Site icon Vistara News

Sri Lanka | ಶ್ರೀಲಂಕಾಗೆ ಸಾಲ, ಚೀನಾವನ್ನು ಹಿಂದಿಕ್ಕಿದ ಭಾರತ!

India and Sril Lanka

ಕೊಲಂಬೊ: ಆರ್ಥಿಕವಾಗಿ ದಿವಾಳಿಯಾಗಿರುವ ದ್ವೀಪ ರಾಷ್ಟ್ರ ಶ್ರೀಲಂಕಾ(Sri Lanka)ಗೆ ಭಾರತವು ಕಳೆದ ನಾಲ್ಕು ತಿಂಗಳಲ್ಲಿ ಒಟ್ಟು 968 ದಶಲಕ್ಷ ಡಾಲರ್ ಸಾಲವನ್ನು ನೀಡಿದೆ. ಈ ಶ್ರೀಲಂಕಾಗೆ ಸಾಲ ನೀಡುವ ವಿಷಯದಲ್ಲಿ ಚೀನಾವನ್ನು ಭಾರತವು ಹಿಂದಿಕ್ಕಿದೆ. ಕಳೆದ ಐದು ವರ್ಷದಲ್ಲಿ ಚೀನಾ ಶ್ರೀಲಂಕಾಗೆ 947 ದಶಲಕ್ಷ ಡಾಲರ್ ಸಾಲ ನೀಡಿತ್ತು. ಆ ಮೂಲಕ ಮೊದಲನೇ ಸ್ಥಾನದಲ್ಲಿತ್ತು. ಮತ್ತೊಂದೆಡೆ, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್(ಎಡಿಬಿ) ಬಹುಪಕ್ಷೀಯ ಸಾಲದಾತ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದೆ. ಐದು ವರ್ಷದಲ್ಲಿ ಶ್ರೀಲಂಕಾ ಎಡಿಬಿ ಒಟ್ಟು610 ದಶಲಕ್ಷ ಡಾಲರ್ ಸಾಲ ನೀಡಿದೆ.

ಆರ್ಥಿಕವಾಗಿ ದಿವಾಳಿಯಾಗಿರುವ ಶ್ರೀಲಂಕಾಗೆ ಈಗ ನೆರವಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತವು ಸೇರಿದಂತೆ ಹಲವು ರಾಷ್ಟ್ರಗಳು ಸಾಲವನ್ನು ನೀಡುತ್ತಿವೆ. ಕಳೆದ ನಾಲ್ಕು ತಿಂಗಳಲ್ಲಿ ಎಡಿಬಿ ಒಟ್ಟ 360 ಮಿಲಿಯನ್ ಡಾಲರ್ ಸಾಲ ನೀಡಿದ್ದರೆ, ಭಾರತವು 377 ದಶಲಕ್ಷ ಡಾಲರ್ ನೀಡಿದೆ ಎಂದು ಶ್ರೀಲಂಕಾದ ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

ಕೇವಲ ಸಾಲವನ್ನು ನೀಡುವುದರಲ್ಲಿ ಭಾರತವು ಮುಂದಿಲ್ಲ. ಬದಲಿಗೆ ಒಟ್ಟಾರೆಯಾಗಿ ನಾಲ್ಕು ಶತಕೋಟಿ ಡಾಲರ್ ಮೌಲ್ಯದ ಆಹಾರ ಹಾಗೂ ಆರ್ಥಿಕ ನೆರವು ನೀಡಲಾಗಿದೆ ಎಂದು ವಿಶ್ವ ಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ರುಚಿರಾ ಕಂಬೋಜ್ ಅವರು ತಿಳಿಸಿದ್ದಾರೆ.

ಆಗಸ್ಟ್ 22ರಂದು ಭಾರತವು ಶ್ರೀಲಂಕಾಗೆ ಸುಮಾರು 21,000 ಟನ್ ಫರ್ಟಿಲೈಸರ್ ನೀಡಿದೆ. ಶ್ರೀಲಂಕಾದಲ್ಲಿ ಭಾರತದ ಹೈಕಮಿಷನ್ ಕಚೇರಿಯು ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದೆ.

ಶ್ರೀಲಂಕಾಗೆ ನೆರವು ನೀಡುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮುಂಚೂಣಿಯಲ್ಲಿದೆ. ಕೇವಲ ಹಣ ಮಾತ್ರವಲ್ಲದೇ, ಆಹಾರ, ಬಟ್ಟೆ, ಫರ್ಟಿಲೈಸರ್, ತೈಲ ಸೇರಿದಂತೆ ಎಲ್ಲ ರೀತಿಯ ಸಹಾಯವನ್ನು ಭಾರತವು ಮಾಡುತ್ತಿದೆ. ಹೆಚ್ಚು ಕಡಿಮೆ ಒಂದೂವರ್ಷದಿಂದ ಶ್ರೀಲಂಕ ಭಾರೀ ಆರ್ಥಿಕ ತೊಂದರೆಯಿಂದ ಬಳಲುತ್ತಿದೆ.

ಇದನ್ನೂ ಓದಿ | ಶ್ರೀಲಂಕಾದಲ್ಲಿ ಲಂಗರು ಹಾಕಿದ ಚೀನಾ ನೌಕೆ; ಭಾರತದ ಆತಂಕವೇನು?, ರಕ್ಷಣೆಗಾಗಿ ಮಾಡಿಕೊಂಡ ಸಿದ್ಧತೆಗಳೇನು?

Exit mobile version