Site icon Vistara News

ಮೂತ್ರ ವಿಸರ್ಜನೆಗಾಗಿ ಕಾಡೊಳಗೆ ಹೋಗಿದ್ದ ಪತ್ನಿಯನ್ನು ಮರೆತು ಬಿಟ್ಟು ಹೋದ ಪತಿ; ಕತ್ತಲಲ್ಲೇ 20 ಕಿಮೀ ದೂರ ನಡೆದ ಮಹಿಳೆ!

Man Forgets Wife amid Raod Trip In Thailand

ಮೆರೆವು-ಇದೊಂದು ಶಾಪವೋ, ವರವೋ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ‘ಆ ಕೆಲಸ ಮರೆತು ಹೋಯಿತು’, ‘ಅಯ್ಯೋ, ಈ ವಸ್ತು ತರಲು ಮನೆಯಲ್ಲಿ ಹೇಳಿದ್ದರು ಆದರೆ ನನಗೆ ಮರೆಯಿತು’, ‘ನೀವು ಯಾರು ಹೇಳಿ, ನನಗೆ ಮರೆತು ಹೋಗಿದೆ ನಿಮ್ಮ ಹೆಸರು’, ‘ನನ್ನ ಹೆಂಡತಿ ಹುಟ್ಟುಹಬ್ಬ ಮರೆಯಿತು, ವೆಡ್ಡಿಂಗ್​ ಆ್ಯನಿವರ್ಸರಿ ಮರೆತೆ’…ಹೀಗೆ ವಿಶ್ವವೆಲ್ಲ ಮರೆವಿನ ಮಡಿಲಲ್ಲೇ ಇದೆ. ಆದರೆ ಜೀವನ ಮುಂದೆ ಸಾಗಿಸಲು ಈ ‘ಮರೆವು’ ಕೂಡ ಅನಿವಾರ್ಯ..
ಆದರೆ ಥೈಲ್ಯಾಂಡ್​ನಲ್ಲಿ 55 ವರ್ಷದ ಪತಿ ಮಹಾಶಯ ಪ್ರವಾಸದ ವೇಳೆ ತನ್ನ ಪತ್ನಿಯನ್ನೇ ಮರೆತು, ಅರ್ಧದಾರಿಯಲ್ಲಿ ಬಿಟ್ಟುಹೋಗಿದ್ದಾನೆ. ಇದರಿಂದಾಗಿ ಆಕೆ, ಇನ್ನೂ ಬೆಳಕು ಮೂಡದ ಹೊತ್ತಲ್ಲಿ 20 ಕಿಲೋಮೀಟರ್ ದೂರ ನಡೆಯುವಂತಾಯ್ತು.​ ಈ ಸ್ಟೋರಿ ಈಗ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಥೈಲ್ಯಾಂಡ್​​ನ ಬೂಂಟೊಮ್ ಚೈಮೂನ್ (55) ಮತ್ತು ಅವರ ಪತ್ನಿ ಅಮ್ನುವೇ ಚೈಮೂನ್ (49) ಇಬ್ಬರೂ ಕಾರಿನಲ್ಲಿ ಪ್ರವಾಸಕ್ಕೆ ಹೊರಟಿದ್ದರು. ಇಬ್ಬರಿಗೂ ರಜಾ ಇರುವುದರಿಂದ ಅಮ್ನುವೇ ಅವರ ತಾಯಿಯ ಮನೆಯಿರುವ ಮಹಾ ಸರಖಂ ಎಂಬ ಪ್ರಾಂತ್ಯಕ್ಕೆ ಇಬ್ಬರೇ ಕಾರಿನಲ್ಲಿ ಹೊರಟಿದ್ದರು. ಅವರಿದ್ದ ಮನೆಯಿಂದ ತಲುಪಬೇಕಾದ ಮನೆ ತುಂಬ ದೂರ ಇತ್ತು. ಪರಸ್ಪರ ಮಾತನಾಡಿಕೊಳ್ಳುತ್ತ, ಹರಟೆ ಹೊಡೆಯುತ್ತ ಪ್ರಯಾಣ ಮಾಡುತ್ತಿದ್ದರು. ಬೂಂಟೊಮ್​ ಡ್ರೈವಿಂಗ್​ ಮಾಡುತ್ತಿದ್ದರು.

