ರಿಗಾ: ಕಳೆದ ಒಂದು ವರ್ಷದಿಂದ ರಷ್ಯಾ ಸತತವಾಗಿ ದಾಳಿ ಮಾಡುತ್ತಿರುವ ಕಾರಣ ಜಗತ್ತಿನ ಅನೇಕ ರಾಷ್ಟ್ರಗಳಿಂದ ಉಕ್ರೇನ್‌ಗೆ ಹಲವು ರೀತಿಯಲ್ಲಿ ನೆರವು ಸಿಗುತ್ತಿದೆ. ಶಸ್ತ್ರಾಸ್ತ್ರಗಳು, ಆಹಾರ ಸಾಮಗ್ರಿ, ಅಗತ್ಯ ಮೂಲ ಸೌಕರ್ಯ, ಹಣಕಾಸು ನೆರವು ನೀಡಲಾಗುತ್ತಿದೆ. ಇದೇ ರೀತಿ ಲ್ಯಾಟ್ವಿಯಾ ದೇಶವೂ ವಿಭಿನ್ನವಾಗಿ ಉಕ್ರೇನ್‌ಗೆ ನೆರವು ನೀಡುತ್ತಿದೆ. ಲ್ಯಾಟ್ವಿಯಾದಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ಕಾರುಗಳನ್ನು ಜಪ್ತಿ ಮಾಡಿ, ಅವುಗಳನ್ನು ಉಕ್ರೇನ್ ಸೇನೆ ಹಾಗೂ ಆಸ್ಪತ್ರೆಗಳಿಗೆ ನೀಡಲಾಗಿದೆ.
ಕಳೆದ ಒಂದು ವರ್ಷದಿಂದ ಲ್ಯಾಟ್ವಿಯಾದಲ್ಲಿ ಹೆಚ್ಚು ಕುಡಿದು ವಾಹನ ಚಲಾಯಿಸುತ್ತಿರುವವರ ಕಾರುಗಳನ್ನು ಜಪ್ತಿ ಮಾಡಲಾಗುತ್ತಿದೆ. ಹೀಗೆ, ಪೊಲೀಸರು ನೂರಾರು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಆದರೀಗ, ಇವುಗಳನ್ನು ಉಕ್ರೇನ್ ಸೇನೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ನೀಡುವ ಮೂಲಕ ಮಾನವೀಯತೆ ಮೆರೆಯಲಾಗುತ್ತಿದೆ. ಈಗಾಗಲೇ ಲ್ಯಾಟ್ವಿಯಾ ದೇಶವು ಉಕ್ರೇನ್‌ಗೆ ಏಳು ಕಾರುಗಳನ್ನು ನೀಡಿದೆ.
ಲ್ಯಾಟ್ವಿಯಾದಲ್ಲಿ ಕೇವಲ 19 ಲಕ್ಷ ಜನರಿದ್ದಾರೆ. ಆದರೂ, ಇತ್ತೀಚೆಗೆ ಕುಡಿದು ವಾಹನ ಚಲಾಯಿಸುತ್ತಿರುವವರ ಪ್ರಮಾಣ ಜಾಸ್ತಿಯಾದ ಕಾರಣ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ. ಕಳೆದ ಎರಡು ತಿಂಗಳಲ್ಲಿಯೇ ಲ್ಯಾಟ್ವಿಯಾದಲ್ಲಿ 200 ಕಾರುಗಳನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: Volodymyr Zelenskyy: ನಟರಾಗಿದ್ದ ಜೆಲನ್‌ಸ್ಕಿ ಉಕ್ರೇನ್ ಅಧ್ಯಕ್ಷರಾಗಿದ್ದು ಹೇಗೆ? ನಿಜವಾಯಿತು ಟಿವಿ ಧಾರಾವಾಹಿ ಕಥೆ