Site icon Vistara News

Khalistani Terrorist: 2 ಕಾರುಗಳಲ್ಲಿ ಆಗಮಿಸಿದ ಶಸ್ತ್ರಧಾರಿಗಳಿಂದ ಹರ್ದೀಪ್‌ ಸಿಂಗ್‌ ನಿಜ್ಜರ್‌ನ ಹತ್ಯೆ; ವಿಡಿಯೊ ಇಲ್ಲಿದೆ

Hardeep Singh Nijjar

Hardeep Singh Nijjar

ನವದೆಹಲಿ: ಕಳೆದ ವರ್ಷ ಕೆನಡಾದ ಸುರ‍್ರೆ ನಗರದಲ್ಲಿ ಖಲಿಸ್ತಾನಿ ಉಗ್ರ (Khalistani Terrorist) ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar)ನನ್ನು ಹತ್ಯೆ ಮಾಡಲಾಗಿದ್ದು, ಇದರ ವಿಡಿಯೊ ಈಗ ಹೊರ ಬಂದಿದೆ. ನಿಜ್ಜರ್‌ನನ್ನು ಸಶಸ್ತ್ರ ವ್ಯಕ್ತಿಗಳು ಗುಂಡಿಕ್ಕಿ ಕೊಲ್ಲುವುದನ್ನು ವಿಡಿಯೊದಲ್ಲಿ ಸೆರೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. 2020ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency)ಯಿಂದ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ ನಿಜ್ಜರ್‌ನನ್ನು 2023ರ ಜೂನ್ 18ರ ಸಂಜೆ ಬ್ರಿಟಿಷ್ ಕೊಲಂಬಿಯಾದ ಸುರ‍್ರೆ ನಗರದ ಗುರುನಾನಕ್‌ ಸಿಖ್‌ ಗುರುದ್ವಾರದ ಬಳಿ ಗುಂಡಿಕ್ಕಿ ಕೊಲ್ಲಲಾಗಿತ್ತು.

2 ಕಾರುಗಳಲ್ಲಿ ಬಂದಿದ್ದ ಸಶಸ್ತ್ರ ವ್ಯಕ್ತಿಗಳು

ದಾಳಿಗೂ ಮುನ್ನ 2 ವಾಹನಗಳಲ್ಲಿ 6 ಮಂದಿ ದುಷ್ಕರ್ಮಿಗಳು ಆಗಮಿಸಿದ್ದರು. ಇವರು ಪಕ್ಕಾ ಪ್ಲ್ಯಾನ್‌ ಮಾಡಿಯೇ ಬಂದಿದ್ದರು ಎಂದು ಮೂಲಗಳು ತಿಳಿಸಿವೆ. ಹರ್ದೀಪ್ ಸಿಂಗ್ ನಿಜ್ಜರ್ ತನ್ನ ಬೂದು ಬಣ್ಣದ ಡಾಡ್ಜ್ ರಾಮ್ ಪಿಕಪ್ ಟ್ರಕ್‌ನಲ್ಲಿ ಗುರುದ್ವಾರ ಪಾರ್ಕಿಂಗ್ ಸ್ಥಳದಿಂದ ಹೊರಡುವುದು ವಿಡಿಯೊದಲ್ಲಿ ಸೆರೆಯಾಗಿದೆ. ಹರ್ದೀಪ್ ಸಿಂಗ್ ನಿರ್ಗಮನದ ದ್ವಾರವನ್ನು ಸಮೀಪಿಸುತ್ತಿದ್ದಂತೆ ಆತನ ಮುಂದೆ ಬಿಳಿ ಸೆಡಾನ್ ಬಂದು ನಿಲ್ಲುತ್ತದೆ. ಬಳಿಕ ಇಬ್ಬರು ಓಡಿ ಬಂದು ಹರ್ದೀಪ್ ಸಿಂಗ್‌ಗೆ ಶೂಟ್‌ ಮಾಡಿ ನಂತರ ಪರಾರಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.

