ಪತ್ನಿಯನ್ನು ಕೊಂದು 40 ವರ್ಷ ಆರಾಮಾಗಿ ಇದ್ದವನಿಗೆ ಜೈಲು ಶಿಕ್ಷೆ ಲಭಿಸುವಂತೆ ಮಾಡಿದ್ದು ಒಂದು ‘ಕ್ರೈಂ ಪಾಡ್ಕಾಸ್ಟ್’. ಈ ಕತೆ ಶುರುವಾಗುವುದು 1965ರಿಂದ. ಈಗ 2022ರವರೆಗೆ ಬಂದು ನಿಂತಿದೆ ಮತ್ತು ಅಂತ್ಯ ಕಂಡಿದೆ. 74 ವರ್ಷದ ಆರೋಪಿ ಜೈಲುಪಾಲಾಗಿದ್ದಾನೆ. ಅಂದಹಾಗೇ, ಇದು ಆಸ್ಟ್ರೇಲಿಯಾದ ಒಂದು ವಿಚಿತ್ರ ಕ್ರೈಂ ಕೇಸ್ ಸ್ಟೋರಿ.
ಆಸ್ಟ್ರೇಲಿಯಾದ ಸಿಡ್ನಿಯ ಕ್ರಿಸ್ಟೋಫರ್ ಡಾಸನ್ ಎಂಬಾತ ವೃತ್ತಿಯಲ್ಲಿ ಶಿಕ್ಷಕ. ಈತ ವೃತ್ತಿಪರ ರಗ್ಬಿ ಲೀಗ್ ಫುಟ್ಬಾಲ್ ಆಟಗಾರನಾಗಿದ್ದವ. ವೃತ್ತಿಯಲ್ಲಿ ನರ್ಸ್ ಆಗಿದ್ದ ಲಿನೆಟ್ ಸಿಮ್ಸ್ ಎಂಬಾಕೆಯನ್ನು 1965ರಲ್ಲಿ, ಹೈಸ್ಕೂಲ್ ಕಾರ್ಯಕ್ರಮವೊಂದಲ್ಲಿ ಭೇಟಿಯಾಗುತ್ತಾನೆ. ಆಗ ಇವರಿಬ್ಬರಿಗೂ 16ರ ವಯಸ್ಸಿನ ಆಸುಪಾಸು. ಪರಸ್ಪರ ಮೆಚ್ಚಿಕೊಂಡು, ಪ್ರೀತಿಸಿ 1970ರಲ್ಲಿ ಮದುವೆಯಾಗುತ್ತಾರೆ. ಇಬ್ಬರು ಮಕ್ಕಳೂ ಆಗುತ್ತಾರೆ. 1970ರಿಂದ 1982ರವರೆಗೆ ಎಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ 1982ರಲ್ಲಿ ಲಿನೆಟ್ ಸಿಮ್ಸ್ ನಿಗೂಢವಾಗಿ ನಾಪತ್ತೆಯಾಗುತ್ತಾಳೆ. ಆಕೆ ನಾಪತ್ತೆಯಾದ ಎರಡೇ ದಿನಕ್ಕೆ, ಡಾನಸ್ ಅಚ್ಚರಿಯ ಕೆಲಸವೊಂದನ್ನು ಮಾಡುತ್ತಾನೆ. ತನ್ನ ವಿದ್ಯಾರ್ಥಿನಿಯಾಗಿದ್ದ 16 ವರ್ಷದ ಜೋನ್ನೆ ಕರ್ಟಿಸ್ ಎಂಬುವಳನ್ನು ಮನೆಗೆ ಕರೆದುಕೊಂಡು ಬರುತ್ತಾನೆ. ಈಕೆ ಡಾನಸ್ ವಿದ್ಯಾರ್ಥಿನಿಯೂ ಆಗಿದ್ದಳು ಮತ್ತು ಡಾನಸ್-ಲಿನೆಟ್ ದಂಪತಿಯ ಮಕ್ಕಳನ್ನು ನೋಡಿಕೊಳ್ಳಲು ಇವರ ಮನೆಗೆ ಬರುತ್ತಿದ್ದಳು. ಇವಳೊಂದಿಗೆ ಡಾನಸ್ಗೆ ಅಫೇರ್ ಶುರುವಾಗಿತ್ತು. ಪತ್ನಿ ಕಾಣೆಯಾದ ಬೆನ್ನಲ್ಲೇ, ಶಾಶ್ವತವಾಗಿ ತಮ್ಮ ಮನೆಯಲ್ಲೇ ಇರುವಂತೆ ಜೋನ್ನೆಗೆ ಆತ ಹೇಳಿದ್ದ. ‘ನನ್ನ ಪತ್ನಿ ಬಿಟ್ಟು ಹೋಗಿದ್ದಾಳೆ’ ಎಂದೇ ಆತ ಪ್ರತಿಪಾದಿಸಿದ್ದ.
