ಕೊಲಂಬೊ: ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ ಬಳಿಕ ಶ್ರೀಲಂಕಾದಲ್ಲಿ ದೊಂಬಿ ಭುಗಿಲೆದ್ದಿದೆ. ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿ ನಿಯಂತ್ರಣ ಸಾಧಿಸುವ ಪ್ರಯತ್ನವನ್ನು ಸರಕಾರ ನಡೆಸಿದೆ. ಈ ನಡುವೆ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಿರುವುದು ಜನರ ಆಕ್ರೋಶದ ಬೆಂಕಿಗೆ ಇನ್ನಷ್ಟು ತುಪ್ಪ ಸುರಿದಿದೆ.
ಗೊಟಬಯ ಅವರನ್ನು ದೇಶ ಬಿಟ್ಟು ಪಲಾಯನ ಮಾಡಲು ಅವಕಾಶ ನೀಡಿದ್ದು ಜನರನ್ನು ತೀವ್ರವಾಗಿ ಕೆರಳಿಸಿದೆ. ಬುಧವಾರ ಮುಂಜಾನೆಯಿಂದಲೇ ಭಾರಿ ಸಂಖ್ಯೆಯ ಜನರು ಬೀದಿಗೆ ಇಳಿದಿದ್ದರು. ಕಳೆದ ಬಾರಿ ಅಧ್ಯಕ್ಷರ ನಿವಾಸಕ್ಕೆ ಲಗ್ಗೆ ಇಟ್ಟ ಜನಸಮೂಹದ ಮಾದರಿಯಲ್ಲೇ ದೊಡ್ಡ ಪ್ರಮಾಣದಲ್ಲಿ ಜನ ಜಮಾಯಿಸಿದ್ದರು. ಈ ಬಾರಿ ಅವರ ಗುರಿ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರ ನಿವಾಸವಾಗಿತ್ತು. ಇದರ ಬೆನ್ನಿಗೇ ಸ್ಪೀಕರ್ ಮಹಿಂದಾ ಯಪಾ ಅಭಯವರ್ಧನ ಅವರು ರನಿಲ್ ವಿಕ್ರಮ ಸಿಂಘೆ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದನ್ನು ಪ್ರಕಟಿಸಿದ್ದಾರೆ.
ನಿಜವೆಂದರೆ, ಗೊಟಬಯ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಬೇಡಿಕೆ ಎಷ್ಟು ತೀವ್ರವಾಗಿತ್ತೋ, ಅವರಿಂದ ಪ್ರಧಾನಿಯಾಗಿ ನೇಮಕಗೊಂಡಿದ್ದ ರನಿಲ್ ವಿಕ್ರಮ ಸಿಂಘೆ ಅವರು ಕೂಡಾ ಹುದ್ದೆ ಬಿಡಬೇಕು ಎನ್ನುವ ಬೇಡಿಕೆ ಇತ್ತು. ಆದರೆ, ಗೊಟಬಯ ಅವರು ಬುಧವಾರ ರಾಜೀನಾಮೆ ನೀಡುವುದಾಗಿ ಹೇಳಿ ಮಂಗಳವಾರವೇ ದೇಶ ಬಿಟ್ಟು ಪಲಾಯನ ಮಾಡಿದ್ದಾರೆ. ಅವರು ದೇಶ ಬಿಟ್ಟು ಓಡಲು ತಮ್ಮ ಅಧ್ಯಕ್ಷೀಯ ಪದವಿಯನ್ನು ಬಳಸಿಕೊಳ್ಳುವುದಕ್ಕಾಗಿಯೇ ರಾಜೀನಾಮೆಯನ್ನು ಮುಂದೂಡಿದ್ದರು ಎನ್ನಲಾಗಿದೆ.
ಗೊಟಬಯ ಅವರಿಂದಲೇ ಘೋಷಣೆ!
ಸ್ಪೀಕರ್ ಮಹಿಂದಾ ಯಪಾ ಅಭಯವರ್ಧನ ಅವರು ಟಿವಿ ಚಾನೆಲ್‌ಗಳಲ್ಲಿ ನೀಡಿದ ಸಂಕ್ಷಿಪ್ತ ಪ್ರಕಟಣೆ ಪ್ರಕಾರ, ಗೊಟಬಯ ರಾಜಪಕ್ಸ ಅವರೇ ದೇಶ ಬಿಟ್ಟು ಓಡುವ ಮುನ್ನ ರನಿಲ್ ವಿಕ್ರಮಸಿಂಘೆ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ. ಇದು ಸಂವಿಧಾನ ಬದ್ಧವಾದ ಕ್ರಮವೇ ಆಗಿದೆ!
ಜುಲೈ ೨೦ರಂದು ಹೊಸ ಅಧ್ಯಕ್ಷರ ನೇಮಕ?
ಶ್ರೀಲಂಕಾದಲ್ಲಿ ಮುಂದಿನ ಚುನಾವಣೆ ನಡೆಯುವವರೆಗೆ ಹೊಸ ಸರಕಾರವೊಂದು ಅಸ್ತಿತ್ವಕ್ಕೆ ಬರಬೇಕಾಗಿದೆ. ಇದು ಸರ್ವ ಪಕ್ಷಗಳ ಸರಕಾರವಾಗಲಿದ್ದು ಜುಲೈ ೨೦ರಂದು ಚುನಾವಣೆ ನಡೆಯಲಿದೆ ಎಂದು ಹಿಂದೆ ಸ್ಪೀಕರ್ ಪ್ರಕಟಿಸಿದ್ದರು. ಅಲ್ಲಿಯವರೆಗೆ ರನಿಲ್ ವಿಕ್ರಮ ಸಿಂಘೆ ಅಧ್ಯಕ್ಷರಾಗಿರುವ ಸಾಧ್ಯತೆ ಇದೆ.
ಇದನ್ನೂ ಓದಿ| Lanka on fire: ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ, ರಾಜಪಕ್ಸ ಪಲಾಯನದ ಬೆನ್ನಲ್ಲೇ ಭುಗಿಲೆದ್ದ ಪ್ರತಿಭಟನೆ