ನವದೆಹಲಿ: ಜೊಹೊರ್ ಸುಲ್ತಾನ್ ಇಬ್ರಾಹಿಂ ಇಸ್ಕಂದರ್ (Johor Sultan Ibrahim Iskandar) ಮಲೇಷ್ಯಾದ ಹೊಸ ರಾಜನಾಗಿ ಸಿಂಹಾಸನವನ್ನು (Malaysia’s New King) ಏರಿದ್ದಾರೆ. 65 ವರ್ಷದ ಅವರು ಬರೋಬ್ಬರಿ 5.7 ಬಿಲಿಯನ್ ಡಾಲರ್ (475 ಲಕ್ಷ ಕೋಟಿ ರೂ.) ಮೌಲ್ಯದ ಸಂಪತ್ತನ್ನು ಹೊಂದಿದ್ದಾರೆ. ಅಲ್ಲದೆ ದೇಶದ ಗಡಿಯನ್ನೂ ಮೀರಿ ಆಸ್ತಿ ಸಂಪಾದಿಸಿದ್ದಾರೆ. 300 ಕಾರು, ಪ್ರೈವೇಟ್ ಜೆಟ್, ಪ್ರತ್ಯೇಕ ಆರ್ಮಿ… ಹೀಗೆ ಐಷರಾಮಿ ಜೀವನ ನಡೆಸುತ್ತಿದ್ದಾರೆ. ಅವರ ಸಂಪತ್ತಿನ ವಿವರ ಇಲ್ಲಿದೆ.
ವಿವಿಧ ಉದ್ಯಮ
ಸುಲ್ತಾನ್ ಇಬ್ರಾಹಿಂ ಅವರ ಸಾಮ್ರಾಜ್ಯವು ರಿಯಲ್ ಎಸ್ಟೇಟ್, ಗಣಿಗಾರಿಕೆ, ದೂರಸಂಪರ್ಕ ಮತ್ತು ತಾಳೆ ಎಣ್ಣೆಯಿಂದ ಹಿಡಿದು ಹಲವಾರು ಉದ್ಯಮಗಳನ್ನು ಒಳಗೊಂಡಿದೆ. ಅವರ ಅಧಿಕೃತ ವೈಭವೋಪೇತ ನಿವಾಸ ಇಸ್ತಾನಾ ಬುಕಿಟ್ ಸೆರೆನ್ ಅಪಾರ ಸಂಪತ್ತಿಗೆ ಸಾಕ್ಷಿಯಾಗಿ ತಲೆ ಎತ್ತಿ ನಿಂತಿದೆ. ಅಡಾಲ್ಫ್ ಹಿಟ್ಲರ್ ಉಡುಗೊರೆಯಾಗಿ ನೀಡಿದ ಕಾರು ಸೇರಿದಂತೆ 300ಕ್ಕೂ ಹೆಚ್ಚು ಐಷಾರಾಮಿ ಕಾರುಗಳ ಸಂಗ್ರಹವನ್ನು ಮೈದಾನದಲ್ಲಿ ಇರಿಸಲಾಗಿದ್ದು, ಚಿನ್ನ ಮತ್ತು ನೀಲಿ ಬೋಯಿಂಗ್ 737 ಸೇರಿದಂತೆ ಖಾಸಗಿ ಜೆಟ್‌ಗಳ ಸಮೂಹವು ಇವರ ಬಳಿಯಲ್ಲಿದೆ. ಅವರ ಕುಟುಂಬವು ಖಾಸಗಿ ಸೈನ್ಯವನ್ನು ಸಹ ಹೊಂದಿದೆ.
