ಸೊಳ್ಳೆ ಕಡಿದಾಕ್ಷಣ ನಾವೇನೂ ಆ ಬಗ್ಗೆ ಗಂಭೀರವಾಗಿ ಯೋಚಿಸುವುದಿಲ್ಲ. ಅದು ಕಚ್ಚಿದ ಜಾಗದಲ್ಲಿ ತುರಿಕೆ ಇರುತ್ತದೆ, ಕೆಂಪಾಗಿ ದದ್ದು ಬಂದ ರೀತಿ ಆಗುತ್ತದೆ. ಕೆಲ ಸಮಯದ ಬಳಿಕ ಅದು ಸರಿಯಾಗುತ್ತದೆ. ಇನ್ನು ಕೆಲವು ನಿರ್ದಿಷ್ಟ ಪ್ರಬೇಧಕ್ಕೆ ಸೇರಿದ ಸೊಳ್ಳೆಗಳು ಮಲೇರಿಯಾ, ಚಿಕುನ್ಗುನ್ಯಾ, ಡೆಂಗ್ಯೂದಂಥ ಜ್ವರಗಳಿಗೆ ಕಾರಣವಾಗಬಲ್ಲವಾದರೂ, ನಾವು ಸೊಳ್ಳೆಗಳನ್ನು ವಿಷಕಾರಿ ಕೀಟಗಳೆಂದು ಪರಿಗಣಿಸಿಲ್ಲ. ಆದರೆ 27ವರ್ಷದ ಯುವಕನ ಪಾಲಿಗೆ ಈ ಸೊಳ್ಳೆ ಭಾರಿ ಹೊಡೆತ ಕೊಟ್ಟಿದೆ. ಸೊಳ್ಳೆ ಕಚ್ಚಿದ್ದರಿಂದ ಅವನು 30 ಸರ್ಜರಿಗೆ ಒಳಗಾಗಬೇಕಾಯ್ತು, ಸುಮಾರು ಒಂದು ತಿಂಗಳ ಕಾಲ ಕೋಮಾದಲ್ಲಿ ಇರಬೇಕಾಯ್ತು…!
ಯುವಕನ ಹೆಸರು ಸೆಬಾಸ್ಟಿಯನ್ ರೋಚ್ಕೆ. ಜರ್ಮನಿಯವನಾದ ಇವನಿಗೆ 2021ರ ಬೇಸಿಗೆಯಲ್ಲಿ ಒಂದು ಸೊಳ್ಳೆ ಕಡಿದಿತ್ತು. ಅದರ ಬೆನ್ನಲ್ಲೇ ಅವನಿಗೆ ಜ್ವರ ಬಂದಿತ್ತು. ಅಲ್ಲಿಂದಲೇ ಅವನ ಕಾಯಿಲೆಯ ದಿನಗಳು ಶುರುವಾಗಿದ್ದವು. ಆಸ್ಪತ್ರೆಗೆ ದಾಖಲಾಗುವಷ್ಟರಲ್ಲಿ ಸೊಳ್ಳೆ ಕಚ್ಚಿದ ಸೋಂಕು ರೋಚ್ಕೆ ಲಿವರ್, ಮೂತ್ರಪಿಂಡ, ಹೃದಯ, ಶ್ವಾಸಕೋಶಕ್ಕೆ ಆವರಿಸಿ, ಅಂಗಗಳೆಲ್ಲ ಕಾರ್ಯ ನಿಲ್ಲಿಸಲು ಶುರು ಮಾಡಿದವು. ಆತ ಕೋಮಾಕ್ಕೆ ಜಾರಿದ್ದ. ಸುಮಾರು 30 ಸರ್ಜರಿ ಬಳಿಕ ಚೇತರಿಸಿಕೊಂಡಿದ್ದಾನೆ. ಇನ್ನು ಆತನ ಎಡತೊಡೆಯ ಮೇಲೆ ಹುಣ್ಣು ಆಗಿದ್ದರಿಂದ, ಅಲ್ಲಿ ಕೂಡ ಚರ್ಮದ ಕಸಿ ಮಾಡಬೇಕಾಯಿತು. ಆ ಭಾಗದ ಅಂಗಾಂಶ ಪರೀಕ್ಷೆ ನಡೆಸಿದಾಗ, ಸೆರಾಟಿಯಾ ಮಾರ್ಸೆಸೆನ್ಸ್ ಎಂಬ ಬ್ಯಾಕ್ಟೀರಿಯಾ ತೊಡೆಯ ಅರ್ಧ ಭಾಗವನ್ನು ತಿಂದು ಹಾಕಿದ್ದಾಗಿ ವರದಿ ಬಂತು. ಈ ಬ್ಯಾಕ್ಟಿರೀಯಾ ಹುಟ್ಟಿಗೆ ಏಷ್ಯನ್ ಟೈಗರ್ ಸೊಳ್ಳೆಯೇ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಅನಾರೋಗ್ಯದಿಂದ ಸುಧಾರಿಸಿಕೊಂಡ ಬಳಿಕ ಈ ಬಗ್ಗೆ ಅಲ್ಲಿನ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಸೆಬಾಸ್ಟಿಯನ್ ರೋಚ್ಕೆ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ. ‘2021ರಲ್ಲಿ ನಾನು ವಿದೇಶ ಪ್ರವಾಸಕ್ಕೆ ಹೋಗಿದ್ದೆ. ಅಲ್ಲಿಯೇ ಸೊಳ್ಳೆ ಕಡಿದಿರಬಹುದು. ಆದರೆ ಅದಾದ ಮೇಲೆ ನನ್ನ ಆರೋಗ್ಯ ಪೂರ್ತಿಯಾಗಿ ಹದಗೆಟ್ಟಿತು. ನಾನು ಹಾಸಿಗೆ ಹಿಡಿದೆ. ಊಟ-ತಿಂಡಿ ಸೇವನೆ ಸಾಧ್ಯವಾಗುತ್ತಿರಲಿಲ್ಲ. ಬಾತ್ರೂಮ್ಗೆ ಹೋಗಲೂ ಆಗುತ್ತಿರಲಿಲ್ಲ. ನನ್ನ ಎಡ ತೊಡೆಯ ಮೇಲೆ ದೊಡ್ಡದಾದ ಹುಣ್ಣು ಆಯಿತು. ಅದು ದಿನೇದಿನೆ ದೊಡ್ಡದಾಗುತ್ತಲೇ ಇತ್ತು’ ಎಂದು ತಿಳಿಸಿದ್ದಾರೆ. ಇನ್ನು ಪ್ರಾರಂಭದಲ್ಲಿ ಸಣ್ಣ ಜ್ವರವನ್ನು ನಿರ್ಲಕ್ಷಿಸಿದ್ದರಿಂದಲೇ ನಾನು ಕೋಮಾಕ್ಕೆ ಜಾರುವಂತಾಯ್ತು. ಹೀಗಾಗಿ ಯಾರೂ ಕಾಯಿಲೆ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ’ ಎಂದು ಆತ ಹೇಳಿದ್ದಾನೆ.
ಇದನ್ನೂ ಓದಿ: Dengue fever | ರಾಜ್ಯದಲ್ಲಿ ಹೆಚ್ಚುತ್ತಿದೆ ಡೆಂಗ್ಯೂ; ಇರಲಿ ಎಚ್ಚರ!