Site icon Vistara News

Lanka on fire: ಶ್ರೀಲಂಕಾದ ಅಸಹಾಯಕ ಸ್ಥಿತಿಗೆ ಯಾರು ಕಾರಣ? ನಿಜಕ್ಕೂ ಏನಾಗಿದೆ ದ್ವೀಪ ರಾಷ್ಟ್ರಕ್ಕೆ?

Lanka on fire

ಕೊಲಂಬೊ: ದ್ವೀಪ ರಾಷ್ಟ್ರ ಶ್ರೀಲಂಕಾ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದೆ. ಬೇಕಾದಷ್ಟು ಆಹಾರವಿಲ್ಲ, ತೈಲವಿಲ್ಲ, ಉದ್ಯೋಗವಿಲ್ಲ.. ಜನರ ಬದುಕೇ ದಿಕ್ಕೆಟ್ಟು ಹೋಗಿದೆ. ಇಂಥ ಅಸಹಾಯಕ ಸ್ಥಿತಿಯಲ್ಲಿ ಸಹಾಯ ಮಾಡಿ ಎಂದು ದೇಶ ದೇಶಗಳ ಮುಂದೆ ನಿಂತು ಕೈಚಾಚುವ ಸ್ಥಿತಿ ನಿರ್ಮಾಣವಾಗಿದೆ.

ಇದೆಲ್ಲದರ ನಡುಗೆ ಅಧ್ಯಕ್ಷ ಗೊಟಬಯ ರಾಜಪಕ್ಸ ಮತ್ತು ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರು ಸೇರಿಕೊಂಡು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದರು. ಮೊದಲೇ ಹೊತ್ತಿನ ಕೂಳಿಗೆ ಸಂಕಷ್ಟಪಡುತ್ತಿದ್ದ ಜನರು ಮೇ ೬ರಿಂದ ಮೇ ೨೧ರವರೆಗೆ ಹೇರಲಾದ ಎರಡನೇ ಸುತ್ತಿನ ತುರ್ತು ಪರಿಸ್ಥಿತಿಯ ವಿರುದ್ಧ ದೊಡ್ಡ ಮಟ್ಟದಲ್ಲಿ ಸಿಡಿದೆದ್ದಿದ್ದಾರೆ.

ರಾಜಪಕ್ಸ ಕುಟುಂಬ ಇಡೀ ದೇಶವನ್ನೇ ಕುಟುಂಬದ ಆಸ್ತಿಯಾಗಿ ಪರಿವರ್ತನೆ ಮಾಡಿಕೊಂಡು ಇಂಥ ಸಂಕಷ್ಟದ ಸ್ಥಿತಿಗೆ ಕಾರಣವಾಗಿದೆ ಎನ್ನುವುದು ದೇಶದ ಬಹುತೇಕ ಎಲ್ಲರ ಆರೋಪ. ಹೀಗಾಗಿ ಈ ಕುಟುಂಬವ ವಿರುದ್ಧ ಜನ ವಸ್ತುಶಃ ದಂಗೆ ಎದ್ದಿದ್ದಾರೆ. ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ಜನರನ್ನು ಸುಮ್ಮನಿರಿಸಲು ಅಧ್ಯಕ್ಷ ಗೊಟಬಯ ರಾಜಪಕ್ಸ ಹೊಸ ಅಸ್ತ್ರವಾಗಿ ಎಮರ್ಜೆನ್ಸಿ ಅಸ್ತ್ರ ಪ್ರಯೋಗಿಸಿದ್ದರು. ಆದರೆ, ಇದು ಜನರ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿತು. ಆಡಳಿತದ ಮೇಲೆ ಜನಕ್ಕೆ ಸಿಟ್ಟು ಹೆಚ್ಚುತ್ತಿದೆ ಎಂದು ಗೊತ್ತಾದಾಗ, ಸಹೋದರ ಮಹಿಂದ ರಾಜಪಕ್ಸ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಸಿದರು. ಆ ಹುದ್ದೆಯಲ್ಲಿ ಈಗ ರನಿಲ್‌ ವಿಕ್ರಮಸಿಂಘೆ ಇದ್ದಾರೆ.

