Site icon Vistara News

Kamala Harris: ಅಮೆರಿಕ ಚುನಾವಣೆ; ಟ್ರಂಪ್‌ಗೆ ಪೈಪೋಟಿ ನೀಡಲು ಬೈಡನ್‌ಗಿಂತ ಕಮಲಾ ಹ್ಯಾರಿಸ್‌ ಸಮರ್ಥ ಎನ್ನುತ್ತವೆ ಸಮೀಕ್ಷೆ!

Kamala Harris

ವಾಷಿಂಗ್ಟನ್: ಅಮೆರಿಕ (US) ಚುನಾವಣೆ (election) ಕಣ ರಂಗೇರಿದೆ. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಕಮಲಾ ಹ್ಯಾರಿಸ್ ತಮ್ಮದೇ ಆದ ಛಾಪು ಬೀರಿ ಅಮೆರಿಕ ರಾಜಕೀಯ ವಲಯದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಸಾಕಷ್ಟು ಮಂದಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಜೋ ಬೈಡನ್‌ ಅವರು ಚುನಾವಣಾ ಕಣದಿಂದ ಹಿಂದೆ ಸರಿದರೆ ಕಮಲಾ ಹ್ಯಾರಿಸ್‌ ಅವರು ಬೈಡನ್‌ ಅವರ ಉತ್ತರಾಧಿಕಾರಿಯಾಗುತ್ತಾರೆ ಎಂದೇ ಉನ್ನತ ಡೆಮಾಕ್ರಟ್‌ ಮೂಲಗಳು ಹೇಳಿವೆ. ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು ಬೈಡೆನ್‌ ಅವರಿಗೆ ಉತ್ತಮ ಅವಕಾಶವಿದೆಯೇ? ಬೈಡೆನ್ ರೇಸ್‌ನಲ್ಲಿ ಉಳಿದುಕೊಳ್ಳುತ್ತಾರೆಯೇ ಎನ್ನುವ ಬಗ್ಗೆಯೂ ಪ್ರಶ್ನೆಗಳು ಉದ್ಭವವಾಗಿವೆ.

59 ವರ್ಷದ ಕಮಲಾ ಹ್ಯಾರಿಸ್ ಅವರು ಭಾರತ ಮೂಲದವರು. ಮಾಜಿ ಯುಎಸ್ ಸೆನೆಟರ್ ಮತ್ತು ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದವರು. ಅವರು ಪಕ್ಷದಿಂದ ನಾಮನಿರ್ದೇಶಿತರಾದರೆ, ಮುಂದಿನ ನವೆಂಬರ್ 5ರ ಚುನಾವಣೆಯಲ್ಲಿ ಅವರು ಮೇಲುಗೈ ಸಾಧಿಸಿದರೆ ಅಮೆರಿಕದ ಅಧ್ಯಕ್ಷರಾದ ಮೊದಲ ಮಹಿಳೆ ಎಂಬ ಐತಿಹಾಸಿಕ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಅವರು ಅಮೆರಿಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮೊದಲ ಆಫ್ರಿಕನ್ ಅಮೆರಿಕನ್ ಮತ್ತು ಏಷ್ಯನ್ ವ್ಯಕ್ತಿಯಾಗಿದ್ದಾರೆ.

ಮೂರೂವರೆ ವರ್ಷಗಳ ಶ್ವೇತಭವನದ ಅಧಿಕಾರಾವಧಿಯು ಬೈಡನ್‌ಗೆ ಪ್ರಮುಖ ಯಶಸ್ಸನ್ನು ಉಂಟು ಮಾಡಿಲ್ಲ. ಕಳೆದ ವರ್ಷದಂತೆ ಶ್ವೇತಭವನದೊಳಗಿನ ಅನೇಕರು ಮತ್ತು ಬೈಡೆನ್ ಪ್ರಚಾರ ತಂಡದವರು ಖಾಸಗಿಯಾಗಿ ಹ್ಯಾರಿಸ್ ಪರ ಅಭಿಯಾನವನ್ನು ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಅಂದಿನಿಂದ ಪರಿಸ್ಥಿತಿ ಗಮನಾರ್ಹವಾಗಿ ಬದಲಾಯಿತು. ಹ್ಯಾರಿಸ್ ಅವರು ಗರ್ಭಪಾತದ ಹಕ್ಕುಗಳ ಕುರಿತು ಮಾತನಾಡಿದರು ಮತ್ತು ಯುವ ಮತದಾರರನ್ನು ಮೆಚ್ಚಿಸಲು ಪ್ರಾರಂಭಿಸಿದರು ಎನ್ನುತ್ತಾರೆ ಡೆಮಾಕ್ರಟಿಕ್ ನಾಯಕರು.


