ಕೊಲಂಬೊ: ಶ್ರೀಲಂಕಾದ ಆರ್ಥಿಕತೆ ಸಂಪೂರ್ಣ ಕುಸಿದಿದ್ದು, ಸೋಮವಾರ ಮಧ್ಯರಾತ್ರಿಯಿಂದ ದೇಶದಲ್ಲಿ ಕೇವಲ ಅಗತ್ಯ ಸೇವೆಗಳು ಮಾತ್ರ ಲಭ್ಯವಿರಲಿವೆ. ಒಟ್ಟಾರೆ ಇಡೀ ದೇಶ ಆರ್ಥಿಕ ಸಂಕಷ್ಟದಿಂದ ಸ್ಥಬ್ದಗೊಂಡಿದೆ.
ಕಚ್ಚಾ ತೈಲ ಆಮದು ಮಾಡಿಕೊಳ್ಳಲೂ ದುಡ್ಡಿಲ್ಲ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಕೈ ಚೆಲ್ಲಿದ್ದಾರೆ. ಹೀಗಾಗಿ ಮುಂದಿನ ಜುಲೈ ೧೦ರ ವರೆಗೆ ಕೇವಲ ತುರ್ತುಸೇವೆಗಳಿಗೆ ಮಾತ್ರ ಇಂಧನ ಒದಗಿಸಲಾಗುತ್ತದೆ ಎಂದು ಸರ್ಕಾರವೇ ಪ್ರಕಟಿಸಿದೆ.
ವಿದ್ಯುತ್ ಕೊರತೆ ಹೆಚ್ಚಿದ್ದು, ಲಿಫ್ಟ್ ಗಳ ಕಾರ್ಯನಿರ್ವಹಣೆಗೂ ಡಿಸೇಲ್ ದೊರೆಯುತ್ತಿಲ್ಲ. ಅಡುಗೆ ಅನಿಲ ಇಲ್ಲವಾಗಿದೆ. ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿವೆ, ಆದರೆ ಬಂಕ್‌ಗಳು ಕೆಲದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ದುಡ್ಡು ಕೊಟ್ಟರೂ ಪೆಟ್ರೋಲ್, ಡಿಸೇಲ್ ದೊರೆಯುತ್ತಿಲ್ಲ.
ಕೇವಲ ಆರೋಗ್ಯ ಸೇವೆ, ವಿದ್ಯುತ್ ಮತ್ತು ರಫ್ತು ಉದ್ಯಮಗಳಿಗೆ ಮಾತ್ರ ಇಂಧನ ಒದಗಿಸಲು ಸೋಮವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಮೂಲಕ ಮಾತ್ರ ಇಂಧನ ಒದಗಿಸಲಾಗುತ್ತದೆ ಎಂದು ಸರ್ಕಾರಿ ವಕ್ತಾರರು ತಿಳಿಸಿದ್ದಾರೆ
ಬಂದರು, ಏರ್‌ಪೋರ್ಟ್ ಮತ್ತು ಕೃಷಿ ಹಾಗೂ ಆಹಾರ ವಿತರಣೆಗೆ ಇಂಧನ ಒದಗಿಸಲಾಗುತ್ತದೆ. ಬೇರೆಲ್ಲಾ ಕ್ಷೇತ್ರದವರು ವಾಹನ ಬಳಕೆಯನ್ನು ಬಿಟ್ಟು, ಮನೆಯಿಂದಲೇ ಕೆಲಸ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿದೆ. ಬೀದಿಗಳಲ್ಲಿ ಲಾಕ್‌ಡೌನ್‌ನ ವಾತಾವರಣವಿದೆ.
ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ 700 ದಶಲಕ್ಷ ಡಾಲರ್ ( ೫.೪೬ ಲಕ್ಷ ಕೋಟಿ ರೂ.) ಸಾಲವನ್ನು ಹೊಂದಿದೆ. ಹೀಗಾಗಿ ಯಾರೂ ಕಚ್ಚಾ ತೈಲ ಮಾರಾಟ ಮಾಡಲು ಸಿದ್ಧರಿಲ್ಲ. ನಗದಿಗೆ ತೈಲ ಕೊಡಲೂ ಹಿಂಜರಿಯುತ್ತಿವೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಕಳೆದವಾರ ಹೇಳಿದ್ದರು. ಈಗ ರಷ್ಯಾದೊಂದಿಗೆ ಮಾತುಕತೆ ನಡೆಸುತ್ತಿದ್ದು, ಕಚ್ಚಾ ತೈಲ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದನ್ನೂ ಓದಿ| ಶ್ರೀಲಂಕಾದ ಎಕಾನಮಿ ಪತನ, ತೈಲ ಆಮದಿಗೂ ದುಡ್ಡಿಲ್ಲ ಎಂದ ಪ್ರಧಾನಿ ರನಿಲ್ ವಿಕ್ರಮಸಿಂಘೆ