Site icon Vistara News

Copy Cat | ಎಕ್ಸಾಂನಲ್ಲಿ ಕಾಪಿ ಹೊಡೆಯಲು ಪೆನ್‌ಗಳ ಮೇಲೆ ಸಿಲಬಸ್‌ ಕೆತ್ತಿದ ಭೂಪ, What An Idea ಎಂದ ಜನ

Pen

ಮ್ಯಾಡ್ರಿಡ್: ಪರೀಕ್ಷೆ ಬರೆಯುವ ವೇಳೆ ಒಂದು ಪೆನ್‌ ಹಾಳಾದರೆ, ಇಂಕ್‌ ಖಾಲಿಯಾದರೆ ಇರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ಪೆನ್‌ ತೆಗೆದುಕೊಂಡು ಹೋಗುವುದು ರೂಢಿ. ಆದರೆ, ಸ್ಪೇನ್‌ನಲ್ಲಿ ವ್ಯಕ್ತಿಯೊಬ್ಬ ಪೆನ್‌ಗಳ ಮೇಲೆಯೇ ತನ್ನ ಸಿಲಬಸ್‌ಅನ್ನು ಚಿಕ್ಕ ಚಿಕ್ಕ ಅಕ್ಷರಗಳನ್ನು ಕೆತ್ತಿ, ಕಾಪಿ ಹೊಡೆಯುವ (Copy Cat) ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾನೆ.

ಸ್ಪೇನ್‌ನಲ್ಲಿ ಕಾನೂನು ಓದುತ್ತಿದ್ದ ವ್ಯಕ್ತಿಯು ಪರೀಕ್ಷೆಗೆ ೧೧ ಪೆನ್‌ಗಳನ್ನು ತೆಗೆದುಕೊಂಡು ಹೋಗಿದ್ದಾನೆ. ಅಷ್ಟೂ ಪೆನ್‌ಗಳ ಮೇಲೆ ನೀಟಾಗಿ ಪಠ್ಯವನ್ನು ಚಿಕ್ಕ ಚಿಕ್ಕ ಅಕ್ಷರಗಳಲ್ಲಿ ಕೆತ್ತಿದ್ದಾನೆ. ಒಂದು ಕ್ಷಣಕ್ಕೆ ಸಾಮಾನ್ಯ ಪೆನ್‌ಗಳಂತೆ ಕಂಡರೂ ಅವುಗಳ ಮೇಲೆ ಸಣ್ಣ ಅಕ್ಷರಗಳಲ್ಲಿ ಇಡೀ ಪಠ್ಯವನ್ನೇ ಭಟ್ಟಿ ಇಳಿಸಿದ್ದಾನೆ.

ಪೆನ್‌ಗಳ ಮೇಲೆ ಅಕ್ಷರಗಳ ಲೀಲೆ…

ಯೊಲಂದ ಡೆ ಲುಚಿ (Yolanda De Lucchi) ಎಂಬ ಪ್ರೊಫೆಸರ್‌ ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ನನ್ನ ಕಚೇರಿ ಸ್ವಚ್ಛಗೊಳಿಸಿದಾಗ ಈ ಪೆನ್‌ಗಳು ಸಿಕ್ಕವು. ಗಮನ ಹರಿಸಿ ನೋಡಿದಾಗ ಇವುಗಳ ಮೇಲೆ ಸಿಲಬಸ್‌ ಇತ್ತು. ಕೆಲ ವರ್ಷದ ಹಿಂದೆ ನಮ್ಮದೇ ವಿದ್ಯಾರ್ಥಿಯೊಬ್ಬ ಹೀಗೆ ಕಾಪಿ ಮಾಡಿದ್ದಾನೆ” ಎಂದು ಹೇಳಿದ್ದಾರೆ.

ವಿದ್ಯಾರ್ಥಿಯ ಪರಿಶ್ರಮಕ್ಕೆ, ಕಾಪಿ ಹೊಡೆಯುವ ಐಡಿಯಾಗೆ ಜಾಲತಾಣದಲ್ಲಿ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ, “ಇದೇ ಪರಿಶ್ರಮವನ್ನು ಓದಲು ಹಾಕಿದ್ದರೆ ಆತ ರ‍್ಯಾಂಕ್‌ ಬರುತ್ತಿದ್ದ” ಎಂದು ಕಾಲೆಳೆದಿದ್ದಾರೆ. ಅಂದಹಾಗೆ, ಕಾಪಿ ಮಾಡಿದ ವಿದ್ಯಾರ್ಥಿಗೆ ಎಷ್ಟು ಅಂಕ ಸಿಕ್ಕವು, ಆತ ಈಗ ಯಾವ ಕೋರ್ಟ್‌ನಲ್ಲಿ ವಾದ ಮಂಡಿಸುತ್ತಿದ್ದಾನೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ | KPTCL Exam | ಗದಗದಲ್ಲಿ ಕೆಪಿಟಿಸಿಎಲ್‌ ಪರೀಕ್ಷೆ ಅಕ್ರಮ: ಉಪ ಪ್ರಾಚಾರ್ಯ, ಮತ್ತವರ ಮಗನ ಬಂಧನ

Exit mobile version