ಕೊಲೊಂಬೊ: ಆರ್ಥಿಕ ಬಿಕ್ಕಟ್ಟಿನಿಂದ ಉಂಟಾದ ಜನಾಕ್ರೋಶಕ್ಕೆ ಹೆದರಿ ವಿದೇಶಕ್ಕೆ ಪಲಾಯನಗೈದಿದ್ದ ಶ್ರೀಲಂಕಾ ಮಾಜಿ ಅಧ್ಯಕ್ಷ ಗೊಟಬೊಯ ರಾಜಪಕ್ಸ (Gotabaya Rajapaksa) ಅವರು ಏಳು ವಾರಗಳ ಬಳಿಕ ಸ್ವದೇಶಕ್ಕೆ ಹಿಂತಿರುಗಿದ್ದಾರೆ. ಬ್ಯಾಂಕಾಕ್‌ನಿಂದ ಸಿಂಗಾಪುರ ಮಾರ್ಗವಾಗಿ ಅವರು ಕೊಲೊಂಬೊ ತಲುಪಿದ್ದಾರೆ ಎಂದು ಕೊಲೊಂಬೊ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಗೊಟಬೊಯ ರಾಜಪಕ್ಸ ಅವರು ದೇಶಕ್ಕೆ ಆಗಮಿಸುತ್ತಲೇ ಶ್ರೀಲಂಕಾ ಪೊದುಜನ ಪೆರಮುನ (Sri Lanka Podujana Peramuna) ಪಕ್ಷದ ಸಚಿವರು ಹೂವಿನ ಹಾರ ಹಾಕಿ ಸ್ವಾಗತಿಸಿದ್ದಾರೆ. ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಜನಾಕ್ರೋಶ ಕಟ್ಟೆಯೊಡೆದ ಕಾರಣ ಮಿಲಿಟರಿ ರಕ್ಷಣೆಯಲ್ಲಿ ಗೊಟಬೊಯ ರಾಜಪಕ್ಸ ಅವರು ದೇಶ ತೊರೆದಿದ್ದರು. ದೇಶ ತೊರೆದ ಬಳಿಕವೇ ಅವರು ರಾಜೀನಾಮೆ ಪತ್ರ ರವಾನಿಸಿದ್ದರು.