ಮಾಲೆ: ಭಾರತ ಮತ್ತು ಮಾಲ್ಡೀವ್ಸ್ (Maldives) ನಡುವಿನ ಸಂಬಂಧದಲ್ಲಿ ಬಿರುಕು ಬಿಟ್ಟಿದ್ದು, ಇದೀಗ ಮಾಲ್ಡೀವ್ಸ್ ಜತೆಗೆ ಬಲವಾದ ದ್ವಿಪಕ್ಷೀಯ ಸಂಬಂಧವನ್ನು ಬೆಳೆಸಲು ಚೀನಾ ಸೋಮವಾರ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು (Mohamed Muizzu) ತಮ್ಮ ದ್ವೀಪ ರಾಷ್ಟ್ರದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯ ಮೊದಲ ಗುಂಪನ್ನು ಹಿಂತೆಗೆದುಕೊಳ್ಳಲು ಗಡುವು ನಿಗದಿಪಡಿಸಿದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಮಾಲ್ಡೀವ್ಸ್ ರಕ್ಷಣಾ ಸಚಿವ ಮೊಹಮ್ಮದ್ ಘಸ್ಸಾನ್ ಮೌಮೂನ್ ಅವರು ಚೀನಾದ ಅಂತಾರಾಷ್ಟ್ರೀಯ ಮಿಲಿಟರಿ ಸಹಕಾರ ಕಚೇರಿಯ ಉಪ ನಿರ್ದೇಶಕ ಮೇಜರ್ ಜನರಲ್ ಜಾಂಗ್ ಬೌಕುನ್ ಅವರನ್ನು ಭೇಟಿಯಾಗಿ ಉಭಯ ದೇಶಗಳ ನಡುವಿನ ರಕ್ಷಣಾ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಿದರು. ಮೌಮೂನ್ ಮತ್ತು ಮೇಜರ್ ಜನರಲ್ ಬಾವೊಕುನ್ “ಮಾಲ್ಡೀವ್ಸ್ ಗಣರಾಜ್ಯಕ್ಕೆ ಉಚಿತವಾಗಿ ಚೀನಾದ ಮಿಲಿಟರಿ ನೆರವು ಒದಗಿಸುವ ಒಪ್ಪಂದಕ್ಕೆ ಸಹಿ ಹಾಕಿದರು. ಇದು ಬಲವಾದ ದ್ವಿಪಕ್ಷೀಯ ಸಂಬಂಧಗಳನ್ನು ಬೆಳೆಸಲಿದೆ” ಎಂದು ಮಾಲ್ಡೀವ್ಸ್ ರಕ್ಷಣಾ ಸಚಿವಾಲಯ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ತಿಳಿಸಿದೆ. ಈ ರಕ್ಷಣಾ ಸಹಕಾರ ಒಪ್ಪಂದದ ಹೆಚ್ಚಿನ ವಿವರಗಳು ಬಹಿರಂಗವಾಗಿಲ್ಲ.
ಇದರ ಜತೆಗೆ ಚೀನಾ 12 ಪರಿಸರ ಸ್ನೇಹಿ ಆಂಬ್ಯುಲೆನ್ಸ್‌ಗಳನ್ನು ಮಾಲ್ಡೀವ್ಸ್‌ಗೆ ಉಡುಗೊರೆಯಾಗಿ ನೀಡಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಆರೋಗ್ಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ, ಮಾಲ್ಡೀವ್ಸ್‌ನ ಚೀನಾದ ರಾಯಭಾರಿ ವಾಂಗ್ ಲಿಕ್ಸಿನ್ ಈ ಆಂಬ್ಯುಲೆನ್ಸ್‌ಗಳನ್ನು ಹಸ್ತಾಂತರಿಸುವ ಪತ್ರವನ್ನು ನೀಡಿದರು.
