ಲಿಬಿಯಾ: ಈ ದಶಕದಲ್ಲೇ ಭೀಕರವಾದ ಪ್ರವಾಹ ಲಿಬಿಯಾ ದೇಶದ ಡೆರ್ನಾ ನಗರದಲ್ಲಿ (Libya flood) ಸಂಭವಿಸಿದ್ದು, ಸುಮಾರು 20,000 ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ ಅಥವಾ ಜಲಸಮಾಧಿಯಾಗಿದ್ದಾರೆ. ಸುಮಾರು 30,000ಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.
ಧ್ವಂಸಗೊಂಡ ಡರ್ನಾ ನಗರದ ನಿವಾಸಿಗಳು ಕಾಣೆಯಾದ ತಮ್ಮ ಸಂಬಂಧಿಕರಿಗಾಗಿ ಹತಾಶರಾಗಿ ಹುಡುಕುತ್ತಿದ್ದಾರೆ. ರಕ್ಷಣಾ ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತಿದ್ದು, ಹೆಚ್ಚಿನ ಸಹಕಾರಕ್ಕಾಗಿ ಮೊರೆಯಿಟ್ಟಿದ್ದಾರೆ. ಸಾವಿರಾರು ಜನರು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅವರ ದೇಹಗಳು ಸಮುದ್ರಕ್ಕೆ ಹೋಗಿವೆ ಎಂದು ಶಂಕಿಸಲಾಗಿದೆ.
ಮೆಡಿಟರೇನಿಯನ್ ಸಮುದ್ರ ತೀರದ ನಗರವಾದ ಡೆರ್ನಾದಲ್ಲಿ ಭಾನುವಾರ ರಾತ್ರಿ ʼಸ್ಟಾರ್ಮ್ ಡೇನಿಯಲ್ʼ ಎಂಬ ಭೀಕರ ಚಂಡಮಾರುತ ಬೀಸಿತು. ಭಾರಿ ಮಳೆಗಾಳಿಯ ಪರಿಣಾಮ ನಗರದ ಮೇಲ್ಭಾಗದಲ್ಲಿರುವ ವಾಡಿ ಡೆರ್ನಾ ಎಂಬ ನದಿಗೆ ಕಟ್ಟಿದ ಅಣೆಕಟ್ಟುಗಳು ತುಂಬಿಕೊಂಡು ಒಡೆದವು. ಅವುಗಳ ಕೆಳಭಾಗದಲ್ಲಿರುವ ಕಟ್ಟಡಗಳು ಹಾಗೂ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತು. ಬಹುಮಹಡಿ ಕಟ್ಟಡಗಳು ಕುಸಿದವು. ರಾತ್ರಿ ನೆಮ್ಮದಿಯಾಗಿ ನಿದ್ರಿಸಿದ್ದ ಸಾವಿರಾರು ಜನ ಈ ಕೆಸರು ನೀರಿನಲ್ಲಿ ಜಲಸಮಾಧಿಯಾದರು. ಸಾವಿರಾರು ಮಂದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸುಮಾರು 90,000 ಜನ ವಾಸಿಸುತ್ತಿರುವ ಈ ನಗರಕ್ಕೆ ನೆರವು 36 ಗಂಟೆಗಳ ನಂತರ ಹರಿದುಬರಲಾರಂಭಿಸಿದೆ. ಇಲ್ಲಿನ ಮೇಯರ್ ಹೇಳುವ ಪ್ರಕಾರ ನಗರದ ಸುಮಾರು 20 ಶೇಕಡ ಭಾಗ ನಾಶವಾಗಿದೆ. ನದಿಗೆ ತೀರಾ ಹತ್ತಿರದಲ್ಲಿ ಕಟ್ಟಿರುವ ಹಳೆಯ ಕಾಲನಿಗಳು, ಒಕ್ಕಟ್ಟಾದ ಕಟ್ಟಡಗಳು ಹಾಗೂ ಬೀದಿಗಳು ಈ ವಿನಾಶಕ್ಕೆ ಪ್ರಮುಖ ಕಾರಣಗಳಾಗಿವೆ.
ಡೆರ್ನಾ ನಗರ ಪಶ್ಚಿಮ ಭಾಗದಲ್ಲಿ, ಸಮುದ್ರತೀರದಲ್ಲಿದೆ. ಲಿಬಿಯಾ ದೇಶವನ್ನು ಪ್ರಸ್ತುತ ಎರಡು ಆಡಳಿತಗಳು ಆಳುತ್ತಿವೆ. ಒಂದು ಭಾಗ ಪೂರ್ವವನ್ನು ಹಾಗೂ ಇನ್ನೊಂದು ಭಾಗ ಪಶ್ಚಿಮವನ್ನು ಆಳುತ್ತಿದ್ದು, ಎರಡೂ ವೈರಿ ಗುಂಪುಗಳಾಗಿವೆ. ಹೀಗಾಗಿ ರಕ್ಷಣಾ ಕಾರ್ಯಾಚರಣೆಯೂ ಸಕಾಲದಲ್ಲಿ ತಲುಪಿಲ್ಲ. ಇದು ಕೂಡ ಹೆಚ್ಚಿನ ಸಾವುನೋವಿಗೆ ಕಾರಣವಾಗಿದೆ. ಚಂಡಮಾರುತ ಎಲ್ಲ ಮೂಲಸೌಕರ್ಯಗಳನ್ನೂ ಕತ್ತರಿಸಿಹಾಕಿದ್ದು, ಸಂಪರ್ಕ ಕಷ್ಟವಾಗಿದೆ.
ಲಿಬಿಯಾ ಇತರ ಕೆಲವು ನಗರಗಳನ್ನೂ ಚಂಡಮಾರುತ ಬಾಧಿಸಿದೆ. ಬಯ್ದಾ, ಸುಸಾ, ಮರ್ಜ್, ಶಹತ್ ನಗರಗಳಲ್ಲಿ ಚಂಡಮಾರುತ ಹಾವಳಿ ಎಬ್ಬಿಸಿದ್ದು, ಇಲ್ಲಿ 50ಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ.
ಇದನ್ನೂ ಓದಿ: Morocco Earthquake: ಮೊರಾಕೊ ಭೂಕಂಪ, 2,000 ದಾಟಿದ ಸಾವಿನ ಸಂಖ್ಯೆ