Site icon Vistara News

Khalistan Terror: ಇಟಲಿಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿದ ಖಲಿಸ್ತಾನಿಗಳು

Khalistan Terror

Khalistan Terror

ನವದೆಹಲಿ: ಖಲಿಸ್ತಾನ್ ಪರ​ ಉಗ್ರರ (Khalistan Terror) ಅಟ್ಟಹಾಸ ಎಲ್ಲೆ ಮೀರಿದೆ. ಇಟಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲು ನಿರ್ಧರಿಸಿದ್ದ ಮಹಾತ್ಮ ಗಾಂಧೀಜಿ (Mahatma Gandhi) ಅವರ ಪ್ರತಿಮೆಯನ್ನು ಖಲಿಸ್ತಾನಿ ಪರ ಕಾರ್ಯಕರ್ತರು ಧ್ವಂಸಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಿ-5 ರಾಷ್ಟ್ರಗಳ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಗೆ ಭೇಟಿ ನೀಡಬೇಕಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ.

ಜತೆಗೆ ಖಲಿಸ್ತಾನಿ ಭಯೋತ್ಪಾದಕರು ಪ್ರತಿಮೆಯ ತಳಭಾಗದಲ್ಲಿ ಗೀಚಿ ವಿರೂಪಗೊಳಿಸಿದ್ದಾರೆ. ಇದರಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಘಟನೆಯನ್ನು ಭಾರತ ಸರ್ಕಾರವು ತೀವ್ರವಾಗಿ ಖಂಡಿಸಿದ್ದು, ಇಟಲಿ ಪ್ರಧಾನ ಮಂತ್ರಿ ಜಾರ್ಜಿಯಾ ಮೆಲೊನಿ ಅವರಿಗೆ ತನ್ನ ಅಸಮಾಧಾನವನ್ನು ತಿಳಿಸಿದೆ. ಇದರಿಂದ ಎಚ್ಚೆತ್ತಿರುವ ಅಲ್ಲಿನ ಸರ್ಕಾರ, ಗಾಂಧೀಜಿ ಪ್ರತಿಮೆಯನ್ನು ಸರಿಪಡಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.

ಭಾರತದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಈ ಬಗ್ಗೆ ಮಾತನಾಡಿ, “ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ದುರದೃಷ್ಟಕರ. ಈ ವಿಷಯದ ಬಗ್ಗೆ ನಾವು ಇಟಲಿಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆʼʼ ಎಂದು ತಿಳಿಸಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಇಟಲಿಯ ಭಾರತದ ರಾಯಭಾರಿ ವಾಣಿ ರಾವ್, “ದಕ್ಷಿಣ ಇಟಲಿಯ ಬ್ರಿಂಡಿಸಿ ಎಂಬ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಪ್ರತಿಮೆಯ ಪೀಠವನ್ನು ಸ್ವಚ್ಛಗೊಳಿಸಲು ಇಟಲಿಯ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಾವು ನಮ್ಮ ಕಳವಳಗಳನ್ನು ತಕ್ಷಣವೇ ಅವರೊಂದಿಗೆ ಹಂಚಿಕೊಂಡಿದ್ದೇವೆ. ಇದಕ್ಕೆ ಕಾರಣರಾದವರನ್ನು ಪತ್ತೆಹಚ್ಚಲು ಮತ್ತು ಸ್ಥಳೀಯ ಕಾನೂನಿನ ಅಡಿಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ವಿನಂತಿಸಿದ್ದೇವೆ” ಎಂದು ಅವರು ವಿವರಿಸಿದ್ದಾರೆ.

ಜಿ 7 ವಾರ್ಷಿಕ ಶೃಂಗಸಭೆಯಲ್ಲಿ (Summit of G7 advanced economies) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು (ಜೂನ್‌ 13) ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ವಿದೇಶಾಂಗ ಕಾರ್ಯದರ್ಶಿ ವಿನಯ್ ಅವರನ್ನು ಒಳಗೊಂಡಿರುವ ಉನ್ನತ ಮಟ್ಟದ ನಿಯೋಗವು ಪ್ರಧಾನಿ ಅವರೊಂದಿಗೆ ಇರಲಿದೆ. ಸಭೆ ಮುಗಿಸಿ ಜೂನ್ 14ರಂದು ಸಂಜೆಯ ವೇಳೆಗೆ ಮೋದಿ ಅವರು ಹಿಂತಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: khalistan Movement : ಲಂಡನ್​ ಭಾರತ ಹೈಕಮಿಷನ್​ ಮೇಲೆ ದಾಳಿ ಮಾಡಿದ್ದ ಖಲಿಸ್ತಾನಿ ಉಗ್ರ ಎನ್​ಐಎ ವಶಕ್ಕೆ

ಜೂನ್ 13ರಿಂದ 15ರವರೆಗೆ ಇಟಲಿಯ ಅಪುಲಿಯಾದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯು ಉಕ್ರೇನ್‌ನಲ್ಲಿ ಉಲ್ಬಣಗೊಳ್ಳುತ್ತಿರುವ ಯುದ್ಧ ಮತ್ತು ಗಾಜಾದಲ್ಲಿನ ಸಂಘರ್ಷದ ಬಗ್ಗೆ ತೀವ್ರ ಚರ್ಚೆ ನಡೆಯುವ ಸಾಧ್ಯತೆ ಇದೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾದ ಆಕ್ರಮಣದ ಕುರಿತು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

Exit mobile version