Site icon Vistara News

Lanka on fire| ಶ್ರೀಲಂಕಾ ಬಿಟ್ಟು ಹೋಗದಂತೆ ಮಾಜಿ ಪ್ರಧಾನಿ ಮಹೀಂದ್ರಾ ರಾಜಪಕ್ಸಗೆ ನಿರ್ಬಂಧ

mahindra rajapakasa

ಕೊಲಂಬೊ: ಶ್ರೀಲಂಕಾದ ಮಾಜಿ ಪ್ರಧಾನಿ ಮಹೀಂದ್ರಾ ರಾಜಪಕ್ಸ ಮತ್ತು ಮಾಜಿ ಹಣಕಾಸು ಸಚಿವ ಬಸಿಲ್‌ ರಾಜಪಕ್ಸ ಅವರಿಗೆ ಜುಲೈ ೨೮ರ ತನಕ ತನ್ನ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗದಂತೆ ಅಲ್ಲಿನ ಸುಪ್ರೀಂಕೋರ್ಟ್‌ ನಿರ್ಬಂಧ ವಿಧಿಸಿದೆ.

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗ್ಲೋಬಲ್‌ ಸಿವಿಲ್‌ ಸೊಸೈಟಿ ಆರ್ಗನೈಸೇಶನ್‌ ಟ್ರಾನ್ಸಪರನ್ಸಿ ಇಂಟರ್‌ನ್ಯಾಶನಲ್‌, ದಾಖಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ ಈ ಆದೇಶ ಹೊರಡಿಸಿದೆ. ದೇಶದ ಮಾಜಿ ಪ್ರಧಾನಿ, ಸೆಂಟ್ರಲ್‌ ಬ್ಯಾಂಕ್‌ ಮಾಜಿ ಗವರ್ನರ್‌, ಮಾಜಿ ಹಣಕಾಸು ಸಚಿವ, ಮಾಜಿ ಖಜಾಂಚಿ ಮತ್ತು ಇತರ ನಾಯಕರಿಗೆ ದೇಶ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಬೇಕು ಎಂದು ಕೋರಿ ಜೂನ್‌ ೧೭ರಂದು ಅರ್ಜಿ ಸಲ್ಲಿಸಲಾಗಿತ್ತು. ಶ್ರೀಲಂಕಾದ ವಿದೇಶಿ ಸಾಲದ ಹೊರೆ ಮತ್ತು ಆರ್ಥಿಕ ಬಿಕ್ಕಟ್ಟಿಗೆ ಈ ನಾಯಕರೇ ನೇರ ಹೊಣೆಗಾರರಾಗಿದ್ದು, ವಿಚಾರಣೆಗೆ ಒಳಪಡಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

೧೯೭೮ರಿಂದೀಚೆಗೆ ಮೊದಲ ಬಾರಿಗೆ ಶ್ರೀಲಂಕಾದ ಸಂಸತ್ತಿನಲ್ಲಿ ಮತದಾನದ ಮೂಲಕ ಮುಂದಿನ ಅಧ್ಯಕ್ಷರ ನೇಮಕ ನಡೆಯಲಿದೆ. ಸಾರ್ವತ್ರಿಕ ಮತದಾನದ ಬದಲಿಗೆ ಸಂಸತ್ತಿನಲ್ಲಿ ಸಂಸದರು ಗೌಪ್ಯ ಮತದಾನದ ಮೂಲಕ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ಅಧ್ಯಕ್ಷ ಗೊಟಬಯ ರಾಜೀನಾಮೆ ಹಿನ್ನೆಲೆಯಲ್ಲಿ ಸಂಸದರು ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ. ೨೨೫ ಸದಸ್ಯ ಬಲವನ್ನು ಹೊಂದಿರುವ ಸಂಸತ್ತಿನಲ್ಲಿ ಜುಲೈ ೨೦ರಂದು ಅಧ್ಯಕ್ಷರ ಆಯ್ಕೆಗೆ ಮತದಾನ ನಡೆಯಲಿದೆ. ೧೯೭೮ರ ಬಳಿಕ ಇದೇ ಮೊದಲ ಬಾರಿಗೆ ಈ ವಿದ್ಯಮಾನ ನಡೆಯಲಿದೆ. ೧೯೮೨, ೧೯೮೮, ೧೯೯೪, ೧೯೯೯, ೨೦೦೫, ೨೦೧೦, ೨೦೧೫ ಮತ್ತು ೨೦೧೯ರಲ್ಲಿ ಸಾರ್ವತ್ರಿಕ ಮತದಾನದ ಮೂಲಕ ಅಧ್ಯಕ್ಷರ ಆಯ್ಕೆಯಾಗಿತ್ತು.

ಶ್ರೀಲಂಕಾದ ಪ್ರತಿಪಕ್ಷ ನಾಯಕ ಸಜಿತ್‌ ಪ್ರೇಮದಾಸ ಅವರು ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಪೆಟ್ರೋಲ್‌ ಬಂಕ್‌ಗಳಲ್ಲಿ ಭಾರಿ ಕ್ಯೂ

ಶ್ರೀಲಂಕಾದ ಪೆಟ್ರೋಲ್‌ ಬಂಕ್‌ಗಳಲ್ಲಿ ಜನತೆ ಪೆಟ್ರೋಲ್‌, ಡೀಸೆಲ್‌ ಸಲುವಾಗಿ ದಿನಗಟ್ಟಲೆ ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಹತಾಶೆಯಿಂದ ಪರಿತಪಿಸುತ್ತಿದ್ದಾರೆ. ಅನೇಕ ಮಂದಿ ಪೆಟ್ರೋಲ್‌ ಸಿಗುವ ಖಾತರಿಯನ್ನೂ ಕಳೆದುಕೊಂಡು ಸರದಿಯಲ್ಲಿ ನಿಂತಿದ್ದಾರೆ.

Exit mobile version