Site icon Vistara News

Laughing Gas: ಲಾಫಿಂಗ್‌ ಗ್ಯಾಸ್‌ ಅತಿಯಾದ ಬಳಕೆಯಿಂದ ವಿದ್ಯಾರ್ಥಿನಿ ಸಾವು; ಏನಿದು ಪ್ರಕರಣ?

Ellen Mercer

Ellen Mercer

ಲಂಡನ್‌: ದೀರ್ಘ ಕಾಲದ ನಗುವ ಅನಿಲದ ಬಳಕೆಯಿಂದಾಗಿ ಇಂಗ್ಲೆಂಡ್‌ನ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. 24 ವರ್ಷದ ಎಲ್ಲೆನ್ ಮರ್ಸರ್ (Ellen Mercer) ಮೃತ ವಿದ್ಯಾರ್ಥಿನಿ. ಇವರು ಬಂಕಿಂಗ್‌ ಹ್ಯಾಮ್‌ಶೈರ್‌ನ ಗೆರಾರ್ಡ್ಸ್‌ ಕ್ರಾಸ್‌ನ ನಿವಾಸಿ ಶರೋನ್‌ ಕುಕ್‌ ಎಂಬವರ ಪುತ್ರಿ. ಕಳೆದ ವರ್ಷ ಫೆಬ್ರವರಿ 10ರಂದು ಎಲ್ಲೆನ್ ಮರ್ಸರ್ ಮೃತಪಟ್ಟಿದ್ದರು. ಅವರ ಸಾವಿನ ಬಗ್ಗೆ ತನಿಖೆ ನಡೆಸಿದಾಗ ಪ್ರತಿದಿನ ಎರಡರಿಂದ ಮೂರು ದೊಡ್ಡ ಬಾಟಲಿಗಳಷ್ಟು ನಗುವ ಅನಿಲ (Laughing Gas) ಎಂದು ಕರೆಯಲ್ಪಡುವ ನೈಟ್ರಸ್‌ ಆಕ್ಸೈಡ್‌ (Nitrous oxide) ಅನ್ನು ಬಳಸುತ್ತಿರುವುದು ಕಂಡು ಬಂದಿತ್ತು. ಈ ವ್ಯಸನವೇ ಸಾವಿಗೆ ಕಾರಣ ಎಂದು ಇದೀಗ ವರದಿ ತಿಳಿಸಿದೆ.

ʼʼಕಳೆದ ವರ್ಷ ಫೆಬ್ರವರಿ 9ರಂದು ಬೆಳಗ್ಗೆ ಎಲ್ಲೆನ್ ಮರ್ಸರ್ ಅವರು ತುರ್ತು ಸೇವೆಗಳನ್ನು ಕೋರಿ ವೈದ್ಯರನ್ನು ಸಂಪರ್ಕಿಸಿದ್ದರು. ತೆರಳಿ ನೋಡಿದಾಗ ಆಕೆ ನಡೆಯಲು ಕಷ್ಟಡುವ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ವೆಕ್ಸ್ಹ್ಯಾಮ್ ಪಾರ್ಕ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ದಾಖಲಿಸಲಾಯಿತು. ಆದರೆ ಸುಮಾರು 24 ಗಂಟೆಗಳ ನಂತರ ಫೆಬ್ರವರಿ 10ರಂದು ಅವರು ನಿಧನ ಹೊಂದಿದರುʼʼ ಎಂದು ಬರ್ಕ್ಷೈರ್ ಕರೋನರ್ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಲಾಗಿದೆ.

