ಲಂಡನ್: ಹಲವು ಹಗರಣಗಳು, ಸಾಲು ಸಾಲು ಸಚಿವರ ರಾಜೀನಾಮೆಯಿಂದಾಗಿ ಬ್ರಿಟನ್‌ನಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ತಾರ್ಕಿಕ ಅಂತ್ಯ ಕಂಡಿದೆ. ನಿರೀಕ್ಷೆಯಂತೆಯೇ ಬ್ರಿಟನ್‌ನ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ (Liz Truss) ಅವರು ಆಯ್ಕೆಯಾಗಿದ್ದಾರೆ. ಆದರೆ, ಇನ್ಫಿ ನಾರಾಯಣಮೂರ್ತಿ ಅವರ ಅಳಿಯ, ಭಾರತ ಮೂಲದ ರಿಷಿ ಸುನಕ್ ಅವರು ಹಿನ್ನಡೆ ಅನುಭವಿಸಿದ್ದು, ಭಾರತೀಯರಿಗೆ ತುಸು ನಿರಾಸೆ ಮೂಡಿಸಿದೆ.
ಲಿಜ್ ಟ್ರಸ್ ಅವರು 81,326 ಮತ ಗಳಿಸಿದರೆ, ರಿಷಿ ಸುನಾಕ್ ಅವರಿಗೆ 60,399 ಮತ ಲಭಿಸಿದವು. ಒಟ್ಟು 1,72,437 ಮತಗಳ ಪೈಕಿ ಶೇ.82.6ರಷ್ಟು ಮತದಾನ ದಾಖಲಾಗಿತ್ತು. 654 ಮತಗಳು ತಿರಸ್ಕೃತಗೊಂಡಿದ್ದವು. ಇದರೊಂದಿಗೆ ಟ್ರಸ್ ಅವರು ಸುನಕ್ ವಿರುದ್ಧ 20,927 ಮತಗಳಿಂದ ಗೆಲುವು ಸಾಧಿಸಿದಂತಾಗಿದೆ.
ನೂತನ ಪ್ರಧಾನಿ ಆಯ್ಕೆಗೆ ನಡೆದ ಹಲವು ಸುತ್ತಿನ ಮತದಾನದ ವೇಳೆ ಆರಂಭಿಕ ಸುತ್ತುಗಳಲ್ಲಿ ರಿಷಿ ಸುನಕ್ ಅವರು ಮುನ್ನಡೆ ಸಾಧಿಸಿದ್ದರು. ಆದರೆ, ನಂತರದ ಸುತ್ತುಗಳಲ್ಲಿ ಲಿಜ್ ಟ್ರಸ್ ಅವರು ಮುನ್ನಡೆ ಸಾಧಿಸಿದ್ದರು. ಹಾಗಾಗಿ, ಅಧಿಕೃತ ಘೋಷಣೆಗೂ ಮೊದಲೇ ಲಿಜ್ ಟ್ರಸ್ ಅವರೇ ನೂತನ ಪ್ರಧಾನಿ ಆಗುತ್ತಾರೆ ಎಂಬುದು ಖಚಿತವಾಗಿತ್ತು. ಹಗರಣಗಳು ಹಾಗೂ ಹಗರಣಗಳಿಂದ ಬೇಸತ್ತು ಸಂಪುಟದ ಹಲವು ಸಚಿವರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಜುಲೈನಲ್ಲಿ ಬೋರಿಸ್ ಜಾನ್ಸನ್ ಪದತ್ಯಾಗ ಮಾಡುವುದಾಗಿ ಘೋಷಿಸಿದ್ದರು.
3ನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ
ಲಿಜ್ ಟ್ರಸ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಮೂರನೇ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಥೆರೆಸಾ ಮೇ ಹಾಗೂ ಮಾರ್ಗರೇಟ್ ಥ್ಯಾಚರ್ ಅವರು ಇದುವರೆಗೆ ಆಯ್ಕೆಯಾದ ಮಹಿಳಾ ಪ್ರಧಾನಿಗಳು ಎನಿಸಿದ್ದರು. ಈಗ ಇವರ ಸಾಲಿಗೆ ಲಿಜ್ ಟ್ರಸ್ ಅವರೂ ಸೇರಿದ್ದಾರೆ.
ಮುಂದಿನ ಪ್ರಕ್ರಿಯೆ ಏನು?
ನಿರ್ಗಮಿತ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಮಂಗಳವಾರ ಬ್ರಿಟನ್ ರಾಣಿ ಎಲಿಜಬೆತ್ ಅವರಿಗೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ. ಲಿಜ್ ಟ್ರಸ್ ಅವರೂ ರಾಣಿ ಎಲಿಜಬೆತ್ ಅವರನ್ನು ಭೇಟಿಯಾಗಲಿದ್ದಾರೆ. ಬುಧವಾರ ಬೆಳಗ್ಗೆ ನೂತನ ಪ್ರಧಾನಿಯು ಸಂಪುಟ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | ವಿಸ್ತಾರ Explainer | ಬ್ರಿಟನ್ ಪಿಎಂ ನೇಮಕ ಹೇಗೆ? ಪ್ರಕ್ರಿಯೆಗಳೇನು? ಕ್ವೀನ್ ಎಲಿಜಬೆತ್ ಪಾತ್ರವೇನು?