ಲಂಡನ್: ಬ್ರಿಟನ್ನಲ್ಲಿ 70ವರ್ಷಗಳಿಂದ ರಾಣಿ ಪಟ್ಟದಲ್ಲಿದ್ದ ಕ್ವೀನ್ ಎಲಿಜಬೆತ್ ಗುರುವಾರ ಮೃತಪಟ್ಟಿದ್ದಾರೆ. ಕಳೆದ ಅಕ್ಟೋಬರ್ನಿಂದಲೂ ವಯೋಸಹಜ ಕಾಯಿಲೆಗಳಿಂದ ತೀವ್ರವಾಗಿ ಬಳಲುತ್ತಿದ್ದ ಅವರು ಸ್ಕಾಟ್ಲೆಂಡ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಮಧ್ಯಾಹ್ನದ ವೇಳೆ ರಾಣಿ ಆರೋಗ್ಯ ಹದಗೆಟ್ಟಿದೆ ಎಂಬ ವರದಿ ಬಂದಿತ್ತು. ನಂತರ ಸಂಜೆಯ ಹೊತ್ತಿಗೆ ಕ್ವೀನ್ ಎಲಿಜಬೆತ್ ಇನ್ನಿಲ್ಲ ಎಂಬುದನ್ನು ಲಂಡನ್ನ ಬಕಿಂಗ್ಹ್ಯಾಮ್ ಅರಮನೆ ಮೂಲಗಳು ದೃಢಪಡಿಸಿದವು. ಇದೀಗ ಅವರ ಹಿರಿಯ ಪುತ್ರ ಪ್ರಿನ್ಸ್ ಚಾರ್ಲ್ಸ್ ಬ್ರಿಟನ್ ರಾಜನಾಗಿದ್ದಾರೆ.
ಇಷ್ಟೆಲ್ಲದರ ಮಧ್ಯೆ ಕುತೂಹಲ ಮೂಡಿಸಿರುವುದು ‘ಕೊಹಿನೂರು ವಜ್ರ’. ಇಷ್ಟು ದಿನ ಬ್ರಿಟನ್ ರಾಣಿ ಕ್ವೀನ್ ಎಲಿಜಬೆತ್ ಕಿರೀಟದಲ್ಲಿದ್ದ, ಭಾರತ ಮೂಲದ ಈ ಅತ್ಯಮೂಲ್ಯ ವಜ್ರ ಏನಾಗಲಿದೆ? ವಜ್ರ ಇರುವ ಕಿರೀಟದ ಹಕ್ಕನ್ನು ಯಾರು ಹೊಂದುತ್ತಾರೆ? ಎಂಬ ಚರ್ಚೆ ಪ್ರಾರಂಭವಾಗಿದೆ.
ಈ ವರ್ಷದ ಪ್ರಾರಂಭದಲ್ಲಿ ತಮ್ಮ ಪುತ್ರ ಪ್ರಿನ್ಸ್ ಚಾರ್ಲ್ಸ್ ಪತ್ನಿ ಕ್ಯಾಮಿಲ್ಲಾರನ್ನು ಡಚ್ಚಸ್ ಆಫ್ ಕಾರ್ನ್ವಾಲ್ ಎಂದು ಘೋಷಿಸಿದ್ದರು ಬ್ರಿಟನ್ ರಾಣಿ ಎಲಿಜಬೆತ್ II. ಹಾಗೇ, ಈಗ ಪ್ರಿನ್ಸ್ ಚಾರ್ಲ್ಸ್ ರಾಜನಾದರೆ ಕ್ಯಾಮಿಲ್ಲಾರೇ ಕ್ವೀನ್ ಆಫ್ ಕಾನ್ಸಾರ್ಟ್ ಆಗುತ್ತಾರೆ (ರಾಜನ ಪತ್ನಿ). ಹೀಗಾಗಿ ಕೊಹಿನೂರ್ ವಜ್ರವುಳ್ಳು ಕಿರೀಟದ ಹಕ್ಕೂ ಸಹಜವಾಗಿಯೇ ಕ್ಯಾಮಿಲ್ಲಾ ಪಾಲಾಗುತ್ತದೆ.
105.6 ಕ್ಯಾರೆಟ್ ಡೈಮಂಡ್ವುಳ್ಳ ಕೊಹಿನೂರ್ ವಜ್ರ ಇತಿಹಾಸ ಪ್ರಸಿದ್ಧ. 14ನೇ ಶತಮಾನದಲ್ಲಿ ಭಾರತದಲ್ಲಿ ಸಿಕ್ಕ ಅತ್ಯಮೂಲ್ಯ ವಜ್ರ. ಆದರೆ 1849ರಲ್ಲಿ ಬ್ರಿಟಿಷರು ಭಾರತದ ಪಂಜಾಬ್ನ್ನು ವಶಪಡಿಸಿಕೊಂಡ ನಂತರ ಈ ವಜ್ರ ಅಂದಿನ ರಾಣಿ ವಿಕ್ಟೋರಿಯಾ ಪಾಲಾಯಿತು. ಆಗಿನಿಂದಲೂ ಬ್ರಿಟಿಷ್ ರಾಜಮನೆತನದ ಕಿರೀಟದಲ್ಲಿಯೇ ಇದೆ. ಕೊಹಿನೂರ್ ವಜ್ರ ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಇಂದಿಗೂ ಹಲವು ರೀತಿಯ ವಾದಗಳು ಇದ್ದು, ವಿವಾದಗಳು ಅಸ್ತಿತ್ವದಲ್ಲಿವೆ.
ಇದನ್ನೂ ಓದಿ: King Charles III | ಕ್ವೀನ್ ಎಲಿಜಬೆತ್ ಉತ್ತರಾಧಿಕಾರಿಯಾಗಿ ಚಾರ್ಲ್ಸ್ ಆಯ್ಕೆ