ವಾಷಿಂಗ್ಟನ್: ʼಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲʼ ಎನ್ನುವ ಗಾದೆ ಮಾತಿದೆ. ಅಮೆರಿಕದ ವ್ಯಕ್ತಿಯೊಬ್ಬರಿಗೆ ಈ ಮಾತು ಸರಿಯಾಗಿ ಅನ್ವಯವಾಗುತ್ತದೆ. ವಾಷಿಂಗ್ಟನ್ ಡಿಸಿಯ ವ್ಯಕ್ತಿಯೊಬ್ಬರು ಖರೀದಿಸಿದ್ದ ಲಾಟರಿ (Lottery) ಟಿಕೆಟ್‌ಗೆ ಬರೋಬ್ಬರಿ 340 ಮಿಲಿಯನ್ ಡಾಲರ್ (2,800 ಕೋಟಿ ರೂ.) ಹಣ ಬಹುಮಾನವಾಗಿ ಲಭಿಸಿದೆ ಎಂದು ಕಂಪೆನಿ ಆರಂಭದಲ್ಲಿ ಘೋಷಿಸಿತ್ತು. ಆದರೆ ಬಳಿಕ ಉಲ್ಟಾ ಹೊಡೆದು ತಾಂತ್ರಿಕ ದೋಷದಿಂದ ಹೆಸರು ತಪ್ಪಾಗಿ ಪ್ರಕಟವಾಗಿದೆ. ಹೀಗಾಗಿ ಹಣ ಕೊಡಲು ಸಾಧ್ಯವಿಲ್ಲ ಎಂದು ಸಾಗ ಹಾಕಿತು. ಇದರಿಂದ ಕೆರಳಿದ ಆ ವ್ಯಕ್ತಿ ಇದೀಗ ಕಾನೂನಿನ ಹೋರಾಟಕ್ಕೆ ಮುಂದಾಗಿದ್ದಾರೆ.
ಏನಿದು ಪ್ರಕರಣ?
ಕೋಟಿಗಟ್ಟಲೆ ರೂ. ಕೈಗೆ ಸಿಗದೆ ಇದೀಗ ಕಾನೂನಿನ ಹೋರಾಟಕ್ಕೆ ಇಳಿದ ವ್ಯಕ್ತಿಯ ಹೆಸರು ಜಾನ್ ಚೀಕ್ಸ್. ಇವರು ವಾಷಿಂಗ್ಟನ್ ಡಿಸಿಯ ನಿವಾಸಿ. 2023ರ ಜನವರಿ 6ರಂದು ಇವರು ಪವರ್‌ಬಾಲ್ ಮತ್ತು ಡಿ.ಸಿ. ಲಾಟರಿ ಸಂಸ್ಥೆಯಿಂದ ಲಾಟರಿ ಖರೀದಿಸಿದ್ದರು. ಮರುದಿನ ಅಂದರೆ ಜನವರಿ 7ರಂದು ಡ್ರಾ ನಡೆದಿತ್ತು. ಆದರೆ ಜಾನ್ ಚೀಕ್ಸ್ ಫಲಿತಾಂಶದ ಲೈವ್ ನೋಡಲು ಮರೆತಿದ್ದರು. ಹೀಗಾಗಿ 2 ದಿನದ ಬಳಿಕ ಪರಿಶೀಲಿಸಿದ್ದರು.
