Site icon Vistara News

Britain PM | ಬ್ರಿಟನ್ ಮುಂದಿನ ಪ್ರಧಾನಿ ಲಿಜ್ ಟ್ರಸ್, ರಿಷಿ ಸುನಕ್‌ಗೆ ಕೈ ತಪ್ಪಿದ ಪಟ್ಟ

Liz and Rishi

ಲಂಡನ್‌: ಬ್ರಿಟನ್‌ನ ಮುಂದಿನ ಪ್ರಧಾನಿ (Britain PM) ಯಾರಾಗಲಿದ್ದಾರೆ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರಕುತ್ತಿದೆ. ಹೌದು, ನಿರೀಕ್ಷೆಯಂತೆ ಲಿಜ್ ಟ್ರಸ್ (Liz Truss) ಬ್ರಿಟನ್ ಪ್ರಧಾನಿಯಾಗುವುದು ಪಕ್ಕಾಗಿದೆ. ಭಾರತೀಯ ಸಂಜಾತ ಮತ್ತು ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ (Rishi Sunak) ಅಂತಿಮ ಸ್ಪರ್ಧೆಯಲ್ಲಿ ಟ್ರಸ್ ಎದುರು ಸೋಲೊಪ್ಪಿಕೊಳ್ಳುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ ಬ್ರಿಟನ್‌ ಪ್ರಧಾನಿಯಾಗುವ ಅವಕಾಶವನ್ನು ಸುನಕ್ ಕಳೆದುಕೊಂಡಿದ್ದಾರೆ.

ಪ್ರಧಾನಿ ಹುದ್ದೆಗೆ ಯಾರಾಗಬೇಕೆಂದು ಕನ್ಸರ್ವೇಟಿವ್ ಪಕ್ಷದೊಳಗೇ ನಡೆದ ಬಹು ಹಂತದ ಪ್ರಕ್ರಿಯೆಯಲ್ಲಿ ಹಲವಾರು ಅಭ್ಯರ್ಥಿಗಳಿದ್ದರು. ಆರಂಭದ ಕೆಲವು ಸುತ್ತುಗಳಲ್ಲಿ ರಿಷಿ ಸುನಕ್ ಮುಂದಿದ್ದರು. ಆದರೆ, ಅಂತಿಮ ಸುತ್ತು ಎದುರಾಗುತ್ತಿರುವ ಹಾಗೆಯೇ ಅವರು ಅದೇ ಓಟವನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ರಿಷಿ ಸುನಕ್ ಮತ್ತು ಲಿಜ್ ಟ್ರಸ್ ನಡುವಿನ ಸ್ಪರ್ಧೆಯಲ್ಲಿ ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರು ಲಿಜ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಲಿಜ್ ಟ್ರಸ್ ಅವರು ಬ್ರಿಟನ್‌ನ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗುವುದು ಖಚಿತವಾಗಿದೆ.

ಅಂತಿಮ ಸುತ್ತಿನ ಮತದಾನಕ್ಕೆ ಮುಂಚೆ, ರಿಷಿ ಸುನಕ್ ಮತ್ತು ಲಿಜ್ ಟ್ರಸ್ ಅವರು ವ್ಯಾಪಕ ಪ್ರಚಾರ ಕೈಗೊಂಡಿದ್ದರು. ಡಜನ್‌ಗೂ ಹೆಚ್ಚು ಚುನಾವಣಾ ವೇದಿಕೆಗಳಲ್ಲಿ ಭಾಷಣ, ಮೂರು ಟಿವಿ ಚರ್ಚೆಗಳಲ್ಲಿ ಉಭಯ ನಾಯಕರು ಪಾಲ್ಗೊಂಡಿದ್ದರು. ಅಂತಿಮ ಸುತ್ತಿನ ಫಲಿತಾಂಶ ಸೋಮವಾರ ಪ್ರಕಟವಾಗಲಿದ್ದು, ಪ್ರಧಾನಿ ಬೋರಿಸ್ ಜಾನ್ಸನ್ ಅವರು ಔಪಚಾರಿಕವಾಗಿ ತಮ್ಮ ರಾಜೀನಾಮೆಯನ್ನು ಕ್ವೀನ್ ಎಲಿಜಬೆಥ್ ಅವರಿಗೆ ಮಾರನೇ ದಿನ ಸಲ್ಲಿಸಲಿದ್ದಾರೆ.

ಸುನಕ್‌ರನ್ನು ಹಿಂದಿಕ್ಕಿದ ಲಿಜ್
ಕನ್ಸರ್ವೇಟಿವ್ ಪಕ್ಷ ಹಾಗೂ ಜನರಿಂದಲೂ ಲಿಜ್ ಟ್ರಸ್‌ ಭಾರೀ ಬೆಂಬಲ ವ್ಯಕ್ತವಾಗಿದೆ. ಪರಿಣಾಮವಾಗಿ ರಿಷಿ ಸುನಕ್ ಅವರು ನಿಧಾನವಾಗಿ ಬೆಂಬಲವನ್ನು ಕಳೆದುಕೊಳ್ಳಬೇಕಾಯಿತು. ನೀತಿ ನಿರೂಪಣೆ ಮತ್ತು ತೆರಿಗೆಗೆ ಸಂಬಂಧಿಸಿದಂತೆ ಸುನಕ್ ಜನರಿಗೆ ತಮ್ಮ ನೀತಿಯನ್ನು ಮುಟ್ಟಿಸಲು ವಿಫಲವಾದರು. ಇದೇ ವಿಷಯದಲ್ಲಿ ಲಿಜ್ ವಿಶ್ವಾಸಗಳಿಸಲು ಯಶಸ್ವಿಯಾದರು.

ಲಿಜ್ ಅವರು ತೆರಿಗೆ ಕಡಿತದ ಬಗ್ಗೆ ತಿಳಿಸಿದ್ದಾರೆ. ಆದರೆ, ಅದರಿಂದ ಬಡವರಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂಬ ಭರವಸೆಯನ್ನು ಅವರು ನೀಡಿದ್ದು, ಅವರ ಗೆಲವಿಗೆ ಕಾರಣವಾಯಿತು. ಬ್ರಿಟನ್‌ನ ಮುಂದಿನ ಪ್ರಧಾನಿಯಾಗಲಿರುವ ಲಿಜ್ ಮುಂದೆ ಸಾಕಷ್ಟು ಸವಾಲುಗಳೂ ಇವೆ.

ಇದನ್ನೂ ಓದಿ | Viral Video | ಲಂಡನ್​​ನಲ್ಲಿ ಗೋಪೂಜೆ ಮಾಡಿದ ರಿಷಿ ಸುನಕ್​​ ದಂಪತಿ; ಮಂತ್ರ ಘೋಷದೊಂದಿಗೆ ಆರತಿ

Exit mobile version