ಕಾಬೂಲ್: ಅಫಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರದ್ದೇ ಆಡಳಿತವಿದ್ದರೂ ಉಗ್ರರ ದಾಳಿಗಳು ಮಾತ್ರ ನಿಲ್ಲುತ್ತಿಲ್ಲ. ಆಫ್ಘನ್ ರಾಜಧಾನಿ ಕಾಬೂಲ್‌ನಲ್ಲಿರುವ, ಚೀನಾದ ಲೊಂಗನ್ ಹೋಟೆಲ್ (Kabul Hotel Attack) ಮೇಲೆ ಅಪರಿಚಿತ ವ್ಯಕ್ತಿಗಳು 2008ರ ಮುಂಬೈ ಮಾದರಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಮೂವರು ಮೃತಪಟ್ಟಿದ್ದು, ಗುಂಡಿನ ದಾಳಿ ನಡೆಸುತ್ತಿದ್ದ ಮೂವರೂ ಉಗ್ರರನ್ನು ತಾಲಿಬಾನ್ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ತಿಳಿದುಬಂದಿದೆ.
ಲೊಂಗನ್ ಹೋಟೆಲ್ ಬಳಿ ಚೀನಾ ಗೆಸ್ಟ್ ಹೌಸ್ ಇರುವ ಕಾರಣ ಗುಂಡಿನ ದಾಳಿಯು ಹೆಚ್ಚಿನ ಆತಂಕ ಸೃಷ್ಟಿಸಿದೆ. ಅಪರಿಚಿತ ವ್ಯಕ್ತಿಗಳು ಸತತವಾಗಿ ಗುಂಡಿನ ದಾಳಿ ನಡೆಸಿದ್ದು, ಬಾಂಬ್ ಸ್ಫೋಟದ ಸದ್ದುಗಳು ಕೂಡ ಕೇಳಿಸಿವೆ. ಅಲ್ಲದೆ, ಹೋಟೆಲ್‌ನಲ್ಲಿದ್ದ ಹಲವರನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಗುಂಡು ಹಾಗೂ ಬಾಂಬ್ ದಾಳಿಯಿಂದಾಗಿ ಹೋಟೆಲ್‌ನಿಂದ ಸುತ್ತ ದಟ್ಟ ಹೊಗೆ ಆವರಿಸಿದೆ. ಸ್ಥಳೀಯ ಇಸ್ಲಾಮಿಕ್ ಸ್ಟೇಟ್ ಗ್ರೂಪ್‌ನ ಉಗ್ರರೇ ದಾಳಿ ನಡೆಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದಾಗ್ಯೂ, ಇದುವರೆಗೆ ಯಾವುದೇ ಉಗ್ರ ಸಂಘಟನೆಯು ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ದಾಳಿಯ ವಿಡಿಯೊಗಳು ಲಭ್ಯವಾಗಿದ್ದು, ಕಾಬೂಲ್ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ | ಕಾಬೂಲ್ನಲ್ಲಿ ಐಸಿಸ್ ಬಾಂಬ್ ದಾಳಿ; 8 ಮಂದಿ ಸಾವು, 18ಕ್ಕೂ ಹೆಚ್ಚು ಜನರಿಗೆ ಗಾಯ