ಪತ್ನಿ ನಾಪತ್ತೆಯಾದ ಆರು ವಾರಗಳ ಬಳಿಕ ಪೊಲೀಸರಿಗೆ ಆಕೆಯ ಸಂಪೂರ್ಣ ವಿವರವನ್ನು ನೀಡಿ ‘ಆಕೆ ನನ್ನೊಂದಿಗೆ ಬದುಕಲು ಸಾಧ್ಯವಿಲ್ಲ ಎಂದೇ ತೊರೆದು ಹೋಗಿದ್ದಾಳೆ. ಮದುವೆಯನ್ನೂ ಮುರಿದುಕೊಂಡಿದ್ದಾಳೆ. ತನ್ನ ಸಮಾನ ಮನಸ್ಕರ ಗುಂಪು ಸೇರಿಕೊಂಡಿದ್ದಾಳೆ. ನಾನೆಷ್ಟು ಬಾರಿ ಕರೆ ಮಾಡಿದರೂ ವಾಪಸ್ ಬರಲು ಒಪ್ಪುತ್ತಿಲ್ಲ’ ಎಂದು ನ್ಯಾಯಾಲಯಕ್ಕೂ ವರದಿಕೊಟ್ಟ. ಅದೆಲ್ಲದರ ಪರಿಣಾಮವಾಗಿ ಪೊಲೀಸರು ಈತನ ವಿರುದ್ಧದ ತನಿಖೆ ಕೈಬಿಟ್ಟರು ಮತ್ತು 1983ರಲ್ಲಿ ಕಾನೂನು ಪ್ರಕಾರ ವಿಚ್ಛೇದನವನ್ನೂ ಪಡೆದ. ಅಲ್ಲಿಗೆ ಜೋನ್ನೆ ಕರ್ಟಿಸ್ ಜತೆ ಮದುವೆಯಾಗಲು ದಾರಿ ಸುಗಮವಾಗಿಸಿಕೊಂಡಿದ್ದ. ಆಮೇಲೆ 1984ರಲ್ಲಿ ಆಕೆಯನ್ನು ಮದುವೆಯನ್ನೂ ಆಗಿದ್ದ. (1993ರಲ್ಲಿ ಜೋನ್ನೆ ಜತೆಯೂ ಡಿವೋರ್ಸ್ ಆಗಿದೆ).
