Site icon Vistara News

Lanka on fire: ಎಲ್ಲ ಬಾಗಿಲು ಮುಚ್ಚಿದಾಗ ಮಿಲಿಟರಿ ವಿಮಾನದಲ್ಲಿ ಗೊಟಬಯ ಪರಾರಿಯಾಗಿದ್ದು ಹೇಗೆ?

Rajapaksa

ಕೊಲಂಬೊ: ಶ್ರೀಲಂಕಾದ ಆರ್ಥಿಕ ದುಸ್ಥಿತಿಗೆ ಕಾರಣ ಎಂದು ಆರೋಪಿಸಲಾಗುವ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ವಿದೇಶಕ್ಕೆ ಹಾರುವ ಎಲ್ಲ ಬಾಗಿಲುಗಳು ಮುಚ್ಚಿವೆ ಎಂದು ಹೇಳಲಾಗಿತ್ತು. ಆದರೂ ಅವರು ವಾಯುಪಡೆಯ ವಿಮಾನ ಬಳಸಿ ಮಾಲ್ಡೀವ್ಸ್‌ಗೆ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು ಎಂಬ ಕುತೂಹಲ ಎಲ್ಲರಲ್ಲೂ ಇದೆ.

ನಿಜವೆಂದರೆ, ಗೊಟಬಯ ರಾಜಪಕ್ಸ ಅವರು ಜುಲೈ ೯ರ ಶನಿವಾರದಂದು ಕೊಲಂಬೊದಲ್ಲಿ ಜನ ದಂಗೆ ಎದ್ದು ಅಧ್ಯಕ್ಷರ ನಿವಾಸಕ್ಕೆ ದಾಳಿ ಮಾಡುವ ಮುನ್ನವೇ ಅಲ್ಲಿಂದ ತಪ್ಪಿಸಿಕೊಂಡಿದ್ದರು. ಅವರು ನೌಕಾಪಡೆಯ ಹಡಗೊಂದನ್ನು ಬಳಸಿ ವಿದೇಶಕ್ಕೆ ಹೋಗಿದ್ದಾರೆ ಎಂದು ಅಂದು ನಂಬಲಾಗಿತ್ತು. ಬಂದರಿನ ಕಡೆಗೆ ಅಧ್ಯಕ್ಷರ ಬೆಂಗಾವಲು ಪಡೆ ಸಾಗುವುದು, ಕೆಲವು ಬ್ಯಾಗ್‌ಗಳನ್ನು ನೌಕೆಯೊಳಗೆ ಒಯ್ದು ಇಡುವ ದೃಶ್ಯಗಳು ಹರಿದಾಡಿದ್ದವು. ಆದರೆ, ಮರುದಿನ ಹೊತ್ತಿಗೆ ಅವರು ಪರಾರಿಯಾಗಲು ಪ್ರಯತ್ನಿಸಿದ್ದು ನಿಜ. ಆದರೆ ಅವಕಾಶ ನೀಡಲಾಗಿಲ್ಲ ಎನ್ನುವ ಸುದ್ದಿ ಬಂತು.

ಈ ನಡುವೆ ಸೋಮವಾರ ಅವರೇ ವಿಮಾನ ನಿಲ್ದಾಣದ ಮೂಲಕವೇ ಬೇರೆ ರಾಷ್ಟ್ರಕ್ಕೆ ಪ್ರಯಾಣಿಸಲು ನಿರ್ಧರಿಸಿದ್ದರು. ಅವರು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಂತೆಯೇ ಇಮ್ಮಿಗ್ರೇಷನ್‌ ಅಧಿಕಾರಿಗಳೇ ಅವರನ್ನು ತಡೆದರು. ಹೀಗೆ ಬಂದ ದಾರಿಗೆ ಸುಂಕವಿಲ್ಲ ಎಂದು ಮರಳಿದ್ದರು ಅಧ್ಯಕ್ಷ ಗೊಟಬಯ. ಅಧ್ಯಕ್ಷರು ದೇಶ ಬಿಟ್ಟು ಹೋಗದಂತೆ ತಡೆಯಬೇಕು ಎನ್ನುವ ಅಭಿಪ್ರಾಯ ಜನರ ವಲಯದಲ್ಲಿ ಇತ್ತಾದರೂ ವಿಮಾನ ನಿಲ್ದಾಣದ ಅಧಿಕಾರಿಗಳು ಹೇಗೆ ತಡೆದರು ಎನ್ನುವ ಬಗ್ಗೆಯೂ ಚರ್ಚೆಗಳು ಎದ್ದಿದ್ದವು.