ಮುಂಜಾನೆ 3ಗಂಟೆ ಹೊತ್ತಿಗೆ ಬೂಂಟೊಮ್​​ಗೆ ಮೂತ್ರಕ್ಕೆ ಹೋಗಬೇಕು ಅನ್ನಿಸಿತು. ಅವರು ಹೊರಟಿದ್ದ ರಸ್ತೆ ಕಾಡಿನ ಮಧ್ಯೆ ಇದ್ದುದರಿಂದ ಅಲ್ಲೆಲ್ಲೂ ಸಾರ್ವಜನಿಕ ಶೌಚಗೃಹ ಇರಲಿಲ್ಲ. ಪತಿ ಕಾರಿನಿಂದ ಇಳಿಯುತ್ತಿದ್ದಂತೆ ಅಮ್ನುವೇ ಕೂಡ ಇಳಿದು, ಅಲ್ಲೇ ಸ್ವಲ್ಪ ದೂರದಲ್ಲಿ ಕಾಡಿನ ಮಧ್ಯೆ ಮೂತ್ರವಿಸರ್ಜನೆಗಾಗಿ ಹೋದರು. ಇತ್ತ ವಾಪಸ್​ ಬಂದ ಬೂಂಟೊಮ್​, ಪತ್ನಿ ಇದ್ದಾಳೆ ಎಂಬುದನ್ನೇ ಮರೆತು ಕಾರು ಡ್ರೈವ್​ ಮಾಡಿಕೊಂಡು ಹೊರಟೇಹೋಗಿದ್ದಾರೆ. ಅತ್ತ ಕಾರಿದ್ದ ಜಾಗಕ್ಕೆ ಮರಳಿದ ಅಮ್ನುವೇ ಕಂಗಾಲಾಗಿ ನಿಂತಿದ್ದಾರೆ.

ಆಕೆಗೆ ಗೊತ್ತಾಯಿತು. ತನ್ನ ಪತಿ ತನ್ನನ್ನು ಬಿಟ್ಟು ಹೋದರು ಎಂಬುದು. ಕರೆ ಮಾಡೋಣ ಎಂದರೆ ಆಕೆ ಕಾರಿನಿಂದ ಇಳಿದು ಮೂತ್ರವಿಸರ್ಜನೆಗೆ ಹೋಗುವಾಗ ತನ್ನ ಮೊಬೈಲ್​​ನ್ನು ಬ್ಯಾಗ್​​ನಲ್ಲಿಟ್ಟು, ಆ ಬ್ಯಾಗ್​​ನ್ನು ಕಾರಿನ ಹಿಂಬದಿ ಸೀಟ್​​ನಲ್ಲಿಯೇ ಬಿಟ್ಟು ಹೋಗಿದ್ದರು. ಇನ್ನೇನು ಮಾಡುವುದು ಎಂದು ಆ ತಡರಾತ್ರಿ ಮೂರು ಗಂಟೆ ಸಮಯದ ಕತ್ತಲಲ್ಲೇ ನಡೆಯಲು ಪ್ರಾರಂಭಿಸಿದರು. ಸುಮಾರು 20 ಕಿಲೋಮೀಟರ್​ ದೂರ ಹಾಗೇ ನಡೆಯುತ್ತ ಹೋಗಿ ಮುಂಜಾನೆ 5ಗಂಟೆ ಹೊತ್ತಿಗೆ ಕಬಿನ್​ ಬುರಿ ಎಂಬ ಜಿಲ್ಲೆಯನ್ನು ತಲುಪಿಕೊಂಡು, ಅಲ್ಲಿನ ಪೊಲೀಸರನ್ನು ಸಂಪರ್ಕಿಸಿದರು.
ಇನ್ನು ಪತ್ನಿಯನ್ನು ಬಿಟ್ಟು ಕಾರಿನಲ್ಲಿ ಹೋಗುತ್ತಿದ್ದ ಪತಿ ಬೂಂಟೊಮ್ ಅದೆಷ್ಟು ಮರೆವಿನಲ್ಲಿದ್ದರು ಅಂದರೆ, ಇಡೀ ರಸ್ತೆ ಪ್ರಯಾಣದಲ್ಲಿ ಒಮ್ಮೆಯೂ ಹೆಂಡತಿ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಅವರಾಗಲೇ ಸುಮಾರು 150 ಕಿಮೀ ದೂರ ಕಾರು ಓಡಿಸಿ ಕೊರಾಟ್ ಪ್ರಾಂತ್ಯ ತಲುಪಿಕೊಂಡಿದ್ದರು. ಇನ್ನು ಅಮ್ನುವೇ ಬಳಿ ಪತಿಗೆ ಫೋನ್​​ ಮಾಡಿ ಎಂದು ಪೊಲೀಸರು ಹೇಳಿದರೆ ಆಕೆಗೆ ಆತನ ಫೋನ್​ನಂಬರ್​ ಕೂಡ ಸರಿಯಾಗಿ ನೆನಪಿನಲ್ಲಿರಲಿಲ್ಲ. ತನ್ನ ನಂಬರ್​​ಗೇ ಕರೆ ಮಾಡಿದ್ದಾರೆ. ಹೇಗೂ ಬ್ಯಾಗ್​ ಕಾರಿನಲ್ಲಿಯೇ ಇದೆ. ಫೋನ್​ ರಿಂಗ್​ ಆದಾಗ ಪತಿ ಎತ್ತಿಕೊಳ್ಳುತ್ತಾರೆ ಎಂದು ಸುಮಾರು 20 ಬಾರಿ ಕರೆ ಮಾಡಿದರೂ ಒಮ್ಮೆಯೂ ಬೂಂಟೊಮ್ ಅದನ್ನು ರಿಸೀವ್​ ಮಾಡಲಿಲ್ಲ.

