ಕೊಲಂಬೊ: ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾದಲ್ಲಿ ಜನಾಕ್ರೋಶ ಮುಗಿಲು ಮುಟ್ಟಿದೆ. ಶನಿವಾರ ಪ್ರತಿಭಟನಾಕಾರರು ಕೊಲಂಬೊದಲ್ಲಿರುವ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕಿ ಕೈವಶ ಮಾಡಿಕೊಂಡಿದ್ದಾರೆ. ಗೋತಬಯ ಅವರು ಜೀವಭಯದಿಂದ ತತ್ತರಿಸಿ ಪಲಾಯನ ಮಾಡಿದ್ದಾರೆ. ಸಾವಿರಾರು ಮಂದಿ ಒಂದೇ ಸಮನೆ ಅಧ್ಯಕ್ಷರ ನಿವಾಸದ ಕಡೆಗೆ ಲಗ್ಗೆ ಇಟ್ಟಿದ್ದು, ಅವರನ್ನು ನಿಯಂತ್ರಿಸುವುದೇ ಕಷ್ಟವಾಗುತ್ತಿದೆ. ಪೊಲೀಸರು ಅಶ್ರುವಾಯು, ಜಲಫಿರಂಗಿಗಳನ್ನು ಪ್ರಯೋಗಿಸುತ್ತಿದ್ದರೂ ಯಾರೂ ಹಿಮ್ಮೆಟ್ಟುತ್ತಿಲ್ಲ.
ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸ ಅವರ ಅಧಿಕೃತ ನಿವಾಸದ ಸುತ್ತ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನಾಕಾರರು ನೆರೆದಿದ್ದಾರೆ. ನೂರಾರು ಮಂದಿ ಅಧ್ಯಕ್ಷರ ನಿವಾಸದೊಳಗೆ ನುಗ್ಗಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಶತಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದರೆ, ಪ್ರತಿಭಟನಾಕಾರರು ಯಾವುದನ್ನೂ ಲೆಕ್ಕಿಸದೆ ಮುನ್ನುಗುತ್ತಿದ್ದಾರೆ.