ಚೀನಾದ ಸಂಶೋಧನಾ ಹಡಗು ಕ್ಸಿಯಾಂಗ್ ಯಾಂಗ್ ಹಾಂಗ್ 03ಕ್ಕೆ ಮಾಲೆ ಪ್ರವೇಶಿಸಲು ಅನುಮತಿ ನೀಡಿದ ಕೆಲವು ದಿನಗಳ ನಂತರ ಚೀನಾದ ಮಿಲಿಟರಿ ನಿಯೋಗ ಮತ್ತು ಮಾಲ್ಡೀವ್ಸ್‌ನ ಭೇಟಿ ನಡೆಯಿತು. ಜನವರಿ 5ರಂದು ಶ್ರೀಲಂಕಾ ಅದೇ ಹಡಗಿನ ಪ್ರವೇಶವನ್ನು ನಿರಾಕರಿಸಿತ್ತು.
ಈ ಮಧ್ಯೆ ಚೀನಾ ಪರ ನಾಯಕ ಎಂದೇ ಪರಿಗಣಿಸಲ್ಪಟ್ಟಿರುವ ಅಧ್ಯಕ್ಷ ಮುಯಿಝು ಅವರು ತಮ್ಮ ದೇಶದಿಂದ ಭಾರತೀಯ ಮಿಲಿಟರಿ ಸಿಬ್ಬಂದಿಯ ಮೊದಲ ಗುಂಪನ್ನು ಹಿಂತೆಗೆದುಕೊಳ್ಳಲು ಮಾರ್ಚ್ 10ರ ಗಡುವನ್ನು ನಿಗದಿಪಡಿಸಿದ್ದಾರೆ. ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವ ಕುರಿತಾದ ಬಿಕ್ಕಟ್ಟನ್ನು ಪರಿಹರಿಸಲು ರಚಿಸಲಾದ ಉನ್ನತ ಮಟ್ಟದ ಕೋರ್ ಗುಂಪಿನ ಸಭೆಗಳ ನಂತರ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯವು ಹೇಳಿಕೆ ನೀಡಿ, ಮೇ 10ರೊಳಗೆ ಭಾರತವು ತನ್ನ ಎಲ್ಲ ಮಿಲಿಟರಿ ಸಿಬ್ಬಂದಿಯನ್ನು ಎರಡು ಹಂತಗಳಲ್ಲಿ ಹಿಂಪಡೆಯಲಿದೆ ಎಂದು ತಿಳಿಸಿತ್ತು.
ಇದನ್ನೂ ಓದಿ: Boycott Maldives: ಮಾಲ್ಡೀವ್ಸ್ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದ ಅಲ್ಲಿನ ಪ್ರವಾಸೋದ್ಯಮ ಸಂಘ ಹೇಳಿದ್ದೇನು?
ಕಳೆದ ವರ್ಷ ನವೆಂಬರ್‌ನಲ್ಲಿ ಮುಯಿಝು ಅಧಿಕಾರಕ್ಕೆ ಬಂದಾಗಿನಿಂದ ಉಭಯ ದೇಶಗಳ ನಡುವಿನ ಸಂಬಂಧಗಲ್ಲಿ ಬಿರುಕು ಮೂಡಲಾರಂಭಿಸಿವೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮುಯಿಝು ಅವರು ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ತಮ್ಮ ದೇಶದಿಂದ ಹೊರಹಾಕುವ ತಮ್ಮ ಚುನಾವಣಾ ಭರವಸೆಯನ್ನು ಉಳಿಸಿಕೊಳ್ಳುವುದಾಗಿ ಹೇಳಿದ್ದರು. ಮಾತ್ರವಲ್ಲ ಕೆಲವು ದಿನಗಳ ಹಿಂದೆ ಲಕ್ಷದ್ವೀಪದ ವಿರುದ್ಧ ಮಾಲ್ಡೀವ್ಸ್ ಹೇಳಿಕೆ ನೀಡಿದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.