ಹ್ಯಾರಿಸ್‌ಗೆ ಒಲವು

ಇತ್ತೀಚಿನ ಕೆಲವು ಸಮೀಕ್ಷೆಗಳು ರಿಪಬ್ಲಿಕನ್ ಅಭ್ಯರ್ಥಿ ಟ್ರಂಪ್ ವಿರುದ್ಧ ಬೈಡನ್‌ಗಿಂತ ಹ್ಯಾರಿಸ್ ಪರವಾಗಿ ಒಲವು ತೋರಿಸಿದೆ. ಆದರೂ ಅವರು ತೀವ್ರ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ ಎಂದು ಸಮೀಕ್ಷೆ ಹೇಳಿದೆ. ಜುಲೈ 2ರಂದು ಬಿಡುಗಡೆಯಾದ ಸಿಎನ್‌ಎನ್ ಸಮೀಕ್ಷೆಯಲ್ಲಿ ಮತದಾರರು ಬೈಡೆನ್‌ಗಿಂತ ಟ್ರಂಪ್‌ ಮೇಲೆ ಶೇಕಡಾ 49ರಷ್ಟು ಒಲವು ತೋರಿದ್ದಾರೆ. ಟ್ರಂಪ್ ವಿರುದ್ಧ ಹ್ಯಾರಿಸ್ ಶೇ. 47ರಷ್ಟು ಮತದಾರ ಒಲವನ್ನು ಗಳಿಸಿದ್ದಾರೆ. ಸ್ವತಂತ್ರರು ಟ್ರಂಪ್‌ಗಿಂತ ಹ್ಯಾರಿಸ್‌ಗೆ ಶೇ. 43ರಿಂದ 40ರಷ್ಟು ಬೆಂಬಲ ನೀಡಿದ್ದಾರೆ. ಎರಡೂ ಪಕ್ಷಗಳಿಂದ ತಟಸ್ಥ ಆಗಿರುವವರು ಶೇ. 39ರಷ್ಟು ಪ್ರಮಾಣದಲ್ಲಿ ಕಮಲಾ ಹ್ಯಾರಿಸ್‌ಗೆ ಆದ್ಯತೆ ನೀಡಿದ್ದಾರೆ.

ಟ್ರಂಪ್ ಮತ್ತು ಬೈಡನ್ ನಡುವಿನ ಕಳೆದ ವಾರದ ದೂರದರ್ಶನದ ಚರ್ಚೆಯ ಅನಂತರ ರಾಯಿಟರ್ಸ್ ಸುದ್ದಿ ಸಂಸ್ಥೆ ನಡೆಸಿದ ಸಮೀಕ್ಷೆಯು ಹ್ಯಾರಿಸ್ ಮತ್ತು ಟ್ರಂಪ್ ಸ್ಪರ್ಧೆ ಬಹುತೇಕ ಸಮಬಲವಾಗಿದೆ ಎಂದು ಹೇಳಿದೆ. ಹ್ಯಾರಿಸ್ ಶೇ. 42 ಮತ್ತು ಟ್ರಂಪ್ ಶೇ. 43ರಷ್ಟು ಬೆಂಬಲ ಪಡೆಯುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಬೈಡೆನ್ ಅವರು ಈಗಾಗಲೇ ಟ್ರಂಪ್‌ಗಿಂತ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಕಮಲಾ ಹ್ಯಾರಿಸ್ ಅವರನ್ನು ಡೆಮೋಕ್ರಾಟ್ ಪಕ್ಷ ಮುನ್ನೆಲೆಗೆ ತರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: UK Election: ಬ್ರಿಟನ್‌ ಸಂಸತ್ತಿಗೆ 28 ಭಾರತೀಯ ಮೂಲದವರು ಆಯ್ಕೆ; ಈ ಪೈಕಿ 12 ಮಂದಿ ಸಿಖ್‌ ಸಮುದಾಯದವರು

Exit mobile version