ʼʼಸಾಮಾನ್ಯವಾಗಿ ನಗುವ ಅನಿಲ ಎಂದು ಕರೆಯಲ್ಪಡುವ ʼನೈಟ್ರಸ್ ಆಕ್ಸೈಡ್ʼ ಎಲ್ಲೆನ್ ಮರ್ಸರ್ ಸಾವಿಗೆ ಕಾರಣʼʼ ಎಂದು ಹಿರಿಯ ಶವಪರೀಕ್ಷಕ ಹೈಡಿ ಕಾನರ್ ವಿಚಾರಣೆ ವೇಳೆ ಮಾಹಿತಿ ನೀಡಿದರು. ವೈದ್ಯಕೀಯ ತಜ್ಞರ ಪ್ರಕಾರ, ಹೆಚ್ಚಿನ ಪ್ರಮಾಣದಲ್ಲಿ ನೈಟ್ರಸ್‌ ಆಕ್ಸೈಡ್‌ ತೆಗೆದುಕೊಳ್ಳುವುದರಿಂದ ವಿಟಮಿನ್‌ ಬಿ 12 ಕೊರತೆ ಮತ್ತು ರಕ್ತಹೀನತೆ ಕಾಡುತ್ತದೆ. ಮುಂದೆ ಇದು ಗಂಭೀರವಾದ ನರ ಹಾನಿಗೆ ಕಾರಣವಾಗುತ್ತದೆ. ಪರಿಣಾಮ ನಡೆಯಲೂ ಕಷ್ಟವಾಗುತ್ತದೆ.

ವಿಚಾರಣೆ ವೇಳೆ ಎಲ್ಲೆನ್ ಮರ್ಸರ್ ಸ್ನೇಹಿತರು, ಆಕೆ ದಿನಕ್ಕೆ ಎರಡರಿಂದ ಮೂರು ನೈಟ್ರಸ್ ಆಕ್ಸೈಡ್ ಬಾಟಲಿ ಬಳಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ. 2023ರಲ್ಲಿ ಅಲ್ಲಿನ ಸರ್ಕಾರವು ಅದನ್ನು ಕ್ಲಾಸ್ ಸಿ ಔಷಧ ಎಂದು ವರ್ಗೀಕರಿಸಿದೆ.

ನಿಷೇಧಕ್ಕೆ ಆಗ್ರಹ

ಮೃತ ವಿದ್ಯಾರ್ಥಿನಿಯ ತಾಯಿ ಶರೋನ್‌ ಕುಕ್‌ ಈ ಬಗ್ಗೆ ಮಾತನಾಡಿ, ʼʼನೈಟ್ರಸ್‌ ಆಕ್ಸೈಡ್‌ನಿಂದಾಗಿ ತಮ್ಮ ಮಗಳು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಿದ್ದಾಳೆ. ಮಗಳು ನೈಟ್ರಸ್‌ ಆಕ್ಸೈಡ್‌ ವ್ಯಸನಿಯಾಗಿದ್ದಳು ಎನ್ನುವುದು ತಿಳಿದಿರಲೇ ಇಲ್ಲʼʼ ಎಂದು ತಿಳಿಸಿದ್ದಾರೆ. ಹೀಗಾಗಿ ದೇಶದಲ್ಲಿ ನೈಟ್ರಸ್‌ ಆಕ್ಸೈಡ್‌ ಬಳಕೆ ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Israel Airstrike: ಇಸ್ರೇಲ್‌ ವಾಯುದಾಳಿಗೆ ಹಮಾಸ್‌ ಮುಖ್ಯಸ್ಥನ 3 ಮಕ್ಕಳು, 4 ಮೊಮ್ಮಕ್ಕಳು ಬಲಿ

ʼʼಇದು ಮಾರಣಾಂತಿಕವಾಗಿದ್ದು, ಎ ವರ್ಗದ ಔಷಧ ಎಂದು ಕರೆಯಬೇಕು. ಇದು ಕಾನೂನುಬದ್ಧವಾಗಿಲ್ಲ. ಯಾರಾದರೂ ನೈಟ್ರಸ್‌ ಆಕ್ಸೈಡ್‌ ಮಾರಾಟ ಮಾಡುತ್ತಿದ್ದರೆ ಅವರನ್ನು ತಕ್ಷಣವೇ ಜೈಲಿಗೆ ಹಾಕಬೇಕು. ಇದು ಯಾವುದೇ ವ್ಯಕ್ತಿಯ ಪ್ರಾಣಕ್ಕಿಂತ ಅಮೂಲ್ಯವಲ್ಲʼʼ ಎಂದು ಅವರು ಹೇಳಿದ್ದಾರೆ. ಸದ್ಯ ಈ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ.

Exit mobile version