Site icon Vistara News

Lanka on fire: ಜು. 13ರಂದು ರಾಜಪಕ್ಸ ಪದತ್ಯಾಗ, ಉಗ್ರ ಪ್ರತಿಭಟನೆ ಬಳಿಕ ಈಗ ಸಂಭ್ರಮಾಚರಣೆ

Lanka PM House

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಕೊನೆಗೂ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶನಿವಾರ ಸಿಡಿದೆದ್ದ ಜನಾಕ್ರೋಶಕ್ಕೆ ಹೆದರಿ ದೇಶವನ್ನೇ ಬಿಟ್ಟು ಪಲಾಯನ ಮಾಡಿದ್ದಾರೆ ಎನ್ನಲಾದ ಗೊಟಬಯ ರಾತ್ರಿ ಸ್ಪೀಕರ್‌ ಮಹಿಂದ ಯಪಾ ಅಭಯವರ್ಧನ ಅವರನ್ನು ಸಂಪರ್ಕಿಸಿ ಜುಲೈ ೧೩ರಂದು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ.
ಸ್ಪೀಕರ್‌ ಈ ವಿಷಯವನ್ನು ಪ್ರಕಟಿಸುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ಸಂಭ್ರಮಾಚರಣೆ ಆರಂಭಗೊಂಡಿದೆ. ಶನಿವಾರ ದೊಡ್ಡ ಸಂಖ್ಯೆಯಲ್ಲಿ ಅಧ್ಯಕ್ಷರ ನಿವಾಸಕ್ಕೆ ನುಗ್ಗಿ ದಾಂಧಲೆ ನಡೆಸಿದ ಮತ್ತು ಪ್ರಧಾನಿ ರನಿಲ್‌ ವಿಕ್ರಮ ಸಿಂಘೆ ಅವರ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರ ಪ್ರಧಾನ ಬೇಡಿಕೆ ರಾಜಪಕ್ಸ ರಾಜೀನಾಮೆಯೇ ಆಗಿತ್ತು. ಕಳೆದ ಹಲವು ದಿನಗಳಿಂದ ಈ ಬೇಡಿಕೆ ಮುಂದಿಟ್ಟು ಪ್ರತಿಭಟನೆಗಳು ನಡೆದಿದ್ದರೂ ಅಧ್ಯಕ್ಷ ಗೊಟಬಯ ರಾಜಪಕ್ಸ ಅದಕ್ಕೆ ಸೊಪ್ಪು ಹಾಕಿರಲಿಲ್ಲ. ಆದರೆ, ಅಧ್ಯಕ್ಷರ ನಿವಾಸಕ್ಕೇ ಜನ ಲಗ್ಗೆ ಇಡುತ್ತಿರುವುದನ್ನು ತಿಳಿದು, ತನಗಿನ್ನು ಉಳಿಗಾಲವಿಲ್ಲ ಎಂಬ ಭಯದಿಂದ ನಿಗೂಢ ಸ್ಥಳಕ್ಕೆ ತೆರಳಿದ ರಾಜಪಕ್ಸ ಅಲ್ಲಿಂದಲೇ ರಾಜೀನಾಮೆ ಭರವಸೆ ನೀಡಿದ್ದಾರೆ.

ಸ್ಪೀಕರ್‌ ಮಹಿಂದಾ ಯಪಾ ಅಭಯವರ್ಧನ ಅವರು ವಿಡಿಯೊ ಹೇಳಿಕೆಯೊಂದನ್ನು ಬಿಡುಗಡೆ ಮಾಡಿ ರಾಜಪಕ್ಸ ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದನ್ನು ಪ್ರಕಟಿಸಿದ್ದಾರೆ.

ʻʻಗೊಟಬಯ ರಾಜಪಕ್ಸ ಅವರು ಜುಲೈ ೧೩ರಂದು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಇದು ಸರಾಗವಾಗಿ ಅಧಿಕಾರ ಹಸ್ತಾಂತರಕ್ಕೆ ದಾರಿ ಮಾಡಿಕೊಡಲಿದೆ. ನಾನು ನಾಗರಿಕರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ಎಲ್ಲರೂ ಕಾನೂನು ಮತ್ತು ಸುವ್ಯವಸ್ಥೆಗೆ ಗೌರವ ಕೊಡಬೇಕು.ʼʼ ಎಂದು ಸ್ಪೀಕರ್‌ ವಿನಂತಿಸಿದ್ದಾರೆ.

