ಕಾಠ್ಮಂಡು: ನೇಪಾಳದ ಪ್ರಧಾನಿಯಾಗಿ ಆಯ್ಕೆಯಾದ ಕೆ.ಪಿ.ಶರ್ಮ ಒಲಿ (KP Sharma Oli) ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅಭಿನಂದನೆ ಸಲ್ಲಿಸಿದ್ದಾರೆ. ಎರಡು ದೇಶಗಳ ಸಂಬಂಧವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಜತೆಯಾಗಿ ಕಾರ್ಯ ನಿರ್ವಹಿಸಲು ಎದುರು ನೋಡುತ್ತಿರುವುದಾಗಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಮೋದಿ ಅವರು, ʼʼನೇಪಾಳದ ಪ್ರಧಾನ ಮಂತ್ರಿಯಾಗಿ ನೇಮಕವಾದ ಕೆ.ಪಿ.ಶರ್ಮ ಒಲಿ ಅವರಿಗೆ ಅಭಿನಂದನೆಗಳು. ನಮ್ಮ ಎರಡೂ ದೇಶಗಳ ನಡುವಿನ ಸ್ನೇಹದ ಆಳವಾದ ಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ನಮ್ಮ ಜನರ ಪ್ರಗತಿ ಮತ್ತು ಸಮೃದ್ಧಿಗಾಗಿ ಪರಸ್ಪರ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆʼʼ ಎಂದು ಹೇಳಿದ್ದಾರೆ.
Congratulations @kpsharmaoli on your appointment as the Prime Minister of Nepal. Look forward to working closely to further strengthen the deep bonds of friendship between our two countries and to further expand our mutually beneficial cooperation for the progress and prosperity…
— Narendra Modi (@narendramodi) July 15, 2024
ಶುಕ್ರವಾರ ನಡೆದ ವಿಶ್ವಾಸಮತ ಯಾಚನೆಯ ವೇಳೆ ಪುಷ್ಪ ಕಮಲ್ ದಹಲ್ ಪ್ರಚಂಡ ಅವರು ಬಹುಮತ ಸಾಬೀತುಪಡಿಸಲು ವಿಫಲರಾಗಿ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದರು. ಹೀಗಾಗಿ ಸಿಪಿಎನ್-ಯುಎಂಎಲ್ (Nepal-Unified Marxist Leninist (CPN-UML) ಪಕ್ಷದ ಅಧ್ಯಕ್ಷ, 72 ವರ್ಷದ ಕೆ.ಪಿ.ಶರ್ಮ ಒಲಿ ಪ್ರಧಾನಿಯಾಗಿ ನೇಮಕಗೊಂಡರು. ಈ ಹಿಂದೆ ಅವರು 2015ರ ಅಕ್ಟೋಬರ್ 11ರಿಂದ 2016ರ ಆಗಸ್ಟ್ 3ರವರೆಗೆ, 2018ರ ಫೆಬ್ರವರಿ 5ರಿಂದ 2021ರ ಜುಲೈ 13ರವರೆಗೆ ಕೆ.ಪಿ.ಶರ್ಮಾ ಒಲಿ ನೇಪಾಳದ ಪ್ರಧಾನ ಮಂತ್ರಿಯಾಗಿದ್ದರು. ಒಲಿ ಅವರು ಚೀನಾ ಪರ ಒಲವು ಹೊಂದಿದ್ದಾರೆ.
