Site icon Vistara News

King Charles | ಕೆಂಪು ಪೆಟ್ಟಿಗೆಯ ಕಡತಗಳಿಗೆ ಸಹಿ ಮಾಡಲು ರೆಡಿ; ಬ್ರಿಟನ್​ ರಾಜನ ಹೊಸ ಫೋಟೋ ವೈರಲ್​

King Charles pictured Released By Buckingham Palace

ಬ್ರಿಟನ್​ ರಾಣಿ 2ನೇ ಎಲಿಜಬೆತ್​ ನಿಧನದ ಬಳಿಕ ರಾಜನ ಪಟ್ಟಕ್ಕೇರಿದ ಕಿಂಗ್​ ಚಾರ್ಲ್ಸ್​ ಅವರು ತಮ್ಮ ಹುದ್ದೆಯ ಜವಾಬ್ದಾರಿ ನಿಭಾಯಿಸುತ್ತಿರುವ ಮೊದಲ ಫೋಟೋವನ್ನು ಬಕಿಂಗ್​ಹ್ಯಾಮ್ ಅರಮನೆ ಬಿಡುಗಡೆ ಮಾಡಿದೆ. ‘ಕುರ್ಚಿಯ ಮೇಲೆ ಕುಳಿತ ಅವರ ಎದುರಿನ ಟೇಬಲ್​ ಮೇಲೆ ಪುಸ್ತಕ ಮತ್ತಿತರ ವಸ್ತುಗಳಿದ್ದರೆ, ಪಕ್ಕದಲ್ಲಿ ಒಂದು ಕೆಂಪು ಪೆಟ್ಟಿಗೆ ಇದೆ. ಅದರಲ್ಲಿ ಒಂದಷ್ಟು ದಾಖಲೆಗಳಿವೆ. ಆ ಪೆಟ್ಟಿಗೆಯ ಮೇಲೆ ಕಿಂಗ್​ ಚಾರ್ಲ್ಸ್​ ಕೈ ಇಟ್ಟಿದ್ದಾರೆ ಮತ್ತು ಅದನ್ನೇ ನೋಡುತ್ತಿದ್ದಾರೆ. ಅವರು ಕ್ಯಾಮರಾದತ್ತ ನೋಡಿ ಪೋಸ್​ ಕೊಟ್ಟಿಲ್ಲ’. ಈ ಕೆಂಪು ಪೆಟ್ಟಿಗೆ ಎಂದರೆ ಮತ್ತೇನಲ್ಲ, ಬ್ರಿಟನ್​ನಲ್ಲಿ ಸರ್ಕಾರಕ್ಕೆ ಸಂಬಂಧಪಟ್ಟ ಪ್ರಮುಖ ದಾಖಲೆಗಳನ್ನು ಒಯ್ಯಲು ಬಳಸುವ ಬಾಕ್ಸ್​.

ಹೀಗೆ ಕೆಂಪು ಪೆಟ್ಟಿಗೆಯಲ್ಲಿ ಹಲವು ದಾಖಲೆಗಳನ್ನು ಇಟ್ಟುಕೊಂಡು ಕುಳಿತಿರುವ ಚಾರ್ಲ್ಸ್​ ಪೋಟೋ ನೋಡಿದರೆ, ‘ಅವರು ರಾಜನಾಗಿ ತಮ್ಮ ಕರ್ತವ್ಯ ನಿಭಾಯಿಸಲು ಪ್ರಾರಂಭಿಸಿದ್ದಾರೆ. ಕಡತಗಳಿಗೆ ಸಹಿ ಹಾಕಲು ಶುರು ಮಾಡಿದ್ದಾರೆ. ಬ್ರಿಟನ್​​ನಲ್ಲೀಗ ರಾಜನ ಆಡಳಿತ ಆರಂಭವಾಗಿದೆ’ ಎಂಬುದು ಸ್ಪಷ್ಟವಾಗುತ್ತದೆ. ಹಾಗೇ, 18ನೇ ಶತಮಾನದಲ್ಲಿ ಕಟ್ಟಲ್ಪಟ್ಟ ಆ ಕೋಣೆಯ ರಾಯಲ್​ ಲುಕ್​ ಹೇಗಿದೆ ಎಂಬುದನ್ನೂ ಫೋಟೋದಲ್ಲಿ ನೋಡಬಹುದು. ಹಾಗೇ, ಫೋಟೋದಲ್ಲಿ ಕಿಂಗ್ ಚಾರ್ಲ್ಸ್ ಕಪ್ಪು ಟೈ ಕಟ್ಟಿರುವುದು ಕಾಣುತ್ತದೆ. ಇದು ತಮ್ಮ ತಾಯಿ ಕ್ವೀನ್​ ಎಲಿಜಿಬೆತ್​​ ಮರಣಕ್ಕೆ ಶೋಕ ಸೂಚಕ ಎನ್ನಲಾಗಿದೆ.

70 ವರ್ಷಗಳಷ್ಟು ಸುದೀರ್ಘ ಅವಧಿಗೆ ಬ್ರಿಟನ್​ ಆಳಿದ ರಾಣಿ ಎಲಿಜಿಬೆತ್​ ತಮ್ಮ 96ನೇ ವಯಸ್ಸಿನಲ್ಲಿ ಮೃತಪಟ್ಟ ನಂತರ ಅವರ ಹಿರಿಯ ಪುತ್ರ ಕಿಂಗ್‌ ಚಾರ್ಲ್ಸ್‌ III (73) (King Charles III) ಅವರನ್ನು ಆಯ್ಕೆ ಮಾಡಲಾಗಿದೆ. ರಾಜನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮಾತನಾಡಿದ್ದ ಅವರು ,‘ರಾಣಿ ಹೇಗೆ ದೇಶಕ್ಕಾಗಿ ಸರ್ವಸ್ವವನ್ನೂ ಸಮರ್ಪಿಸಿಕೊಂಡಿದ್ದರೋ ನಾನು ಅದೇ ಹಾದಿಯಲ್ಲಿ ನಡೆಯುತ್ತೇನೆ. ದೇವರು ನನಗೆ ಎಷ್ಟು ಕಾಲ ಅನುಗ್ರಹ ಕೊಡುತ್ತಾನೊ ಅಷ್ಟು ಕಾಲ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇನೆ. ನೀವು ಯನೈಟೆಡ್‌ ಕಿಂಗ್‌ಡಮ್‌ನ ಎಲ್ಲೇ ವಾಸವಿದ್ದರೂ, ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನಿಮ್ಮ ಹಿನ್ನೆಲೆ ಏನೇ ಆಗಿದ್ದರೂ, ಪ್ರೀತಿ, ಆದರದಿಂದ ನಿಮ್ಮ ಸೇವೆಗೈಯುತ್ತೇನೆ’ ಎಂದಿದ್ದರು.

ಇದನ್ನೂ ಓದಿ: Queen Elizabeth | ದೇಶವೇ ನನ್ನುಸಿರು; ದೊರೆಯ ಪಟ್ಟ ದೊರೆತ ನಂತರ ಚಾರ್ಲ್ಸ್‌ III ಚೊಚ್ಚಲ ಭಾಷಣ

Exit mobile version