ಕೊನೆಗೆ ಪೊಲೀಸರೇ ಅದೇನೇನೋ ಪ್ರಯತ್ನ ಮಾಡಿ ಬೆಳಗ್ಗೆ 8ಗಂಟೆ ಹೊತ್ತಿಗೆ ಬೂಂಟೊಮ್​​ನನ್ನು ಸಂಪರ್ಕಿಸಿದ್ದಾರೆ. ವಿಷಯ ಹೀಗಿದೆ ನೋಡಿ ಎಂದು ಪೊಲೀಸರು ತಿಳಿಸಿದಾಗಲೇ ಆತನಿಗೆ ತನ್ನ ಪತ್ನಿಯನ್ನು ಬಿಟ್ಟು ಬಂದಿದ್ದು ಗೊತ್ತಾಗಿದೆ. ಮತ್ತೆ ಅವರು ವಾಪಸ್​ ಬಂದು ಪತ್ನಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲ, ಕ್ಷಮೆಯನ್ನೂ ಕೇಳಿದ್ದಾರೆ. ನನಗೇ ನಾಚಿಕೆಯಾಗುತ್ತಿದೆ ಎಂದು ಪಶ್ಚಾತ್ತಾಪ ಪಟ್ಟಿದ್ದಾರೆ. ‘ನೀನು ಹಿಂದಿನ ಸೀಟ್​​ನಲ್ಲಿ ನಿದ್ರಿಸುತ್ತಿದ್ದೀಯಾ ಎಂದುಕೊಂಡೆ’ ಎಂದು ಸಮಜಾಯಿಷಿ ಕೊಡಲೂ ಮುಂದಾಗಿದ್ದಾರೆ. ಆದರೆ ಅಮ್ನುವೇ ಈ ವಿಷಯವನ್ನು ದೊಡ್ಡದು ಮಾಡಲಿಲ್ಲ. ಪತಿಯೊಂದಿಗೆ ಸ್ವಲ್ಪವೂ ಜಗಳ ಮಾಡದೆ, ಸುಮ್ಮನೆ ಕಾರು ಹತ್ತಿ ಹೋಗಿದ್ದಾರೆ. ಅಂದಹಾಗೇ, ಇವರಿಬ್ಬರಿಗೆ ಮದುವೆಯಾಗಿ 27ವರ್ಷಗಳಾಗಿದ್ದು, 26 ವರ್ಷದ ಮಗ ಇದ್ದಾನೆ.

ಇದನ್ನೂ ಓದಿ: Viral post | ಓ ಗಂಡಸರೇ, ನೀವು ಸ್ನಾನದ ಸಂದರ್ಭ ಕಾಲು ತೊಳೆಯುವುದಿಲ್ಲವೇ!?

Exit mobile version