KP Sharma Oli sworn in as Prime Minister of Nepal for the fourth time
— ANI (@ANI) July 15, 2024
(file pic) pic.twitter.com/avl8QcZ0fJ
ಇತರ ಚಿಕ್ಕ ಪುಟ್ಟ ಪಕ್ಷಗಳಾದ ರಾಷ್ಟ್ರೀಯ ಪ್ರಜಾತಂತ್ರ ಪಾರ್ಟಿ, ಜನತಾ ಸಮಾಜವಾದಿ ಪಾರ್ಟಿ ನೇಪಾಳ, ಲೋಕತಾಂತ್ರಿಕ ಸಮಾಜವಾದಿ ಪಾರ್ಟಿ, ಜನಮತ ಪಾರ್ಟಿ ಮತ್ತು ನಾಗರಿಕ ಉನ್‌ಮುಕ್ತಿ ಪಾರ್ಟಿ ಹೊಸ ಸರ್ಕಾರಕ್ಕೆ ಬೆಂಬಲ ಸೂಚಿಸುವ ಸಾಧ್ಯತೆ ಇದೆ. ರಾಷ್ಟ್ರಪತಿ ಭವನದ ಮುಖ್ಯ ಕಟ್ಟಡವಾದ ಶೀತಲ್ ನಿವಾಸದಲ್ಲಿ ಸೋಮವಾರ (ಜುಲೈ 15) ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು.
ಪ್ರಚಂಡ ಅವರ ವಿಶ್ವಾಸಮತ ಸೋತ ಬೆನ್ನಲ್ಲೇ ಒಲಿ ಅವರು 165 ಬೆಂಬಲ ಪತ್ರವನ್ನು ಸಲ್ಲಿಸಿದ್ದರು. ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ್-ಯುನಿಫೈಡ್ ಮಾರ್ಕಿಸ್ಟ್ ಲೆನಿನಿಸ್ಟ್‌ನ 77 ಸಂಸದರು ಮತ್ತು ನೇಪಾಳಿ ಕಾಂಗ್ರೆಸ್‌ನ 88 ಸಂಸದರು ಒಲಿ ಅವರನ್ನು ಬೆಂಬಲಿಸಿದ್ದಾರೆ ಎಂದು ರಾಷ್ಟ್ರಪತಿ ರಾಮ್ ಚಂದ್ರ ಪೌಡೆಲ್ ತಿಳಿಸಿದ್ದಾರೆ.
ಇದನ್ನೂ ಓದಿ: Ram Mandir: ನೇಪಾಳದ ಸೀತೆಯ ಮನೆಯಿಂದ ರಾಮಮಂದಿರಕ್ಕೆ 3 ಸಾವಿರ ಉಡುಗೊರೆ!
ಚೀನಾ ಪರ ಒಲವು
ಕೆಲವು ಮಾಧ್ಯಮಗಳ ವರದಿಯ ಪ್ರಕಾರ ನೇಪಾಳದ ಹೊಸ ಸಂವಿಧಾನದ ಬಗ್ಗೆ 2015ರಲ್ಲಿ ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆ ಭುಗಿಲೆದ್ದ ಸಮಯದಲ್ಲಿ ಒಲಿ ಭಾರತದ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿದ್ದರು. ಅವರ ಸರ್ಕಾರವು ಚೀನಾದೊಂದಿಗಿನ ಸಂಬಂಧಗಳನ್ನು ಬಲಪಡಿಸಿತ್ತು ಮತ್ತು ಉತ್ತರಾಖಂಡದ ಲಿಪುಲೆಖ್, ಕಾಲಾಪಾನಿ ಮತ್ತು ಲಿಂಪಿಯಾಧುರಾವನ್ನು ನೇಪಾಳದ ಭೂಪ್ರದೇಶದ ಭಾಗವೆಂದು ಪ್ರತಿಪಾದಿಸುವ ನವೀಕರಿಸಿದ ನಕ್ಷೆಯನ್ನು ಪ್ರಕಟಿಸಿ ವಿವಾದ ಹುಟ್ಟು ಹಾಕಿತ್ತು. ಆಗಲೇ ತಿರುಗೇಟು ನೀಡಿದ ಭಾರತವು ಈ ಹೇಳಿಕೆಯನ್ನು ಏಕಪಕ್ಷೀಯ ಎಂದು ತಿರಸ್ಕರಿಸಿತ್ತು ಮತ್ತು ನಂತರ ಉಭಯ ದೇಶಗಳು ಮಾತುಕತೆಯಲ್ಲಿ ತೊಡಗಿದ್ದವು.