ಇಷ್ಟೆಲ್ಲ ಆದ ಮೇಲೆಯೂ ಲಿನೆಟ್ಗಾಗಿ ಪೊಲೀಸರ ಹುಡುಕಾಟ ಮುಂದುವರಿದಿತ್ತು. 1982ರಿಂದ ಆಕೆಯ ಕೇಸ್ ತನಿಖೆ ಮಾಡಿದ್ದ ಇಬ್ಬರು ತನಿಖಾಧಿಕಾರಿಗಳ ವಿಚಾರಣೆಯನ್ನು 2001ರಲ್ಲಿ ಮತ್ತು 2003ರಲ್ಲಿ ಪ್ರತ್ಯೇಕವಾಗಿ ಮಾಡಲಾಗಿತ್ತು. 2001ರಲ್ಲಿ ವಿಚಾರಣೆಗೆ ಒಳಪಟ್ಟಿದ್ದ ಅಧಿಕಾರಿ ‘ಲಿನೆಟ್ಳ ಮೃತದೇಹ ಪತ್ತೆಯಾಗಿಲ್ಲ. ಆದರೆ ಅವಳು ಬದುಕಿಲ್ಲ, ಆಕೆಯನ್ನು ಅದ್ಯಾರೋ ಪರಿಚಿತರೇ ಕೊಲೆ ಮಾಡಿದ್ದಾರೆ ಎನ್ನಿಸುತ್ತದೆ’ ಎಂದು ಹೇಳಿದ್ದ. ಹಾಗೇ, 2003ರಲ್ಲಿ ವಿಚಾರಣೆಗೆ ಒಳಪಟ್ಟಿದ್ದ ತನಿಖಾಧಿಕಾರಿ ‘ ಪತಿ ಡಾಸನ್ನನ್ನು ಇನ್ನಷ್ಟು ತೀವ್ರವಾಗಿ ವಿಚಾರಣೆ ನಡೆಸಬೇಕು’ ಎಂದು ಹೇಳಿದ್ದ. ಆದರೆ ಏನೂ ಕುರುಹು, ಸಾಕ್ಷಿಗಳಿಲ್ಲದೆ ಕೇಸ್ ಮುಂದೋಡಲಿಲ್ಲ.
ಎಲ್ಲವೂ ತಣ್ಣಗಿದ್ದಾಗ ಪ್ರಸಾರವಾಯ್ತು ಪಾಡ್ಕಾಸ್ಟ್
ಆಸ್ಟ್ರೇಲಿಯಾದ ಪ್ರಸಿದ್ಧ ತನಿಖಾ ಪತ್ರಕರ್ತ ಹೆಡ್ಲಿ ಥಾಮಸ್ ಅವರು 2018ರ ಮೇ ತಿಂಗಳಲ್ಲಿ The Teacher’s Pet ಎಂಬ ಕ್ರೈಂ ಪಾಡ್ಕಾಸ್ಟ್ ನಡೆಸಿದ್ದರು. ಮತ್ತೇನೂ ಅಲ್ಲ, ಇದೇ ಡಾಸನ್-ಲಿನೆಟ್ ಮತ್ತು ಜೋನ್ನೆ ಕಥೆಯನ್ನೇ ಒಳಗೊಂಡ ಪಾಡ್ಕಾಸ್ಟ್ ಅದು. ಸ್ಲೇಡ್ ಗಿಬ್ಸನ್ ಎಂಬುವರು ಅದರ ನಿರ್ಮಾಪಕರು. ಒಟ್ಟು 17 ಕಂತುಗಳಲ್ಲಿ ಪ್ರಸಾರವಾಗಿತ್ತು. ಹೆಡ್ಲಿ ಥಾಮಸ್ ಮತ್ತು ಅವರ ತಂಡ ಸ್ವತಃ ತನಿಖೆ ನಡೆಸಿದ ವಿಷಯಗಳನ್ನೆಲ್ಲ ಸೇರಿಸಿ ಅದ್ಭುತವಾಗಿ ಪಾಡ್ಕಾಸ್ಟ್ ರೂಪಿಸಲಾಗಿತ್ತು. ಡಾಸನ್ ಅಫೇರ್ ವಿಷಯಗಳನ್ನೆಲ್ಲ ಅದರಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗಿತ್ತು. ಈತನ ಅಫೇರ್ ಗೊತ್ತಾದ ನಂತರ ಲಿನೆಟ್ ತಿರುಗಿಬಿದ್ದಿದ್ದರು ಎಂಬ ವಿಷಯಗಳನ್ನೂ ಪಾಡ್ಕಾಸ್ಟ್ನಲ್ಲಿ ಹೇಳಲಾಗಿತ್ತು. ಹಾಗೇ, ಪ್ರಸ್ತುತ ಕೇಸ್ ತನಿಖೆಯಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ, ಆತನಿಗೆ ಅತ್ಯಂತ ಸುಲಭವಾಗಿ ವಿಚ್ಛೇದನ ಮಂಜೂರು ಮಾಡಲಾಗಿದೆ ಎಂಬಿತ್ಯಾದಿ ವಿಷಯಗಳನ್ನು ಪಾಡ್ಕಾಸ್ಟ್ನಲ್ಲಿ ಅತ್ಯಂತ ಕಟುವಾಗಿ ಟೀಕಿಸಲಾಗಿತ್ತು.