ಸಾಲದ ಮೇಲೆ ಸಾಲ
ಸಾಲದ ಸುಳಿಯಲ್ಲಿ ಮುಳುಗಿರುವ ಲಂಕೆಗೆ ಒಂದು ತಿಂಗಳ ಹಿಂದೆ 250 ಕೋಟಿ ಡಾಲರ್‌ ಹಣವನ್ನು ಭಾರತ ನೀಡಿತ್ತು. ಆದರೆ ಅದರಿಂದ ಏನೂ ಉಪಯೋಗವಾದಂತಿಲ್ಲ. ಆ ಹಣ ಎಲ್ಲಿಗೆ ಹೋಗಿದೆ ಎಂದೇ ತಿಳಿಯದಂತಾಯಿತು. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ಹೊರತರುವಂತೆ ಲಂಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಗೆ ಮೊರೆಯಿಟ್ಟಿದೆ. ಸಾಲ ಕೊಟ್ಟು ಕೊಟ್ಟು ಲಂಕೆಯ ದಿವಾಳಿತನಕ್ಕೆ ಪ್ರಮುಖ ಕಾರಣವಾಗಿರುವ ಚೀನಾದ ಸಾಲದ ಪಾಲು ಶೇಕಡ ಹತ್ತರಷ್ಟಿದೆ. ಜಪಾನ್‌, ಐಎಂಎಫ್‌, ವಿಶ್ವ ಬ್ಯಾಂಕ್‌, ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ಗಳ ಪಾಲೂ ಇದೆ.

ಏನಿದೆ ಲಂಕೆಯ ಪರಿಸ್ಥಿತಿ?
ಲಂಕೆಯ ವಿದೇಶಿ ವಿನಿಮಯ ಸಂಗ್ರಹದ 70%ಕ್ಕಿಂತಲೂ ಕೆಳಗೆ ಇಳಿದಿದೆ. ಶೇಕಡ ನೂರರಷ್ಟು ವಿದೇಶಿ ವಿನಿಮಯ ಹೊಂದಿದ್ದರೆ ಅಂಥ ದೇಶ ಸುಸ್ಥಿರವಾಗಿದೆ ಎಂದರ್ಥ. ಅದು ಇತರ ದೇಶಗಳೊಂದಿಗೆ ವಾಣಿಜ್ಯ ವ್ಯವಹಾರಗಳನ್ನು ನಡೆಸಲು ಸಮರ್ಥವಾಗಿರುತ್ತದೆ. ಇದು ಒಂದು ಬಗೆಯಲ್ಲಿ ಸುರಕ್ಷತಾ ಠೇವಣಿ ಇದ್ದಂತೆ. ಇದನ್ನು ನೋಡಿಯೇ ಇತರ ದೇಶಗಳು ಕೂಡ ಆ ದೇಶದ ಜೊತೆಗೆ ವಾಣಿಜ್ಯ ನಡೆಸಲು ಮುಂದಾಗುತ್ತವೆ. ಆದರೆ ಲಂಕೆ ಇಟ್ಟ ವಿದೇಶಿ ವಿನಿಮಯದಲ್ಲಿ ಮೂರನೇ ಎರಡು ಭಾಗ ಖಾಲಿಯಾಗಿದೆ. ಹೀಗಾಗಿ ಇತರ ದೇಶಗಳು ಅದರೊಂದಿಗೆ ವ್ಯಾಪಾರ ನಡೆಸಲು ಹಿಂದೇಟು ಹಾಕುತ್ತಿವೆ. ಇದು ದೇಶದಲ್ಲಿ ಅಗತ್ಯ ವಸ್ತುಗಳ ಕೊರತೆಗೆ ಕಾರಣವಾಗಿದೆ. ಉದಾಹರಣೆ ಪೆಟ್ರೋಲ್.‌ ಪೆಟ್ರೋಲ್‌ ಬಂಕ್‌ಗಳ ಮುಂದೆ ಉದ್ದುದ್ದ ಕ್ಯೂಗಳಿವೆ. ಆದರೂ ಸಿಗುತ್ತಿಲ್ಲ. ದಿನಸಿ ಅಂಗಡಿಗಳ ಮುಂದೆಯೂ ಇದೇ ಪರಿಸ್ಥಿತಿ. ಶ್ರೀಮಂತರು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಬಡವರಿಗೆ ಅಲಭ್ಯವಾಗಿದೆ. ಹೀಗಾಗಿ ಅಕ್ಕಿ, ಗೋಧಿ, ಬೇಳೆಕಾಳು, ಸಕ್ಕರೆ, ಆಹಾರಧಾನ್ಯಗಳ ಬೆಲೆ ಗಗನಕ್ಕೇರಿದೆ.

