Site icon Vistara News

Kenya Violence: ಕೀನ್ಯಾದಲ್ಲಿ ಭುಗಿಲೆದ್ದ ಹಿಂಸಾಚಾರ; ಭಾರತೀಯರಿಗೆ ಎಚ್ಚರಿಕೆ ನೀಡಿದ ಹೈಕಮಿಷನ್

Kenya Violence

Kenya Violence

ನೈರೋಬಿ: ತೆರಿಗೆಗಳನ್ನು ಹೆಚ್ಚಿಸಲು ಪ್ರಸ್ತಾಪಿಸುವ ವಿವಾದಾತ್ಮಕ ಮಸೂದೆಯನ್ನು ಕೀನ್ಯಾ ಸಂಸತ್ತಿನಲ್ಲಿ ಅಂಗೀಕರಿಸಿದ ನಂತರ ದೇಶದಲ್ಲಿ ಹಿಂಸೆ ಭುಗಿಲೆದ್ದಿದ್ದು (Kenya Violence), ನೈರೋಬಿಯಲ್ಲಿರುವ ಭಾರತೀಯ ಹೈಕಮಿಷನ್ (Indian high commission) ಭಾರತೀಯರಿಗೆ ಎಚ್ಚರಿಕೆ ನೀಡಿದೆ.

“ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೀನ್ಯಾದಲ್ಲಿರುವ ಎಲ್ಲ ಭಾರತೀಯರಿಗೆ ಅತ್ಯಂತ ಎಚ್ಚರಿಕೆ ವಹಿಸಲು ಸೂಚಿಸುತ್ತಿದ್ದೇವೆ. ಅನಿವಾರ್ಯವಲ್ಲದ ಹೊರತಾಗಿ ಯಾರೂ ಓಡಾಡಬೇಡಿ. ಪರಿಸ್ಥಿತಿ ತಿಳಿಯಾಗುವವರೆಗೆ ಪ್ರತಿಭಟನೆ ಮತ್ತು ಹಿಂಸಾಚಾರದಿಂದ ಬಾಧಿತವಾದ ಪ್ರದೇಶಗಳಿಂದ ದೂರವಿರಿʼʼ ಎಂದು ಹೈ ಕಮಿಷನ್ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್‌ ಮೂಲಕ ಭಾರತೀಯರಿಗೆ ಮನವಿ ಮಾಡಿದೆ.

ಜತೆಗೆ ಕ್ಷಣ ಕ್ಷಣದ ಮಾಹಿತಿಗಾಗಿ ಸ್ಥಳೀಯ ನ್ಯೂಸ್‌ ಚಾನಲ್‌ ನೋಡುವಂತೆ ಮತ್ತು ವೆಬ್‌ಸೈಟ್‌, ಸೋಷಿಯಲ್‌ ಮೀಡಿಯಾ ಗಮನಿಸುವಂತೆ ಸಲಹೆ ನೀಡಿದೆ. ಸುಮಾರು 20,000 ಭಾರತೀಯರು ಪ್ರಸ್ತುತ ಕೀನ್ಯಾದಲ್ಲಿ ವಾಸವಾಗಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ನೈರೋಬಿಯ ಸಂಸತ್ ಕಟ್ಟಡಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಒಂದು ದಿನದ ನಂತರ ಹೈಕಮಿಷನ್ ಈ ಹೇಳಿಕೆ ನೀಡಿದೆ. ರೊಚ್ಚಿಗೆದ್ದ ಪ್ರತಿಭಟನಾಕಾರರು ಸಂಸತ್ ಕಟ್ಟಡದ ಕೆಲವು ಭಾಗಗಳಿಗೆ ಬೆಂಕಿ ಹಚ್ಚಿದ್ದರು. ಅಶ್ರವಾಯು ಸಿಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಅವರನ್ನು ಚದುರಿಸಲಾಯಿತು. ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ವಿಲಿಯಂ ರುಟೊ ಎಚ್ಚರಿಕೆ ನೀಡಿದ್ದಾರೆ.