2018ರಲ್ಲಿ ಪಾಡ್ಕಾಸ್ಟ್ ಪ್ರಸಾರವಾಗುತ್ತಿದ್ದಂತೆ ಪೊಲೀಸರು ಮತ್ತೆ ಅಲರ್ಟ್ ಆದರು. ಲಿನೆಟ್ ಕೇಸ್ನ್ನು ಮತ್ತೆ ಮರು ತನಿಖೆ ಪ್ರಾರಂಭ ಮಾಡಿದರು. ಡಾನಸ್ ವಿಚಾರಣೆ ಮತ್ತೆ ಹೊಸದಾಗಿ ಶುರುವಾಯಿತು. ಕೋರ್ಟ್ನಲ್ಲಿ ವಿಚಾರಣೆ ನಡೆಯಿತು. ಅಂತಿಮವಾಗಿ ಡಾನಸ್ನೇ ಪತ್ನಿಯನ್ನು ಕೊಂದಿದ್ದಾಗಿ ಸಾಬೀತಾಗಿದೆ. ಲಿನೆಟ್ ಎಲ್ಲ ತರ ಹೇಳಿ ನೋಡಿ, ಕೊನೆಗೆ ರಾಜಿಯಾಗಲೂ ಸಿದ್ಧ ಇದ್ದಿದ್ದಾಗ್ಯೂ ಆಕೆಯನ್ನು ಡಾನಸ್ ಕೊಂದಿದ್ದಾನೆ ಎಂದು ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಟೀಚರ್ಸ್ ಪೆಟ್ ಪಾಡ್ಕಾಸ್ಟ್ ಸಿಕ್ಕಾಪಟೆ ಖ್ಯಾತಿಯಾಗಿತ್ತು. ಲಕ್ಷಾಂತರ ಜನ ಇದರ ಎಪಿಸೋಡ್ಗಳನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಿದ್ದರು. ಆದರೆ ತನಿಖೆ ಕಾರಣಕ್ಕೆ 2019ರಲ್ಲಿ ಎಲ್ಲಿಯೂ ಪ್ರಸಾರ ಮಾಡದೆ ನಿರ್ಬಂಧಿಸಲಾಗಿತ್ತು. ಈ ವರ್ಷ ಆರೋಪಿ ಡಾನಸ್ ಸಿಕ್ಕಿಬಿದ್ದ ಬೆನ್ನಲ್ಲೇ ಮತ್ತೆ ಪಾಡ್ಕಾಸ್ಟ್ ಎಪಿಸೋಡ್ಗಳು ಪ್ರಸಾರಗೊಂಡಿವೆ.
ಇದನ್ನೂ ಓದಿ: Teacher Assaulted | ಪೋಷಕರಿಗೆ ದೂರು ಹೇಳಿದ್ದಕ್ಕೆ 5 ತಿಂಗಳು ಗರ್ಭಿಣಿ ಶಿಕ್ಷಕಿಯನ್ನೇ ತಳ್ಳಾಡಿದ ವಿದ್ಯಾರ್ಥಿಗಳು!