Site icon Vistara News

Tsunami Warning: 7.6 ತೀವ್ರತೆಯ ಭೂಕಂಪ; ಭೀಕರ ಸುನಾಮಿಯ ವಾರ್ನಿಂಗ್‌!

Tsunami

Magnitude 7.6 earthquake strikes Philippines, tsunami warning issued

ಮನಿಲಾ: ಫಿಲಿಪೈನ್ಸ್‌ನಲ್ಲಿ 7.6 ತೀವ್ರತೆಯ ಪ್ರಬಲ ಭೂಕಂಪ (Earthquake) ಸಂಭವಿಸಿದೆ. ಫಿಲಿಪೈನ್ಸ್‌ನ ಮಿಂಡಾನಾವೋ (Mindanao) ಎಂಬಲ್ಲಿ ಶನಿವಾರ (ನವೆಂಬರ್‌ 3) ಸಂಜೆ ಪ್ರಬಲ ಭೂಕಂಪ ಸಂಭವಿಸಿದ್ದು, ದೇಶಾದ್ಯಂತ ಆತಂಕ ಮನೆಮಾಡಿದೆ. ರಿಕ್ಟರ್‌ ಮಾಪನದಲ್ಲಿ 7.6 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಯುರೋಪಿಯನ್‌ ಮೆಡಿಟೇರಿಯನ್‌ ಸೈಸ್ಮೊಲಾಜಿಕಲ್‌ ಸೆಂಟರ್‌ (EMSC) ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಅಮೆರಿಕವು ಸುನಾಮಿ ಅಪ್ಪಳಿಸುವ ಎಚ್ಚರಿಕೆ (Tsunami Warning) ನೀಡಿದೆ.

ಸುಮಾರು 63 ಕಿಲೋಮೀಟರ್‌ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಮಾಹಿತಿ ನೀಡಿದೆ. “ಭೂಕಂಪವು ಪ್ರಬಲವಾಗಿದೆ. ಇದು ದೇಶದಲ್ಲಿ ಸುನಾಮಿಗೆ ಕಾರಣವಾಗಬಹುದು. ದೊಡ್ಡ ದೊಡ್ಡ ಅಲೆಗಳು ಅಪ್ಪಳಿಸಬಹುದು” ಎಂಬುದಾಗಿ ಫಿಲಿಪೈನ್ಸ್‌ಗೆ ಅಮೆರಿಕ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಫಿಲಿಪೈನ್ಸ್‌ನ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಭೂಕಂಪದಿಂದ ಯಾವುದೇ ಸಾವು-ನೋವಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ತಿಂಗಳಲ್ಲಿ ಎರಡನೇ ಬಾರಿ ಕಂಪಿಸಿದ ಭೂಮಿ

ಕಳೆದ ಒಂದು ತಿಂಗಳಲ್ಲಿ ಫಿಲಿಪೈನ್ಸ್‌ನಲ್ಲಿ ಎರಡನೇ ಬಾರಿ ಭೂಕಂಪ ಸಂಭವಿಸಿದೆ. ನವೆಂಬರ್‌ ತಿಂಗಳ ಆರಂಭದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಎಂಟು ಜನ ಮೃತಪಟ್ಟಿದ್ದರು. ಸಾರಂಗಾನಿ, ಸೌತ್‌ ಕೊಟಾಬಟೊ ಹಾಗೂ ಡಾವಾವೋ ಪ್ರಾಂತ್ಯಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 13ಕ್ಕೂ ಅಧಿಕ ಜನ ಗಾಯಗೊಂಡಿದ್ದರೆ, 50 ಅಧಿಕ ಮನೆಗಳು ಕುಸಿದಿದ್ದವು. ಇನ್ನು ಶನಿವಾರ ಸಂಜೆ ಭೂಕಂಪ ಸಂಭವಿಸಿದ ಕಾರಣ ಜಪಾನ್‌ನಲ್ಲೂ ಸುನಾಮಿ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Earthquake: ಕಾಶ್ಮೀರದಲ್ಲಿ ಪ್ರಬಲ ಭೂಕಂಪ; 24 ಗಂಟೆಯಲ್ಲಿ 3 ದುರಂತ

ನೇಪಾಳದಲ್ಲಿ 157 ಜನ ಸಾವು

ನೇಪಾಳದಲ್ಲೂ ಇತ್ತೀಚೆಗೆ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 157 ಜನ ಮೃತಪಟ್ಟಿದ್ದು, 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಾವಿರಾರು ಕಟ್ಟಡಗಳು ಧರೆಗುರುಳಿದ್ದು, ಜನರ ರಕ್ಷಣೆಗೆ ಹರಸಾಹಸ ಮಾಡಬೇಕಾಗಿತ್ತು. ಮಹಿಳೆಯರು, ಮಕ್ಕಳು, ಹಿರಿಯರು ಭೂಕಂಪಕ್ಕೆ ಬಲಿಯಾಗಿದ್ದರು. ಅಷ್ಟಕ್ಕೂ, ನೇಪಾಳದಲ್ಲಿ ಕಳೆದ ಮೂರು ದಿನಗಳಲ್ಲಿ ಮೂರ್ನಾಲ್ಕು ಬಾರಿ ಭೂಮಿ ಕಂಪಿಸಿದ ಕಾರಣ ಜನರಲ್ಲಿ ಭಯ ಮನೆಮಾಡಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version