Site icon Vistara News

Lanka on fire: ಲಂಕಾ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ರಾಜೀನಾಮೆ, ಮನೆಗೆ ಬಿಗಿ ಭದ್ರತೆ

no money to print the ballot paper, Sri Lanka has postponed the local election

ಕೊಲಂಬೊ: ಕುಸಿದ ಆರ್ಥಿಕತೆಯನ್ನು ಮೇಲೆತ್ತಲಾಗದ ಲಂಕಾ ಸರಕಾರದ ವಿರುದ್ಧ ಭುಗಿಲೆದ್ದ ಸಾರ್ವಜನಿಕರ ರೋಷಾವೇಷಕ್ಕೆ ಭಯಗೊಂಡ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ದೇಶವನ್ನೇ ಬಿಟ್ಟು ಪಲಾಯನ ಮಾಡಿದ ನಡುವೆಯೇ, ಜನಾಕ್ರೋಶದ ಮುಂದೆ ಮಂಡಿಯೂರಿದ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಕೊಲಂಬೊದ ಕಡಲ ತೀರದಲ್ಲಿರುವ ಅಧ್ಯಕ್ಷರ ನಿವಾಸಕ್ಕೆ ಲಗ್ಗೆ ಇಟ್ಟು ವಸ್ತುಶಃ ಲಂಕಾದಹನವನ್ನೇ ಮಾಡಿದ ಪ್ರತಿಭಟನಾಕಾರರು ಭವನದಲ್ಲಿ ಸ್ವೇಚ್ಛಾಚಾರವನ್ನೇ ಮೆರೆದರು. ಇಂಥಹುದೊಂದು ವಿದ್ಯಮಾನದ ಮುನ್ಸೂಚನೆ ಪಡೆದಿದ್ದ ಗೊಟಬಯ ಅವರು ಶುಕ್ರವಾರ ರಾತ್ರಿಯೇ ಭವನವನ್ನು ಖಾಲಿ ಮಾಡಿದ್ದರು ಎನ್ನಲಾಗಿದೆ. ಈ ನಡುವೆ ಜನಾಕ್ರೋಶ, ಸಚಿವರು, ಮಾಜಿ ಸಚಿವರತ್ತಲೂ ತಿರುಗಿ ಅಂತಿಮವಾಗಿ ಪ್ರಧಾನಿ ರನಿಲ್‌ ವಿಕ್ರಮ ಸಿಂಘೆ ಅವರನ್ನೂ ಬೆನ್ನು ಹತ್ತುವ ಸಾಧ್ಯತೆ ಕಂಡುಬಂತು.

ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು ರಾಜೀನಾಮೆ ನೀಡಬೇಕು ಎನ್ನುವುದು ಜನರ ಪ್ರಧಾನ ಆಗ್ರಹವಾಗಿತ್ತು. ಈ ನಡುವೆ, ಅಪಾಯವನ್ನು ಅರಿತ ವಿಕ್ರಮಸಿಂಘೆ ಅವರು ಸಂಪುಟದ ಸಚಿವರ ಜತೆಗೆ ಮಾತುಕತೆ ನಡೆಸಿ ಅಂತಿಮವಾಗಿ ರಾಜೀನಾಮೆ ಪ್ರಕಟಿಸಿದ್ದಾರೆ.

ರನಿಲ್‌ ವಿಕ್ರಮ ಸಿಂಘೆ ಅವರು ರಾಜೀನಾಮೆ ನೀಡಬೇಕು ಎಂದು ಹಲವಾರು ಸಚಿವರು ಕೂಡಾ ಹಿಂದೆಯೇ ಅಭಿಪ್ರಾಯಪಟ್ಟಿದ್ದರು. ಒಂದು ಹಂತದಲ್ಲಿ ರಾಜೀನಾಮೆ ಕೊಡಲು ನಿರಾಕರಿಸಿದ್ದ ರನಿಲ್‌, ಬಳಿಕ ಜನಾಕ್ರೋಶ ಹೆಚ್ಚಾಗುತ್ತಿದ್ದಂತೆಯೇ ರಾಜೀನಾಮೆ ನಿರ್ಧಾರ ಮಾಡಿದ್ದಾರೆ.

ರಾಜೀನಾಮೆ ನೀಡಿದ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರ ಮನೆಗೆ ಬಿಗಿಭದ್ರತೆ

ರನಿಲ್‌ ಮನೆಗೆ ಬಿಗಿ ಭದ್ರತೆ
ಈ ನಡುವೆ, ಆಕ್ರೋಶಿತ ಪ್ರತಿಭಟನಾಕಾರರು ಯಾವುದೇ ಕ್ಷಣದಲ್ಲೂ ರನಿಲ್‌ ಅವರ ಮನೆಗೂ ಲಗ್ಗೆ ಇಡಬಹುದು ಎಂದು ಹೇಳಲಾಗುತ್ತಿರುವ ಹಿನ್ನೆಲೆಯಲ್ಲಿ ಮನೆಗೆ ಬಿಗಿ ಭದ್ರತೆ ಒದಗಿಸಲಾಗಿದೆ.

ರಾಜೀನಾಮೆ ನೀಡದ ರಾಜಪಕ್ಸ
ಇಷ್ಟೆಲ್ಲ ಬೆಳವಣಿಗೆ ನಡೆದರೂ ಗೊಟಬಯ ರಾಜಪಕ್ಸ ಅವರು ಇನ್ನೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಿಲ್ಲ. ಅವರು ವಿದೇಶಕ್ಕೆ ಪರಾರಿಯಾಗಿರುವ ಹಿನ್ನೆಲೆಯಲ್ಲಿ ಮುಂದೇನು ಎನ್ನುವ ಪ್ರಶ್ನೆ ಕಾಡುತ್ತಿದೆ.

ಇದನ್ನೂ ಓದಿ| Lanka on fire: ದೇಶ ಬಿಟ್ಟು ಪರಾರಿಯಾದ ಗೊಟಬಯ, ನೌಕಾಪಡೆ ಹಡಗಿನ ಮೂಲಕ ಎಸ್ಕೇಪ್‌?

Exit mobile version