ಚೀನಾದ ಸಖ್ಯವೂ ಮುಳುವಾಯಿತು.

ಶ್ರೀಲಂಕೆಯ ಪರಿಸ್ಥಿತಿ ಹೀಗೆ ಆಗಿರಲು ಕಾರಣಗಳು ಇಂದು ನಿನ್ನೆಯದ್ದಲ್ಲ. ಅದು ಹಲವು ವರ್ಷಗಳಿಂದಲೂ ಬಿಗಡಾಯಿಸುತ್ತಾ ಸಾಗಿತ್ತು. ಪ್ರತೀ ಸರಕಾರಗಳು ಅದನ್ನು ತಾತ್ಕಾಲಿಕವಾಗಿ ಪಾರಾಗುವ ಶಾರ್ಟ್‌ ಕಟ್‌ಗಳನ್ನು ರೂಢಿಸಿಕೊಂಡಿದ್ದವು. ಕಳೆದ ಹದಿನೈದು ವರ್ಷಗಳಿಂದ ಸರಕಾರಗಳು ಪಾವತಿಗಾಗಿ ಬಾಂಡ್‌ಗಳನ್ನು ಪೂರೈಸುತ್ತಿದ್ದವು, ಆದರೆ ಅದಕ್ಕೆ ನಗದು ವ್ಯವಸ್ಥೆ ಮಾಡುತ್ತಿರಲಿಲ್ಲ. ವಿದೇಶಿ ವಿನಿಮಯದ ಸಂಗ್ರಹವನ್ನು ಕೂಡ ರಫ್ತು ಮತ್ತು ಆಮದಿನ ಮೂಲಕ ಕಟ್ಟಿಕೊಳ್ಳದೆ, ವಿದೇಶ ಸಾಲದ ಮೂಲಕ ಕಟ್ಟಿಕೊಳ್ಳಲಾಯಿತು. ಕಳೆದ ಒಂದು ದಶಕದಿಂದ ಚೀನಾದಿಂದ ಪಡೆದ ಸುಮಾರು 500 ಕೋಟಿ ಡಾಲರ್‌ ಹಣವನ್ನು ಕಡಿಮೆ ರಿಟರ್ನ್ಸ್‌ ಬರುವ ಬಂದರು, ವಿಮಾನ ನಿಲ್ದಾಣ, ಕಲ್ಲಿದ್ದಲು ವಿದ್ಯುತ್‌ ಸ್ಥಾವರಗಳಂಥ ಮೂಲಸೌಕರ್ಯಗಳಲ್ಲಿ ತೊಡಗಿಸಲಾಯಿತು. ಇದರಿಂದ ಲಂಕೆಗೆ ಲಾಭವೇನೂ ಆಗಲಿಲ್ಲ.

ಕೋವಿಡ್‌ನಿಂದಾಗಿ ಇನ್ನಷ್ಟು ಆಪತ್ತು
ಲಂಕೆಯ ಸನ್ನಿವೇಶವನ್ನು ಮತ್ತಷ್ಟು ಬಿಗಡಾಯಿಸಿದ್ದು ಕೋವಿಡ್.‌ ಕೊರೊನಾ ವೈರಸ್‌ ಹೆಚ್ಚುತ್ತಿದ್ದಾಗ ಹಾಕಲಾದ ಲಾಕ್‌ಡೌನ್‌ನಿಂದ, ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿದ್ದ ಶ್ರೀಲಂಕಾ ಥಂಡ ಹೊಡೆದುಹೋಯಿತು. ರಷ್ಯಾ- ಉಕ್ರೇನ್‌ ಯುದ್ಧ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಸಮುದಾಯದಿಂದ ಉಂಟಾದ ನಿರ್ಬಂಧಗಳ ಪಶ್ಚಾತ್‌ ಕಂಪನಗಳು ಕೂಡ ಶ್ರೀಲಂಕೆಗೆ ಮುಳುವಾದವು.

Exit mobile version