ಬ್ಲೂಮ್ಬರ್ಗ್ ಅಂದಾಜಿನ ಪ್ರಕಾರ ಸುಲ್ತಾನ್ ಇಬ್ರಾಹಿಂ ಅವರ ಕುಟುಂಬದ ಸಂಪತ್ತು 5.7 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದ್ದರೂ, ನಿಜವಾದ ವ್ಯಾಪ್ತಿ ಅದಕ್ಕಿಂತ ಹೆಚ್ಚು ಎನ್ನಲಾಗುತ್ತಿದೆ. ಅವರು ಮಲೇಷ್ಯಾದ ಪ್ರಮುಖ ಮೊಬೈಲ್ ಸೇವಾ ಪೂರೈಕೆದಾರರಲ್ಲಿ ಒಂದಾದ ಯು ಮೊಬೈಲ್‌ನಲ್ಲಿ ಶೇ. 24ರಷ್ಟು ಶೇರ್ ಹೊಂದಿದ್ದಾರೆ. ಅಲ್ಲದೆ ಖಾಸಗಿ ಮತ್ತು ಸಾರ್ವಜನಿಕ ಕಂಪೆನಿಗಳಲ್ಲಿ ಹೆಚ್ಚುವರಿ ಹೂಡಿಕೆಗಳು ಒಟ್ಟು 588 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಸುಲ್ತಾನ್ ಇಬ್ರಾಹಿಂ ಅವರಿಗೆ ಬೈಕ್ ಕ್ರೇಜ್ ಕೂಡ ಇದ್ದು, ಹಾರ್ಲೆ-ಡೇವಿಡ್ಸನ್‌ನಲ್ಲಿ ಆಗಾಗ ಪ್ರವಾಸ ಕೈಗೊಳ್ಳುತ್ತಾರೆ.
ಸಿಂಗಾಪುರದಲ್ಲಿ ಬೊಟಾನಿಕ್ ಗಾರ್ಡನ್ಸ್‌ನ ಟೈರ್ಸಾಲ್ ಪಾರ್ಕ್ ಸೇರಿದಂತೆ ವಿಸ್ತಾರವಾದ ಪ್ರದೇಶದಲ್ಲಿ ಅವರು 4 ಬಿಲಿಯನ್ ಡಾಲರ್ ಮೌಲ್ಯದ ಭೂಮಿಯನ್ನು ಹೊಂದಿದ್ದಾರೆ. ಸುಲ್ತಾನ್ ಅವರ ಹೂಡಿಕೆ ಬರೋಬ್ಬರಿ 1.1 ಬಿಲಿಯನ್ ಡಾಲರ್ ಆಗಿದ್ದು, ಷೇರು ಮತ್ತು ರಿಯಲ್ ಎಸ್ಟೇಟ್ ವಹಿವಾಟುಗಳಿಂದ ಗಣನೀಯ ಆದಾಯ ಹರಿದು ಬರುತ್ತಿದೆ ಎಂದು ಅಂದಾಜಿಸಲಾಗಿದೆ.
ಬುಧವಾರ (ಜನವರಿ 31) ಸುಲ್ತಾನ್ ಇಬ್ರಾಹಿಂ ಅಧಿಕೃತವಾಗಿ ಸಿಂಹಾಸನಕ್ಕೆ ಏರಿದ್ದಾರೆ. ಇದಕ್ಕಾಗಿ ಅದ್ಧೂರಿ ಸಮಾರಂಭ ಆಯೋಜಿಸಲಾಗಿತ್ತು. ಉದ್ಯಮಿಗಳು, ರಾಜಕೀಯ ನಾಯಕರು ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು. ಸಿಂಗಾಪುರದ ನಾಯಕತ್ವದೊಂದಿಗಿನ ಅವರ ನಿಕಟ ಸಂಬಂಧಗಳು ಮತ್ತು ಪ್ರಮುಖ ಚೀನೀ ಡೆವಲಪರ್‌ಗಳೊಂದಿಗೆ ವ್ಯಾಪಾರ ಸಂಬಂಧಗಳು ದೇಶೀಯ ಮತ್ತು ವಿದೇಶಾಂಗ ನೀತಿಯ ಮೇಲೆ ಗಣನೀಯ ಪ್ರಭಾವ ಬೀರಲಿದೆ ಎಂದು ನಿರೀಕ್ಷೆ ಇದೆ.
ಇದನ್ನೂ ಓದಿ: Indian student in US: ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು; ನಾಪತ್ತೆಯಾಗಿದ್ದವನು ಶವವಾಗಿ ಪತ್ತೆ
ಐದು ವರ್ಷಗಳಿಗೊಮ್ಮೆ ಆಯ್ಕೆ
ʼಸುಲ್ತಾನರುʼ ಎಂದು ಕರೆಯಲ್ಪಡುವ ಮಲೇಷ್ಯಾದ ಒಂಬತ್ತು ಆನುವಂಶಿಕ ಆಡಳಿತಗಾರರು ಪ್ರತಿ ಐದು ವರ್ಷಗಳಿಗೊಮ್ಮೆ ತಮ್ಮ ನಡುವೆ ರಾಷ್ಟ್ರದ ಮುಖ್ಯಸ್ಥರನ್ನು ಆಯ್ಕೆ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