ಗುಂಡಿನ ದಾಳಿಯ ಶಬ್ದ ಕೇಳಿ ಹತ್ತಿರದ ಮೈದಾನದಲ್ಲಿ ಫುಟ್‌ಬಾಲ್ ಆಡುತ್ತಿದ್ದ ಇಬ್ಬರು ಓಡಿ ಬಂದಿದ್ದರು. ಅವರು ದಾಳಿಕೋರರನ್ನು ಬೆನ್ನಟ್ಟಲು ಪ್ರಯತ್ನಿಸಿದ್ದರು ಎನ್ನಲಾಗಿದೆ. ಪ್ರತ್ಯಕ್ಷದರ್ಶಿ ಭೂಪಿಂದರ್ಜಿತ್ ಸಿಂಗ್ ಸಿಧು ಈ ಬಗ್ಗೆ ಮಾತನಾಡಿ, ʼʼಸದ್ದು ಕೇಳಿದ ತಕ್ಷಣ ನಾವು ಅತ್ತ ಕಡೆಗೆ ತೆರಳಿದೆವು. ಈ ವೇಳೆ ದಾಳಿ ನಡೆಸಿದ ಇಬ್ಬರು ಓಡುತ್ತಿರುವುದನ್ನು ನೋಡಿದೆವು. ನಾನು ತಕ್ಷಣ ನಿಜ್ಜರ್‌ ಸಹಾಯಕ್ಕೆ ಧಾವಿಸಿದೆ ಮತ್ತು ಸ್ನೇಹಿತರಿಗೆ ದಾಳಿಕೋರರನ್ನು ಹಿಂಬಾಲಿಸಲು ಸೂಚಿಸಿದೆ. ನಾನು ಪರಿಶೀಲಸುವ ವೇಳೆ ನಿಜ್ಜರ್‌ ಸಂಪೂರ್ಣವಾಗಿ ಪ್ರಜ್ಞಾಹೀನರಾಗಿದ್ದರು. ಉಸಿರಾಟವೂ ನಿಂತಿತ್ತುʼʼ ಎಂದು ತಿಳಿಸಿದ್ದಾರೆ.

ಘಟನೆ ನಡೆದು ಸುಮಾರು 9 ತಿಂಗಳು ಕಳೆದಿದ್ದು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (Royal Canadian Mounted Police) ಇನ್ನೂ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆ ಶಂಕಿತರ ಹೆಸರನ್ನು ಹೇಳಿಲ್ಲ ಮತ್ತು ಯಾರನ್ನೂ ಬಂಧಿಸಿಲ್ಲ. ಖಲಿಸ್ತಾನ್‌ ಟೈಗರ್‌ ಫೋರ್ಸ್‌ (KTF) ಉಗ್ರ ಸಂಘಟನೆಯ ಮುಖ್ಯಸ್ಥನಾಗಿರುವ ಈತ ಪ್ರತ್ಯೇಕವಾದಿಗಳಿಗೆ ಹೆಚ್ಚಿನ ನೆರವು ಒದಗಿಸುತ್ತಿದ್ದ. ಭಾರತದಲ್ಲಿ ಹಲವು ಉಗ್ರ ಚಟುವಟಿಕೆಗಳ ಹಿಂದೆ ಈತನ ಕೈವಾಡವಿದೆ. ಕೆನಡಾದಲ್ಲೂ ಸಿಖ್‌ ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದ. ಹಾಗಾಗಿ ಈತನು ಸೇರಿ ಸುಮಾರು 40 ಉಗ್ರರನ್ನು ಭಾರತವು ಮೋಸ್ಟ್‌ ವಾಂಟೆಡ್‌ ಉಗ್ರರ ಪಟ್ಟಿಗೆ ಸೇರಿಸಿದೆ.

ಇದನ್ನೂ ಓದಿ: Nijjar Killing: ಭಾರತ ವಿರುದ್ಧ ಪಾಕ್ ಕುತಂತ್ರ; ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆ ಹಿಂದೆ ಐಎಸ್‌ಐ ಕೈವಾಡ

ರಾಜತಾಂತ್ರಿಕ ಬಿಕ್ಕಟ್ಟು

ನಿಜ್ಜರ್ ಹತ್ಯೆ ಭಾರತ ಮತ್ತು ಕೆನಡಾ ನಡುವೆ ಭಾರೀ ರಾಜತಾಂತ್ರಿಕ ಬಿಕ್ಕಟ್ಟು ಹುಟ್ಟು ಹಾಕಿದೆ. ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಏಜೆಂಟರ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಆರೋಪ ಹೊರಿಸಿದ್ದು, ಎರಡು ದೇಶಗಳ ನಡುವಿನ ಸಂಬಂಧದ ಮತ್ತಷ್ಟು ಬಿರುಕಿಗೆ ಕಾರಣವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version