ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ಕೆಲವು ತಿಂಗಳ ಹಿಂದೆ ಲಕ್ಷದ್ವೀಪ (Lakshadweep)ಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದರು. ಅದಕ್ಕೆ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ನ ಪ್ರವಾಸೋದ್ಯಮ (Maldives Tourism)ಕ್ಕೆ ಈಗ ಭಾರಿ ಹೊಡೆತ ಬಿದ್ದಿದೆ. ಈ ವರ್ಷದ ಜನವರಿಯಿಂದ ಮಾರ್ಚ್ ತನಕ ದ್ವೀಪ ರಾಷ್ಟ್ರಕ್ಕೆ ಕೇವಲ 34,847 ಮಂದಿ ಭೇಟಿ ನೀಡಿದ್ದಾರೆ. ಅದೇ ಕಳೆದ ವರ್ಷ ಈ ಅವಧಿಯಲ್ಲಿ ಮಾಲ್ಡೀವ್ಸ್‌ಗೆ 56,208 ಭಾರತೀಯರು ತೆರಳಿದ್ದರು ಎಂದು ಅಂಕಿ-ಅಂಶಗಳು ತಿಳಿಸಿವೆ. ಭಾರತ ಹಾಗೂ ಮೋದಿ ಕುರಿತು ಅಸಮಾಧಾನದ ಹೇಳಿಕೆ ನೀಡಿದ್ದ ಮಾಲ್ಡೀವ್ಸ್ ಈಗ ಅದಕ್ಕೆ ತಕ್ಕ ಪರಿಣಾಮ ಎದುರಿಸುತ್ತಿದೆ.
ʼʼಕಳೆದ ವರ್ಷಕ್ಕೆ ಹೋಲಿಸಿದರೆ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಶೇ. 38ರಷ್ಟು ಕುಸಿತವಾಗಿದೆ. ಮತ್ತು ಇದು 2019ರ ಮೊದಲ ತ್ರೈ ಮಾಸಿಕದಲ್ಲಿ ಭೇಟಿ ನೀಡಿದ್ದ 36,053 ಭಾರತೀಯ ಪ್ರಯಾಣಿಕರ ಸಂಖ್ಯೆಗಿಂತಲೂ ಕಡಿಮೆʼʼ ಎಂದು ಮೂಲಗಳು ತಿಳಿಸಿವೆ.
ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ʼಇಂಡಿಯಾ ಔಟ್ʼ ಅಭಿಯಾನ ಮತ್ತು ಅದರ ನಂತರ ಭಾರತೀಯರು ಮಾಲ್ಡೀವ್ಸ್ ಬಹಿಷ್ಕಾರದ ಕರೆ ನೀಡಿದ್ದರಿಂದ ಈ ಕುಸಿತ ಕಂಡು ಬಂದಿದೆ. ಕೆಲವು ದಿನಗಳ ಹಿಂದೆ ನರೇಂದ್ರ ಮೋದಿ ಲಕ್ಷದ್ವೀಪಕ್ಕೆ ಭೇಟಿ ಬಳಿಕ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ʼಮಾಲ್ಡೀವ್ಸ್ ಬಹಿಷ್ಕಾರʼ ಕೂಗಿನ ಜತೆಗೆ ʼಲಕ್ಷದ್ವೀಪಕ್ಕೆ ಭೇಟಿ ನೀಡಿʼ ಎಂಬ ಅಭಿಯಾನ ಆರಂಭವಾಗಿತ್ತು. ನೂರಾರು ಸೆಲೆಬ್ರಿಟಿಗಳು, ನಟರು ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು. ಇದಾದ ಬಳಿಕ ಮಾಲ್ಡೀವ್ಸ್ ಟ್ರಿಪ್ ಕ್ಯಾನ್ಸಲ್ ಮಾಡಿಕೊಂಡಿದ್ದರು. ಅದರ ಪರಿಣಾಮ ಈಗ ಅಂಕಿ-ಅಂಶದಲ್ಲಿ ಪ್ರತಿಫಲಿಸಿದೆ.