ರಾಜಪಕ್ಸ ವಿರುದ್ಧ ರೊಚ್ಚಿಗೆದ್ದ ಜನತೆ
ದೇಶ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಗೊಟಬಯ ರಾಜಪಕ್ಸ ಮತ್ತು ಅವರ ಮೂವರು ಸಹೋದರರೇ ಕಾರಣ ಎಂದು ಜನರು ಆಕ್ಷೇಪಿಸುತ್ತಿದ್ದಾರೆ. ಮಹಿಂದಾ ರಾಜಪಕ್ಸ ಅವರು ಪ್ರಧಾನಿಯಾಗಿದ್ದರೆ, ಬಾಸಿಲ್‌ ರಾಜಪಕ್ಸ ಹಣಕಾಸು ಮಂತ್ರಿ, ಚಾಮಲ್‌ ರಾಜಪಕ್ಸ ನೀರಾವರಿ ಮಂತ್ರಿ. ಕಳೆದ ಬಾರಿ ತುರ್ತು ಪರಿಸ್ಥಿತಿ ವಿರುದ್ಧ ಜನ ದಂಗೆ ಎದ್ದಾಗ ಗೊಟಬಯ ಅವರು ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನ ಹುದ್ದೆಯಿಂದ ಕಿತ್ತು ಹಾಕಿ ರನಿಲ್‌ ವಿಕ್ರಮ ಸಿಂಘೆ ಅವರನ್ನು ನೇಮಿಸಿದ್ದರು. ಆದರೆ, ಈಗ ರನಿಲ್‌ ವಿರುದ್ಧವೂ ಜನ ತಿರುಗಿಬಿದ್ದಿದ್ದಾರೆ. ಶನಿವಾರ ಅವರು ರಾಜೀನಾಮೆ ನೀಡುವುದಾಗಿ ಪ್ರಕಟಿಸಿದರೂ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ದೇಶದ ನಾನಾ ಮೂಲೆಗಳಿಂದ ಬಂದ ಆಕ್ರೋಶಿತರ ಅಟ್ಟಹಾಸ ತಡರಾತ್ರಿವರೆಗೂ ಮುಂದುವರಿದಿತ್ತು.

ಮುಂದಿನ ಆಡಳಿತ ಹೇಗೆ?
– ಶ್ರೀಲಂಕಾ ಸಂವಿಧಾನ ಪ್ರಕಾರ ಅಧ್ಯಕ್ಷ ಮತ್ತು ಪ್ರಧಾನಿ ಇಬ್ಬರೂ ರಾಜೀನಾಮೆ ನೀಡಿದರೆ ಸಂಸತ್ತಿನ ಸ್ಪೀಕರ್‌ ಮೂವತ್ತು ದಿನಗಳ ಕಾಲ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಅವಕಾಶವಿದೆ.
– ಮೂವತ್ತು ದಿನದೊಳಗೆ ಎಲ್ಲ ಪಕ್ಷಗಳು ಸೇರಿ ಮಧ್ಯಂತರ ಸರಕಾರ ರಚಿಸುವುದು.
– ಮೂವತ್ತು ದಿನದೊಳಗೆ ಈ ಪ್ರಕ್ರಿಯೆ ನಡೆಯದಿದ್ದರೆ, ಇನ್ನೊಬ್ಬರು ಸಂಸದರನ್ನು ಅಧ್ಯಕ್ಷರನ್ನಾಗಿ ಮಾಡಬೇಕಾಗುತ್ತದೆ.
– ಇದೆಲ್ಲಕ್ಕಿಂತ ಮುಖ್ಯವಾಗಿ ಹಂಗಾಮಿ ಅಧ್ಯಕ್ಷರ ಸೂಚನೆಯಂತೆ ಆದಷ್ಟು ಬೇಗನೆ ಚುನಾವಣೆ ನಡೆಸುವುದು. ಇದನ್ನೂ ಓದಿ| Lanka on fire: ಶ್ರೀಲಂಕಾದ ಅಸಹಾಯಕ ಸ್ಥಿತಿಗೆ ಯಾರು ಕಾರಣ? ನಿಜಕ್ಕೂ ಏನಾಗಿದೆ ದ್ವೀಪ ರಾಷ್ಟ್ರಕ್ಕೆ?

Exit mobile version