Site icon Vistara News

Surendran K Pattel | ಕಾಸರಗೋಡಿನಲ್ಲಿ ಬೀಡಿ ಕಟ್ಟುತ್ತಿದ್ದ ಬಾಲಕ ಈಗ ಅಮೆರಿಕದಲ್ಲಿ ಜಿಲ್ಲಾ ನ್ಯಾಯಾಧೀಶ

K Surendran Pattel

ವಾಷಿಂಗ್ಟನ್‌: ಜೀವನದಲ್ಲಿ ಯಾವುದೇ ಅಡೆತಡೆ ಬರಲಿ, ಸಂಕಷ್ಟ ಎದುರಾಗಲಿ, ಸಾಧನೆ ಮಾಡುವ ಛಲ, ಅವಿರತ ಪರಿಶ್ರಮ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಈ ಮಾತಿಗೆ ನಿದರ್ಶನ ಎಂಬಂತೆ, ಕೇರಳದ ಕಾಸರಗೋಡಿನಲ್ಲಿ ಬೀಡಿ ಕಟ್ಟುತ್ತಿದ್ದ, 10ನೇ ಕ್ಲಾಸಿಗೇ ಶಾಲೆ ಬಿಟ್ಟ ಬಾಲಕನೊಬ್ಬ ಈಗ (Surendran K Pattel) ಅಮೆರಿಕದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆ ಮೂಲಕ ಎಲ್ಲರಿಗೂ ಮಾದರಿ ಎನಿಸಿದ್ದಾರೆ.

ಅಮೆರಿಕದ ಟೆಕ್ಸಾಸ್‌ನಲ್ಲಿರುವ ಫೋರ್ಟ್‌ ಬೆಂಡ್‌ ಕೌಂಟಿ (Fort Bend County) ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾಗಿ ಜನವರಿ 1ರಂದು ಕೇರಳ ಮೂಲದ ಸುರೇಂದ್ರನ್‌ ಕೆ. ಪಟೇಲ್‌ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆ ಮೂಲಕ ಸಾಧನೆಗೆ ಯಾವುದೂ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಬಡತನದ ಹಿನ್ನೆಲೆ, ಶಾಲೆಗೆ ವಿದಾಯ
ಕೇರಳದ ಕಾಸರಗೋಡಿನಲ್ಲಿ ಜನಿಸಿದ ಸುರೇಂದ್ರ ಪಟೇಲ್‌ ಅವರ ತಂದೆ-ತಾಯಿ ಕಡುಬಡವರಾಗಿದ್ದರು. ಒಂದು ಹೊತ್ತಿನ ಊಟಕ್ಕೂ ತಾತ್ಸಾರವಿತ್ತು. ಹಾಗಾಗಿ, ಸುರೇಂದ್ರನ್‌ ಅವರು ಕುಟುಂಬಕ್ಕೆ ನೆರವಾಗಲು ಬಿಡುವಿದ್ದಾಗ ಬೀಡಿ ಕಟ್ಟುತ್ತಿದ್ದರು. ಆದರೆ, ಯಾವಾಗ ಕುಟುಂಬದ ಆರ್ಥಿಕ ಸ್ಥಿತಿ ಬಿಗಡಾಯಿಸಿತೋ ಆಗ 10ನೇ ತರಗತಿ ಓದುತ್ತಿದ್ದ ಸುರೇಂದ್ರನ್‌ ಅವರು ಶಾಲೆ ಬಿಟ್ಟರು. ಪೂರ್ಣಾವಧಿ ಕೆಲಸ ಮಾಡಲು ಶುರು ಮಾಡಿದರು.

ಇಷ್ಟಾದರೂ ಸುರೇಂದ್ರನ್‌ ಅವರ ಬಳಿ ಇದ್ದ ಓದಬೇಕು ಎಂಬ ಉತ್ಕಟ ಬಯಕೆ ನಿಲ್ಲಲಿಲ್ಲ. ಕೊನೆಗೆ ಗೆಳೆಯರು, ಉದ್ಯಮಿಗಳ ಬಳಿ ಹಣಕಾಸು ನೆರವು ಪಡೆದು ಕಲ್ಲಿಕೋಟೆ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಎಲ್‌ಎಲ್‌.ಬಿ ಪಡೆದರು. 1995ರಲ್ಲಿ ಪದವಿ ಪಡೆದ ಸುರೇಂದ್ರನ್‌ 1996ರಲ್ಲಿ ಕೇರಳದ ಹೊಸದುರ್ಗದಲ್ಲಿ ವಕೀಲ ವೃತ್ತಿ ಆರಂಭಿಸಿದರು. ಕುಟುಂಬದ ಕಷ್ಟಗಳೆಲ್ಲ ಕಳೆದು, ಬದುಕು ಹಾದಿಗೆ ಬಂದ ಬಳಿಕ ಅವರು 2007ರಲ್ಲಿ ಪತ್ನಿ ಜತೆ ಅಮೆರಿಕಕ್ಕೆ ತೆರಳಿದರು. ಅಲ್ಲಿಯೂ ವಕೀಲ ವೃತ್ತಿ ಮುಂದುವರಿಸಿದರು. ಈಗ ಅವರು ಜಡ್ಜ್‌ ಆಗಿ ನೇಮಕಗೊಂಡಿದ್ದಾರೆ.

ನಮಗೆ ನಾವೇ ಶಿಲ್ಪಿ ಎಂದ ಸುರೇಂದ್ರನ್‌
ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ಸುರೇಂದ್ರನ್‌ ಮಾತನಾಡಿದ್ದಾರೆ. “ನಾನು ದಿನಗೂಲಿಗಾಗಿ ಬೀಡಿ ಕಟ್ಟುವಾಗಲೇ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಶಪಥ ಮಾಡಿದೆ. ಕಷ್ಟಪಟ್ಟು ಓದಿದೆ. ಭಾರತದಲ್ಲಿ ಕಾನೂನು ವೃತ್ತಿ ಆರಂಭಿಸಿದ್ದು ಅಮೆರಿಕದಲ್ಲೂ ನೆರವಿಗೆ ಬಂತು. ಅವಿರತ ಶ್ರಮದಿಂದ ಇಂತಹ ಹುದ್ದೆ ತಲುಪಿದ್ದೇನೆ. ನಮಗೆ ನಾವೇ ಶಿಲ್ಪಿಯಾಗಿ ಬದುಕಬೇಕು” ಎಂದಿದ್ದಾರೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ | ಓ ಹೆನ್ರಿಯ ಜನಪ್ರಿಯ ಕತೆಗಳು ಹುಟ್ಟಿದ್ದು ಸೆರೆಮನೆಯಲ್ಲಿ! ಸಾಧನೆ ದಾಖಲಾಗೋದು ಸಂಕಷ್ಟ ಕಾಲದಲ್ಲೇ!

Exit mobile version