ಸದ್ಯ ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರ ಪೈಕಿ ಚೀನಾದವರು ಅಗ್ರ ಸ್ಥಾನದಲ್ಲಿದ್ದಾರೆ. ಕೋವಿಡ್ ಪೂರ್ವದಲ್ಲಿ ಚೀನಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಇದೀಗ ಮತ್ತೆ ಈ ಪಟ್ಟವನ್ನು ಚೀನಾ ಪಡೆದುಕೊಂಡಿದೆ. 2024ರ ಏಪ್ರಿಲ್ 10ರವರೆಗೆ ಮಾಲ್ಡೀವ್ಸ್‌ಗೆ 6.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಚೀನಾದ 71 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಬ್ರಿಟನ್, ರಷ್ಯಾ, ಇಟಲಿ, ಜರ್ಮನಿ ಹಾಗೂ ಭಾರತದ ಪ್ರವಾಸಿಗರಿದ್ದಾರೆ.
ಅಂಕಿ-ಅಂಶ ಏನು ಹೇಳುತ್ತದೆ?
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ 2018ರಲ್ಲಿ 1 ಲಕ್ಷಕ್ಕಿಂತ ಕಡಿಮೆ ಸಂಖ್ಯೆಯ ಭಾರತೀಯರು ಭೇಟಿ ನೀಡಿದ್ದರೆ 2.83 ಲಕ್ಷ ಚೀನೀ ಪ್ರವಾಸಿಗರು ತೆರಳಿದ್ದರು. ಇನ್ನು 2019ರಲ್ಲಿ ಭಾರತೀಯ ಪ್ರವಾಸಿಗರ ಸಂಖ್ಯೆ 1.6 ಲಕ್ಷಕ್ಕೆ ಏರಿತ್ತು. 2021ರಲ್ಲಿ ದಾಖಲೆಯ 2.91 ಲಕ್ಷ ಭಾರತೀಯರು ಮಾಲ್ಡೀವ್ಸ್‌ಗೆ ತೆರಳಿದ್ದರು. ಕೋವಿಡ್ ನಿರ್ಬಂಧದ ಕಾರಣ ಆ ವರ್ಷ ಕೇವಲ 2,238 ಚೀನೀಯರು ಭೇಟಿ ನೀಡಿದ್ದರು.
ಇದನ್ನೂ ಓದಿ: ಮೋದಿ ಏಟಿಗೆ ತಬ್ಬಿಬ್ಬು; ಪ್ರವಾಸಿಗರ ಸೆಳೆಯಲು ಭಾರತದಲ್ಲಿ ರೋಡ್‌ಶೋಗೆ ಮಾಲ್ಡೀವ್ಸ್ ನಿರ್ಧಾರ!
ಇತರ ಕಾರಣಗಳು
ಮಾಲ್ಡೀವ್ಸ್‌ಗೆ ಭೇಟಿ ನೀಡುವ ಭಾರತೀಯ ಪ್ರವಾಸಿಗರ ಸಂಖ್ಯೆ ಕುಸಿಯಲು ಇನ್ನೂ ಕೆಲವು ಕಾರಣಗಳಿವೆ. ವಿಯೆಟ್ನಾಂ ಮತ್ತು ಇಂಡೋನೇಷ್ಯಾಕ್ಕೆ ಸುಲಭ ಪ್ರವೇಶ, ನೇರ ಸಂಪರ್ಕ ಮತ್ತು ಥೈಲ್ಯಾಂಡ್ ಮತ್ತು ಮಲೇಷ್ಯಾಕ್ಕೆ ವೀಸಾ ಮುಕ್ತ ಪ್ರಯಾಣ ಇತ್ಯಾದಿ ಒಂದು ಕಾಲದಲ್ಲಿ ಪ್ರಸಿದ್ಧವಾಗಿದ್ದ ಮಾಲ್ಡೀವ್ಸ್‌ನ ಜನಪ್ರಿಯತೆ ಈಗ ಕುಸಿಯಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಜತೆಗೆ ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಮಾಲ್ಡೀವ್ಸ್ ದುಬಾರಿ ಎನಿಸಿಕೊಂಡಿದೆ. ಇದೆಲ್ಲವೂ ಪರಿಣಾಮ ಬೀರಿದೆ.