Site icon Vistara News

Bangladesh Protest: ಶೇಖ್‌ ಹಸೀನಾ ರಾಜೀನಾಮೆ ಬೆನ್ನಲ್ಲೇ ರಾಜಕೀಯ ಶತ್ರು ಖಲೇದಾ ಜಿಯಾ ರಿಲೀಸ್‌ಗೆ ಆದೇಶ!

Bangladesh Protest

ಢಾಕಾ: ಬಾಂಗ್ಲಾದೇಶದಲ್ಲಿ ಕಳೆದ 15 ವರ್ಷಗಳಿಂದ ಅಧಿಕಾರದ ಗದ್ದುಗೆ ಹಿಡಿದಿದ್ದ ಶೇಖ್‌ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮೀಸಲಾತಿ ವಿಷಯಕ್ಕೆ ಸಂಬಂಧಿಸಿದ ಪ್ರತಿಭಟನೆಯು (Bangladesh Protest) ದೇಶಾದ್ಯಂತ ಹಿಂಸಾರೂಪ ತಾಳಿದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ ಶೇಖ್‌ ಹಸೀನಾ (Sheik Hasina) ಅವರು ಪ್ರಾಣಭಯದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿದ್ದಾರೆ. ಇದರ ಬೆನ್ನಲ್ಲೇ, ಶೇಖ್‌ ಹಸೀನಾ ಅವರ ರಾಜಕೀಯ ಪ್ರತಿಸ್ಪರ್ಧಿ, ಪ್ರತಿಪಕ್ಷ ನಾಯಕಿ, ಮಾಜಿ ಪ್ರಧಾನಿಯೂ ಆದ ಖಲೇದಾ ಜಿಯಾ (Khaleda Zia) ಅವರನ್ನು ಬಿಡುಗಡೆಗೆ ಆದೇಶಿಸಲಾಗಿದೆ.

ಖಲೇದಾ ಜಿಯಾ ಅವರನ್ನು ಜೈಲಿನಿಂದ ಕೂಡಲೇ ಬಿಡುಗಡೆ ಮಾಡಬೇಕು ಎಂದು ಬಾಂಗ್ಲಾದೇಶ ಅಧ್ಯಕ್ಷ ಮೊಹಮ್ಮದ್‌ ಶಹಾಬುದ್ದೀನ್‌ ಆದೇಶ ಹೊರಡಿಸಿದ್ದಾರೆ. ಬೇಗಂ ಖಲೇದಾ ಜಿಯಾ ಅವರು ಬಾಂಗ್ಲಾದೇಶದ ಪ್ರತಿಪಕ್ಷವಾದ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಕ್ಷದ (BNP) ಅಧ್ಯಕ್ಷೆಯೂ ಆಗಿದ್ದಾರೆ. ಹಾಗಾಗಿ, ಇನ್ನು ಬಾಂಗ್ಲಾದೇಶದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಲಿವೆ ಎಂದು ತಿಳಿದುಬಂದಿದೆ.

ಬೇಗಂ ಖಲೇದಾ ಜಿಯಾ ಅವರು 1991ರಲ್ಲಿ ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. ಅವರ ಪತಿ ಜಿಯಾವುರ್‌ ರೆಹಮಾನ್‌ ಅವರನ್ನು ಹತ್ಯೆಗೈದ ಬಳಿಕ ಜಿಯಾ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದಾರೆ. ಜಿಯಾವುರ್‌ ರೆಹಮಾನ್‌ ಅವರು 1977ರಿಂದ 1981ರವರೆಗೆ ಬಾಂಗ್ಲಾದೇಶದ ಅಧ್ಯಕ್ಷರಾಗಿದ್ದರು. ಇವರು ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಯ್ನು 1978ರಲ್ಲಿ ಸ್ಥಾಪಿಸಿದ್ದರು.

ಗಲಭೆ ಹಿಂದೆ ಪಾಕಿಸ್ತಾನದ ಕುತಂತ್ರ?

ಬಾಂಗ್ಲಾದೇಶದಲ್ಲಿ ಜಮಾತ್‌-ಎ-ಇಸ್ಲಾಮಿ ಎಂಬ ನಿಷೇಧಿತ ಸಂಘಟನೆಯ ವಿದ್ಯಾರ್ಥಿ ಘಟಕವಾಗಿರುವ ಛತ್ರಾ ಶಿಬಿರ್‌ ಎಂಬ ಸಂಘಟನೆಗೆ ಪಾಕಿಸ್ತಾನದ ಐಎಸ್‌ಐ ಬೆಂಬಲ ಇದೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ ವಿಮೋಚನೆ ಹೋರಾಟದ ವೇಳೆ ಭಾಗಿಯಾದವರ ಕುಟುಂಬಸ್ಥರಿಗೆ ನೀಡುವ ಮೀಸಲಾತಿಯನ್ನು ಶೇ.5ಕ್ಕೆ ಇಳಿಸಿದರೂ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರತಿಭಟನೆಯ ಹಿಂದಿರುವ ಪ್ರಮುಖ ವಿದ್ಯಾರ್ಥಿ ಸಂಘಟನೆಗಳಲ್ಲಿ ಛತ್ರಾ ಶಿಬಿರ್‌ ಎಂಬ ಸಂಘಟನೆಯ ಪಾತ್ರ ಪ್ರಮುಖವಾಗಿದೆ. ಇದಕ್ಕೆ ಪಾಕಿಸ್ತಾನವು ಹಣಕಾಸು ನೆರವು ಕೂಡ ನೀಡುತ್ತಿದೆ ಎಂದು ತಿಳಿದುಬಂದಿದೆ.

ಶೇಖ್‌ ಹಸೀನಾ ಅವರು ಕಳೆದ 15 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಆಡಳಿತ ನಡೆಸುತ್ತಿದ್ದಾರೆ. ಅವರು ರಾಷ್ಟ್ರೀಯವಾದದಲ್ಲಿ ನಂಬಿಕೆ ಇರಿಸಿರುವುದರ ಜತೆಗೆ ಜನರ ಬೆಂಬಲ ಗಳಿಸಿದ್ದಾರೆ. ಬಡತನ ಪ್ರಮಾಣವನ್ನು ಶೇ.5ಕ್ಕೆ ಇಳಿಸಿದ್ದಾರೆ. ಇದರ ಜತೆಗೆ ಭಾರತದ ಜತೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಿದ್ದಾರೆ. ಮೇಲಾಗಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇದನ್ನು ಸಹಿಸದ ಪಾಕಿಸ್ತಾನವು, ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿಯು ಅಧಿಕಾರಕ್ಕೆ ಬರಬೇಕು ಎಂಬುದು ಪಾಕಿಸ್ತಾನದ ಕುತಂತ್ರವಾಗಿದೆ. ಇದಕ್ಕಾಗಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Bangladesh Protest: ಬಾಂಗ್ಲಾದೇಶ ಹಿಂಸಾಚಾರ ಕುರಿತು ಮೋದಿ ಮಹತ್ವದ ಸಭೆ; ಚರ್ಚಿಸಿದ ವಿಷಯಗಳೇನು?

Exit mobile version