‘ಸಬ್ ವೇ ರೈಲೊಂದು ಸಂಚಾರ ಮಾಡುತ್ತಿರುತ್ತದೆ. ಪ್ರಯಾಣಿಕರೆಲ್ಲ ಕುಳಿತಿರುತ್ತಾರೆ. ಅದರಲ್ಲೊಬ್ಬ ಯುವಕ ಎದ್ದು ನಿಂತು ತನ್ನ ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ನ್ನು ಬಿಚ್ಚುತ್ತಾನೆ. ಹಾಗೇ, ತನ್ನ ಕಾಲಬುಡದಲ್ಲಿದ್ದ ಸೂಟ್ಕೇಸ್ ತೆಗೆದು, ಅದರಿಂದ ತೆಗೆದ ಒಂದು ಚಿಕ್ಕ ಕ್ಯಾನ್ನಿಂದ ಅದೇ ಸೂಟ್ಕೇಸ್ನಲ್ಲಿ ನೀರು ಸುರಿಯುತ್ತಾನೆ. ಬಳಿಕ ತಾನೂ ಆ ಸೂಟ್ಕೇಸ್ನಲ್ಲಿಯೇ ನಿಂತು ಮೈಮೇಲೆ ಎಲ್ಲ ನೀರು ಸುರಿದುಕೊಂಡು, ಸ್ಪಂಜ್ನಲ್ಲಿ ಸೋಪ್ ಹಾಕಿ ಉಜ್ಜಿಕೊಳ್ಳುತ್ತಾನೆ. ಅಷ್ಟರಲ್ಲಿ ಅವನ ಅಕ್ಕಪಕ್ಕ ಕುಳಿತಿದ್ದ ಪ್ರಯಾಣಿಕರೆಲ್ಲ ಎದ್ದು ಬದಿಗೆ ಹೋಗಿ ಕುಳಿತಿದ್ದರು. ಇಲ್ಲಿ ಯುವತಿಯರೂ ಇದ್ದು, ಅವರೆಲ್ಲರೂ ಕಿರಿಕಿರಿಗೊಂಡು ಪಕ್ಕ ಸರಿದು ಹೋಗಿದ್ದಾರೆ. ಆದರೆ ಈತ ಅದ್ಯಾವುದನ್ನೂ ಗಮನಿಸದೆ, ತನ್ನ ಪಾಡಿಗೆ ತಾನು ಸ್ನಾನ ಮಾಡಿಕೊಂಡು, ಮೈಯನ್ನೆಲ್ಲ ಟವೆಲ್ನಿಂದ ಒರೆಸಿಕೊಂಡು, ಬಿಚ್ಚಿಟ್ಟಿದ್ದ ಬಟ್ಟೆಯನ್ನು ಧರಿಸಿ, ಕೈಯಲ್ಲಿ ನೀರು ತುಂಬಿದ ಸೂಟ್ಕೇಸ್ ಹಿಡಿದು ಕೆಳಗೆ ಇಳಿದು ಹೋಗಿದ್ದಾನೆ’-ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ (Viral Video) ಮತ್ತು ವಿಚಿತ್ರ ಎನ್ನಿಸಿದೆ.
ಅಂದಹಾಗೇ, ಈ ದೃಶ್ಯ ಚಿತ್ರೀಕರಣವಾಗಿದ್ದು ನ್ಯೂಯಾರ್ಕ್ ಸಿಟಿಯ ಸಬ್ವೇ ಟ್ರೇನ್ನಲ್ಲಿ. ಆ ಹುಡುಗ ಅದ್ಯಾಕೆ ಹಾಗೆ ಮಾಡಿದ ಎಂಬುದು ಗೊತ್ತಾಗಲಿಲ್ಲ. ಉಳಿದ ಪ್ರಯಾಣಿಕರನ್ನು ಫ್ರಾಂಕ್ ಮಾಡಲೆಂದೇ ಅವನು ಹಾಗೆ ಮಾಡಿದ ಎಂದು ಅನ್ನಿಸುತ್ತದೆ. ಆತ ಕೊನೆಯಲ್ಲಿ ಟ್ರೇನ್ ಇಳಿಯುವಾಗ ನಗುತ್ತ ಇಳಿದು ಹೋಗುವುದನ್ನು ನೋಡಿದಾಗ ಇದು ತಮಾಷೆಯೇನೋ ಅನ್ನಿಸದೆ ಇರದು. ಆದರೂ ಆ ರೈಲಿನಲ್ಲಿ ಎಲ್ಲರೆದುರು ಬಟ್ಟೆ ಬಿಚ್ಚಿ ಸ್ನಾನ ಮಾಡಿದ್ದು ಯಾಕೆ ಎಂಬುದಕ್ಕೆ ಸರಿಯಾದ ಉತ್ತರ ಸಿಕ್ಕಿಲ್ಲ. ಫೇಸ್ಬುಕ್ನಲ್ಲಿ ಶೇರ್ ಆದ ವಿಡಿಯೊಕ್ಕೆ 1.4ಮಿಲಿಯನ್ಗಳಷ್ಟು ವೀವ್ಸ್ ಬಂದಿದೆ.
‘ಅಷ್ಟು ಜನರ ಎದುರು ಹೀಗೆ ಸೂಟ್ಕೇಸ್ನಲ್ಲಿ ಸ್ನಾನ ಮಾಡಲು ಧೈರ್ಯವೇ ಬೇಕು ಎಂದು ಒಬ್ಬರು ಹೇಳಿದ್ದರೆ, ಇನ್ನೊಬ್ಬರು ಅದು ಮೂರ್ಖತನ ಎಂದಿದ್ದಾರೆ. ‘ಕೆಲವರು ಜನರ ಗಮನ ಸೆಳೆಯಲು ಇಂಥದ್ದನ್ನೆಲ್ಲ ಮಾಡುತ್ತಿರುತ್ತಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ‘ಲೈಕ್ಸ್ ಮತ್ತು ವೀವ್ಸ್ಗಾಗಿ ಒಂದಷ್ಟು ಮಂದಿ ಏನೂ ಬೇಕಾದರೂ ಮಾಡುತ್ತಾರೆ’ ಎಂದೂ ಹಲವರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ತುಂಡುಡುಗೆಯಲ್ಲಿ ಪ್ರಯಾಣಿಸುವ ವಿಡಿಯೊ ವೈರಲ್ ಆಗಿತ್ತು. ಆ ವಿಡಿಯೊವನ್ನು ನೋಡಿ ಅನೇಕರು ಆಕೆಯನ್ನು ಟೀಕಿಸಿದ್ದರು.