್ತು ಸಭಾಂಗಣ, ಕೆಕೆ ತುಂಬ ಬೆವರುತ್ತಿದ್ದರು; ವೇದಿಕೆ ಮೇಲೆ ಗಾಯಕನ ಕೊನೇ ಕ್ಷಣ