ಎರಡೂ ಪ್ರಯತ್ನಗಳು ವಿಫಲವಾದ ಬಳಿಕ ಗೊಟಬಯ ಅವರು ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ್ದರು!
ನಿಜವೆಂದರೆ, ಗೊಟಬಯ ರಾಜೀನಾಮೆ ನೀಡಬೇಕು ಎನ್ನುವ ಬೇಡಿಕೆ ಕಳೆದ ಒಂದು ವಾರದಿಂದಲೇ ಇದೆ. ಅದರೆ, ಶನಿವಾರ ಅವರ ನಿವಾಸವನ್ನು ಪ್ರತಿಭಟನಾಕಾರರು ಆಕ್ರಮಿಸಿಕೊಂಡ ಬಳಿಕವೂ ಹುದ್ದೆ ಬಿಡಲು ಒಪ್ಪಲಿಲ್ಲ. ರಾಜೀನಾಮೆ ನೀಡುವುದಾಗಿ ಹೇಳಿದರೂ ಅದಕ್ಕೆ ಸಮಯಾವಕಾಶ ಬೇಕು ಎಂದು ಕೇಳಿದ್ದರು. ಅವರು ಜುಲೈ ೧೩ರಂದು ರಾಜೀನಾಮೆ ನೀಡಲಿದ್ದಾರೆ ಎಂದು ಸ್ಪೀಕರ್‌ ಹೇಳಿದ್ದರು.

ಆದರೆ, ರಾಜಪಕ್ಸ ಅವರು ಮೊದಲು ವಿದೇಶಕ್ಕೆ ಹಾರಿಯೇ ರಾಜೀನಾಮೆ ನೀಡಬೇಕು ಎಂದು ತೀರ್ಮಾನ ಮಾಡಿದಂತಿದೆ. ಯಾಕೆಂದರೆ, ಒಮ್ಮೆ ರಾಜೀನಾಮೆ ಕೊಟ್ಟರೆ ಅವರು ಬಂಧನಕ್ಕೆ ಒಳಗಾಗಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು ಎಂಬ ಆತಂಕ ಅವರಿದ್ದ ಹಾಗಿದೆ.

ಆದರೆ, ಎರಡು ಪ್ರಯತ್ನಗಳು ವಿಫಲವಾದ ಬಳಿಕ ಮುಂದೇನು ಎನ್ನುವ ದೊಡ್ಡ ಪ್ರಶ್ನೆ ಅವರ ಮುಂದಿತ್ತು. ಆಗ ಅವರು ಬಳಸಿಕೊಂಡಿದ್ದು ತಮಗಿರುವ ಪರಮಾಧಿಕಾರ!

ಒಂದು ರಾಷ್ಟ್ರದ ಅಧ್ಯಕ್ಷನಾಗಿ ಅವರಿಗೆ ಮಿಲಿಟರಿಯ ಮೇಲೆ ಪರಮಾಧಿಕಾರವಿರುತ್ತದೆ. ಸಾಂವಿಧಾನಿಕವಾಗಿರುವ ಹಕ್ಕನ್ನು ಬಳಸಿಕೊಂಡು ಅವರು ಪ್ರಧಾನಿಯ ಮೂಲಕ ವಿದೇಶ ಪ್ರಯಾಣಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅದರನ್ವಯವೇ ವಾಯುಪಡೆಯ ವಿಶೇಷ ವಿಮಾನದಲ್ಲಿ ಅವರು ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಪತ್ನಿ ಮತ್ತು ಇಬ್ಬರು ಅಂಗರಕ್ಷಕರ ಜತೆಗೆ ಅವರು ವಾಯುಪಡೆಗೆ ಸೇರಿದ ರಷ್ಯನ್‌ ನಿರ್ಮಿತ ಎಎನ್‌ -೩೨ ವಿಮಾನದಲ್ಲಿ ಅವರು ಪ್ರಯಾಣಿಸಿದ್ದಾರೆ.

ಈ ಬಗ್ಗೆ ವಾಯುಪಡೆಯೇ ಅಧಿಕೃತ ಹೇಳಿಕೆಯನ್ನು ನೀಡಿದೆ. ʻʻಸರಕಾರದ ಕೋರಿಕೆಯ ಮೇರೆಗೆ ಮತ್ತು ಅಧ್ಯಕ್ಷರಿಗೆ ಇರುವ ಸಾಂವಿಧಾನಿಕ ಅಧಿಕಾರದಂತೆ, ರಕ್ಷಣಾ ಸಚಿವಾಲಯದ ಸಂಪೂರ್ಣ ಅನುಮೋದನೆಯೊಂದಿಗೆ ಈ ಪ್ರಯಾಣ ನಡೆದಿದೆ. ಅಧ್ಯಕ್ಷರು, ಅವರ ಪತ್ನಿ ಮತ್ತು ಇಬ್ಬರು ಭದ್ರತಾ ಪಡೆ ಸಿಬ್ಬಂದಿಯನ್ನು ಶ್ರೀಲಂಕಾ ವಾಯುಪಡೆ ವಿಮಾನದಲ್ಲಿ ಕಾಟುನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಾಲ್ಡೀವ್ಸ್‌ಗೆ ಕರೆದೊಯ್ಯಲಾಯಿತು. ಜುಲೈ ೧೩ರ ಮುಂಜಾನೆ ವಿಮಾನ ಮಾಲ್ಡೀವ್ಸ್‌ಗೆ ಹೊರಟಿದೆʼʼ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ| Lanka on fire: ಭಾರಿ ದೊಂಬಿಯ ನಡುವೆ ರನಿಲ್‌ ವಿಕ್ರಮಸಿಂಘೆಗೆ ಹಂಗಾಮಿ ಅಧ್ಯಕ್ಷ ಪಟ್ಟ! ರಾಜಪಕ್ಸ ಅವರದೇ ಆದೇಶ?

Exit mobile version