ಬೀಜಿಂಗ್: ಚೀನಾದ ನೈಋತ್ಯ ಪ್ರಾಂತ್ಯದ ಯುನ್ನಾನ್ (Yunnan) ಪರ್ವತ ಬಳಿಯ ಗೈಝೌನಲ್ಲಿ ಭೂ ಕುಸಿತ (Landslide) ಸಂಭವಿಸಿದ್ದು, ಕನಿಷ್ಠ 47 ಮಂದಿ ಮೃತಪಟ್ಟಿದ್ದಾರೆ. ಅವಘಡದಿಂದ 18 ಮನೆಗಳು ಸಂಪೂರ್ಣ ನಾಶವಾಗಿದ್ದು, 200 ಜನರನ್ನು ಸ್ಥಳಾಂತರಿಸಲಾಗಿದೆ. ಇನ್ನೂ ಸಾಕಷ್ಟು ಮಂದಿ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕಾರಣ ಏನು?
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಮಣ್ಣು ಮೆತ್ತಗಾಗಿದ್ದು ಭೂಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಸಮರೋಪಾದಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಚೀನಾ ಸರ್ಕಾರ ಸುಮಾರು 1,000 ರಕ್ಷಣಾ ಕಾರ್ಯಕರ್ತರು ಮತ್ತು ಸುಮಾರು 200 ರಕ್ಷಣಾ ವಾಹನಗಳನ್ನು ಘಟನಾ ಸ್ಥಳಕ್ಕೆ ಕಳುಹಿಸಿದೆ ಎಂದು ವರದಿ ತಿಳಿಸಿದೆ. ಚೀನಾದ ಉಪ ಪ್ರಧಾನಿ ಜಾಂಗ್ ಗುವೊಕಿಂಗ್ ರಕ್ಷಣಾ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
“ಪರ್ವತವು ಕುಸಿದಿದೆ. ಅನೇಕ ಮಂದಿ ಮಣ್ಣಿನಡಿಯಲ್ಲಿ ಸಮಾಧಿಯಾಗಿದ್ದಾರೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. “ಎಲ್ಲರೂ ತಮ್ಮ ಮನೆಗಳಲ್ಲಿ ಮಲಗಿದ್ದಾಗ ಈ ದುರಂತ ಸಂಭವಿಸಿದೆ” ಎಂದು ಅವರು ವಿವರಿಸಿದ್ದಾರೆ. ಹಿಮಾಲಯ ಪ್ರಸ್ಥಭೂಮಿಗೆ ವಿರುದ್ಧವಾಗಿ ಕಡಿದಾದ ಪರ್ವತ ಶ್ರೇಣಿಗಳು ಇರುವ ಚೀನಾದ ಯುನ್ನಾನ್‌ನಲ್ಲಿ ಭೂ ಕುಸಿತ ಸಾಮಾನ್ಯ ಎಂಬಂತಾಗಿದೆ.
ಗನ್ಸು ಮತ್ತು ಕ್ವಿಂಗೈ ಪ್ರಾಂತ್ಯದ ನಡುವಿನ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದ ಒಂದು ತಿಂಗಳ ನಂತರ ಈ ಭೂ ಕುಸಿತ ಸಂಭವಿಸಿದೆ. ಡಿಸೆಂಬರ್ 18ರಂದು ಸಂಭವಿಸಿದ 6.2 ತೀವ್ರತೆಯ ಭೂಕಂಪದಲ್ಲಿ ಕನಿಷ್ಠ 149 ಜನರು ಸಾವನ್ನಪ್ಪಿದ್ದರು. ಆ ಸಂದರ್ಭದಲ್ಲಿ ಮನೆಗಳು ನೆಲಸಮವಾಗಿದ್ದವು. ಇದರಿಂದ ಕ್ವಿಂಗೈ ಪ್ರಾಂತ್ಯದ ಎರಡು ಗ್ರಾಮಗಳು ನಾಶವಾಗಿದ್ದವು. ಕಳೆದ 9 ವರ್ಷಗಳಲ್ಲಿ ಚೀನಾದಲ್ಲಿ ನಡೆದ ಭೂಕಂಪಕ್ಕೆ 14,000 ಮನೆಗಳು ನಾಶವಾಗಿದ್ದರೆ, 1,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಇದನ್ನೂ ಓದಿ: Earthquake: ಅಫ್ಘಾನಿಸ್ತಾನದಲ್ಲಿ ಭೂಕಂಪ; ನಡುಗಿದ ಪಾಕಿಸ್ತಾನ, ಉತ್ತರ ಭಾರತ!
ಆಗಾಗ ಮಳೆ ಅಥವಾ ಅಸುರಕ್ಷಿತ ನಿರ್ಮಾಣ ಕಾರ್ಯಗಳಿಂದ ಉಂಟಾಗುವ ಭೂಕುಸಿತ ಮತ್ತು ಅವಘಡಗಳಿಂದ ಕಳೆದ ವರ್ಷ ಕನಿಷ್ಠ 70 ಜನರು ಸಾವನ್ನಪ್ಪಿದ್ದಾರೆ. ಇನ್ನರ್ ಮಂಗೋಲಿಯಾ ಪ್ರದೇಶದ ತೆರೆದ ಗಣಿಯಲ್ಲಿ ಸಿಲುಕಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. 2021ರಲ್ಲಿ ನಿರ್ಮಾಣ ಹಂತದಲ್ಲಿದ್ದ ಸುರಂಗವು ಪ್ರವಾಹಕ್ಕೆ ಸಿಲುಕಿ 14 ಕಾರ್ಮಿಕರು ಸಾವನ್ನಪ್ಪಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