13 ಮಂದಿ ಸಾವು

ಇನ್ನು ಕೀನ್ಯಾದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಈಗಾಗಲೇ 13 ಮಂದಿ ಬಲಿಯಾಗಿದ್ದಾರೆ. ಮಂಗಳವಾರ ಕೀನ್ಯಾ ಸಂಸತ್ತಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಕನಿಷ್ಠ 13 ಮಂದಿ ಸಾವಿಗೀಡಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಅಶ್ರುವಾಯು ಮತ್ತು ಜಲ ಫಿರಂಗಿ ಬಳಸಿ ಜನರನ್ನು ಚದುರಿಸಲು ವಿಫಲವಾದ ನಂತರ ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಿದ್ದರು.

ಕೋವಿಡ್-19 ಸಾಂಕ್ರಾಮಿಕ ರೋಗ, ಉಕ್ರೇನ್‌ನಲ್ಲಿನ ಯುದ್ಧ, ಸತತ ಎರಡು ವರ್ಷಗಳ ಬರಗಾಲ ಮತ್ತು ಕರೆನ್ಸಿಯ ಮೌಲ್ಯ ಕುಸಿತದಿಂದಾಗಿ ಉಂಟಾದ ಹಲವಾರು ಆರ್ಥಿಕ ಆಘಾತಗಳನ್ನು ನಿಭಾಯಿಸಲು ಸಾಧ್ಯವಾಗದೆ ಕೀನ್ಯಾದವರು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ತೆರಿಗೆಗಳನ್ನು ಹೆಚ್ಚಿಸಲು ಪ್ರಸ್ತಾಪ ಅವರನ್ನು ರೊಚ್ಚಿಗೆಬ್ಬಿಸಿದ್ದು, ಅಧ್ಯಕ್ಷ ವಿಲಿಯಂ ರುಟೊ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಸರ್ಕಾರವು ಈಗಾಗಲೇ ಕೆಲವು ರಿಯಾಯಿತಿಗಳನ್ನು ನೀಡಿದ್ದು, ಬ್ರೆಡ್, ಅಡುಗೆ ಎಣ್ಣೆ, ಕಾರು ಮಾಲೀಕತ್ವ ಮತ್ತು ಹಣಕಾಸಿನ ವಹಿವಾಟುಗಳ ಮೇಲಿನ ಪ್ರಸ್ತಾವಿತ ಹೊಸ ತೆರಿಗೆಗಳನ್ನು ರದ್ದುಗೊಳಿಸುವ ಭರವಸೆ ನೀಡಿದೆ. ಅದಾಗ್ಯೂ ಪ್ರತಿಭಟನೆಯ ಕಿಚ್ಚು ಕಡಿಮೆಯಾಗಿಲ್ಲ.

ಇದನ್ನೂ ಓದಿ: Vijay Mallya: ದಿವಾಳಿಯೆಂದು ಪರಾರಿಯಾಗಿದ್ದ ವಿಜಯ್ ಮಲ್ಯಗೆ ಲಂಡನ್‌ನಲ್ಲಿದೆ 117 ಕೋಟಿಯ ಬಂಗಲೆ!

”ಕೀನ್ಯಾದಾದ್ಯಂತ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳಿಂದ ಉಂಟಾದ ಭದ್ರತಾ ತುರ್ತುಸ್ಥಿತಿಯನ್ನು ನಿಯಂತ್ರಿಸಲು ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆʼʼ ಎಂದು ಕ್ಯಾಬಿನೆಟ್ ಕಾರ್ಯದರ್ಶಿ ಅಡೆನ್ ಬೇರ್ ಡ್ಯುಯಲ್ ತಿಳಿಸಿದ್ದಾರೆ. ಹಿಂಸಾಚಾರದ ಬಗ್ಗೆ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳ ಕಳವಳ ವ್ಯಕ್ತಪಡಿಸಿವೆ. ಕೆನಡಾ, ಜರ್ಮನಿ, ಬ್ರಿಟನ್ ಮತ್ತು ಅಮೆರಿಕ ಸೇರಿದಂತೆ 13 ದೇಶಗಳ ರಾಯಭಾರ ಕಚೇರಿಗಳು ಮತ್ತು ರಾಜತಾಂತ್ರಿಕ ನಿಯೋಗಗಳು ಜಂಟಿ ಹೇಳಿಕೆಯಲ್ಲಿ ಆಘಾತ ವ್ಯಕ್ತಪಡಿಸಿವೆ.

Exit mobile version