ಆ ವೇಳೆ ಅವರ ನಂಬರ್‌ಗೆ ಜಾಕ್‌ಪಾಟ್ ಹೊಡೆದಿತ್ತು. ಅಂದರೆ ಬರೋಬ್ಬರಿ 2,800 ಕೋಟಿ ರೂ. ಬಹುಮಾನ ಜಾನ್ ಚೀಕ್ಸ್ ಟಿಕೆಟ್ ನಂಬರ್‌ಗೆ ಬಂದಿತ್ತು. ಖುಷಿಯಿಂದಲೇ ಅವರು ತಮ್ಮ ಲಾಟರಿ ಟಿಕೆಟ್ ಮಾಹಿತಿಯನ್ನು ಕಂಪೆನಿಗೆ ರವಾನಿಸಿದ್ದರು. ಆದರೆ ಈ ಖುಷಿ ತುಂಬಾ ಹೊತ್ತು ಇರಲಿಲ್ಲ. ಒಂದೆರಡು ದಿನಗಳ ಬಳಿಕ ಉತ್ತರಿಸಿದ ಲಾಟರಿ ಕಂಪೆನಿ ಉಲ್ಟಾ ಹೊಡೆಯಿತು. ತಾಂತ್ರಿಕ ದೋಷದಿಂದ ನಾವು ತಪ್ಪು ನಂಬರ್ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟ ಮಾಡಿದ್ದೆವು ಎಂದು ಸಾಗಹಾಕಲು ನೋಡಿತು. ಇದರಿಂದ ಸಿಟ್ಟಿಗೆದ್ದ ಜಾನ್, ತಾನು ಲಾಟರಿ ಟಿಕೆಟ್‌ನಲ್ಲಿ ಗೆಲುವು ಸಾಧಿಸಿದ್ದು, ಅತಿ ದೊಡ್ಡ ಜಾಕ್‌ಪಾಟ್ ನನಗೆ ಹೊಡೆದಿದೆ. ಹೀಗಾಗಿ ಬಹುಮಾನದ ಹಣ ನನಗೇ ಸಿಗಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ.
ʼʼಲಾಟರಿ ಟಿಕೆಟ್ ಬಂಪರ್ ಡ್ರಾ ಆಗಿದೆ ಎನ್ನುವುದು ಗೊತ್ತಾದ ಕೂಡಲೇ ಕಂಪೆನಿಯ ವೆಬ್‌ಸೈಟ್‌ಗೆ ಭೇಟಿ ನೀಡಿದೆ. ಅಲ್ಲಿ ಪ್ರಕಟವಾಗಿದ್ದ ನನ್ನ ನಂಬರ್‌ನ ಫೋಟೋ ತೆಗೆದುಕೊಂಡೆ. ಜತೆಗೆ ಆ ಕೂಡಲೇ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದ್ದೆʼʼ ಎಂದು ಜಾನ್ ಚೀಕ್ಸ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Biggest Snake: ವಿಶ್ವದ ಬೃಹತ್ ಹಾವು ಪತ್ತೆ; ಈ ಆನಕೊಂಡದ ಉದ್ದ, ಭಾರ ನಿಮ್ಮ ಊಹೆಗೂ ನಿಲುಕದ್ದು!
ʼʼಸಾವಿರಾರು ಕೋಟಿ ರೂಪಾಯಿ ವಿಜೇತ ನಂಬರ್ ಮಿಸ್ಟೇಕ್ ಆಗಲು ಹೇಗೆ ಸಾಧ್ಯ? ದುಬಾರಿ ಮೊತ್ತ ನೀಡಲು ಕಂಪನಿ ಹಿಂದೇಟು ಹಾಕುತ್ತಿದೆ. ಇದಕ್ಕಾಗಿ ನಂಬರ್ ತಪ್ಪಾಗಿ ಟೈಪ್ ಆಗಿದೆ ಎಂದೆಲ್ಲ ಕುಂಟು ನೆಪ ಹೇಳುತ್ತಿದೆʼʼ ಎನ್ನುವುದು ಜಾನ್ ಚೀಕ್ಸ್ ವಾದ. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ನಾಳೆ (ಫೆಬ್ರವರಿ 23) ನಡೆಸಲಿದೆ. ಜಾನ್ ಚೀಕ್ಸ್ ತೀರ್ಪು ತಮ್ಮ ಪರ ಬರಲಿದೆ ಎನ್ನುವ ವಿಶ್ವಾಸದಲ್ಲಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