Site icon Vistara News

Queen Elizabeth II | ಬ್ರಿಟನ್‌ ರಾಣಿ ಎಲಿಜಬೆತ್‌ಗೆ ಕಣ್ಣಿರ ವಿದಾಯ, ಅಂತ್ಯಸಂಸ್ಕಾರದಲ್ಲಿ 10 ಲಕ್ಷ ಜನ ಭಾಗಿ

Final ritual

ಲಂಡನ್‌: ದೇಶ-ವಿದೇಶಗಳ ಸಾವಿರಾರು ಗಣ್ಯರು, ಲಕ್ಷಾಂತರ ಜನರು ಹಾಗೂ ಬ್ರಿಟನ್‌ ರಾಜ ಮನೆತನದ ನೂರಾರು ಸದಸ್ಯರು ಕಣ್ಣೀರಿನ ಮೂಲಕ ರಾಣಿ ಎಲಿಜಬೆತ್‌ II‌ (Queen Elizabeth II) ಅವರಿಗೆ ವಿದಾಯ ಹೇಳಿದರು. ಸೋಮವಾರ ಇಡೀ ದಿನ ಹತ್ತಾರು ವಿಧಿವಿಧಾನ, ಪ್ರಕ್ರಿಯೆಗಳನ್ನು ಅನುಸರಿಸಿ ರಾಣಿ ಎಲಿಜಬೆತ್‌ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ತಾಯಿಗೆ ಅಂತಿಮ ನಮನ ಸಲ್ಲಿಸಿದ ಕಿಂಗ್‌ ಚಾರ್ಲ್ಸ್.

ರಾಜ ಮನೆತನದ ವಿಧಿವಿಧಾನಗಳಂತೆ ರಾಣಿ ಎಲಿಜಬೆತ್‌ ಅವರ ಅಂತ್ಯಕ್ರಿಯೆ ನಡೆಯಿತು. ಸೋಮವಾರ ಮಧ್ಯಾಹ್ನ ರಾಣಿಯ ಪಾರ್ಥಿವ ಶರೀರವನ್ನು ಬಕಿಂಗ್‌ಹ್ಯಾಮ್‌ ಪ್ಯಾಲೆಸ್‌ನಿಂದ ವೆಸ್ಟ್‌ಮಿಸ್ಟರ್‌ ಹಾಲ್‌ಗೆ, ಅಲ್ಲಿಂದ ವೆಸ್ಟ್‌ ಮಿನಿಸ್ಟರ್‌ ಅಬ್ಬೆಗೆ ಹಾಗೂ ಕೊನೆಗೆ ವಿಂಡ್ಸರ್‌ ಕ್ಯಾಸಲ್‌ನಲ್ಲಿರುವ ಸೇಂಟ್‌ ಜಾರ್ಜ್‌ ಚಾಪೆಲ್‌ನಲ್ಲಿ ಸಮಾಧಿ ಮಾಡಲಾಯಿತು.

ಕಿಂಗ್‌ ಜಾರ್ಜ್‌ VI ಮೆಮೋರಿಯಲ್‌ ಚಾಪೆಲ್‌ನಲ್ಲಿ ಪತಿ ಫ್ರಿನ್ಸ್‌ ಫಿಲಿಪ್‌ ಅವರ ಸಮಾಧಿ ಬಳಿಯೇ ಕ್ವೀನ್‌ ಎಲಿಜಬೆತ್‌ ಅವರ ಸಮಾಧಿ ಮಾಡಲಾಯಿತು. ಇದೇ ಚಾಪೆಲ್‌ನಲ್ಲಿ ಕಿಂಗ್‌ ಜಾರ್ಜ್‌ VI, ರಾಣಿ ತಾಯಿ, ಸಹೋದರಿಯ ಶವಗಳನ್ನೂ ಸಮಾಧಿ ಮಾಡಲಾಗಿದೆ.

ಕಿಂಗ್‌ ಚಾರ್ಲ್ಸ್‌ III, ಪ್ರಿನ್ಸ್‌ ಜಾರ್ಜ್‌, ಪ್ರಿನ್ಸೆಸ್‌ ಚಾರ್ಲೊಟ್‌, ಕೇಟ್‌ ಮಿಡಲ್‌ಟನ್‌, ಕೆಮಿಲ್ಲಾ, ಪ್ರಿನ್ಸ್‌ ಆ್ಯಂಡ್ರ್ಯೂ, ಪ್ರಿನ್ಸ್‌ ಎಡ್ವರ್ಡ್‌, ಪ್ರಿನ್ಸ್‌ ಹ್ಯಾರಿ, ಮೇಘನ್‌ ಮರ್ಕೆಲ್‌ ಸೇರಿ ರಾಜಮನೆತನದ ಹಲವರು ಅಂತಿಮ ದರ್ಶನ ಪಡೆದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಸೇರಿ ಜಗತ್ತಿನ ೨ ಸಾವಿರಕ್ಕೂ ಅಧಿಕ ಗಣ್ಯರು ಕಣ್ಣೀರ ವಿದಾಯ ಹೇಳಿದರು.

ದ್ರೌಪದಿ ಮುರ್ಮು ಭಾಗಿ

ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕ್ವೀನ್‌ ಎಲಿಜಬೆತ್‌ ಅವರ ಅಂತಿಮ ದರ್ಶನ ಪಡೆದರು. ವೆಸ್ಟ್‌ಮಿನಿಸ್ಟರ್‌ ಅಬ್ಬೆಯಲ್ಲಿ ಬ್ರಿಟನ್‌ ರಾಣಿಯ ಅಂತಿಮ ದರ್ಶನ ಪಡೆದರು. ಹಾಗೆಯೇ, ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಸ್ಮರಣಾರ್ಥ ಲಂಡನ್‌ನ ಲಾಂಕ್ಯಾಸ್ಟರ್‌ ಹೌಸ್‌ನಲ್ಲಿ ಸಂತಾಪ ಪುಸ್ತಕ (Condolence Book)ದಲ್ಲಿ ಸಹಿ ಹಾಕಿದರು. ಜತೆಗೆ, ಕಿಂಗ್‌ ಚಾರ್ಲ್ಸ್‌ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.

ಸುದೀರ್ಘವಾಗಿ ಬ್ರಿಟನ್‌ ರಾಣಿಯಾಗಿ ಆಡಳಿತ ನಡೆಸಿದ ಖ್ಯಾತಿ ರಾಣಿ ಎಲಿಜಬೆತ್‌ ಅವರದ್ದಾಗಿದೆ. ಸುಮಾರು ೭೦ ವರ್ಷಗಳ ಕಾಲ ಅವರು ಬ್ರಿಟನ್‌ ರಾಣಿಯಾಗಿದ್ದರು. ಸುದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ಕ್ವೀನ್‌, ಸೆಪ್ಟೆಂಬರ್‌ ೮ರಂದು ನಿಧನರಾದರು. ದೇಶಾದ್ಯಂತ ೧೦ ದಿನ ಶೋಕಾಚರಣೆ ಮಾಡಲಾಗಿದೆ.

ಇದನ್ನೂ ಓದಿ | ಮೆಚ್ಚಿನ ಜನತೆಗೆ ಮುಗಿಲಿನಿಂದ ದರ್ಶನ ನೀಡಿದಳೇ ರಾಣಿ ಎಲಿಜಬೆತ್!

Exit mobile version