ನವ ದೆಹಲಿ: ಮನೀಶಾ ರೋಪೇಟಾ ಎಂಬ 26ವರ್ಷದ ಮಹಿಳಾ ಪೊಲೀಸ್ ಅಧಿಕಾರಿ ಒಂದು ಇತಿಹಾಸ ಸೃಷ್ಟಿಸಿದ್ದಾರೆ. ಮನೀಶಾ ರೋಪೇಟಾ ಭಾರತದವರು ಅಲ್ಲ. ಇವರು ಪಾಕಿಸ್ತಾನದಲ್ಲಿ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಡಿಎಸ್‌ಪಿ). ಪಾಕಿಸ್ತಾನದಲ್ಲಿ ಡಿಎಸ್‌ಪಿ ಹುದ್ದೆಗೆ ಏರಿದ ಮೊಟ್ಟ ಮೊದಲ ಹಿಂದು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೋಪೇಟಾ ಅವರು ಸಿಂಧ್ ಪಬ್ಲಿಕ್ ಸೇವಾ ಆಯೋಗ (ಎಸ್‌ಪಿಎಸ್‌ಸಿ)ದ ಪರೀಕ್ಷೆಯನ್ನು 2021ರಲ್ಲಿ ಉತ್ತೀರ್ಣರಾಗಿದ್ದಾರೆ. ಅದರಲ್ಲಿ 16ನೇ ರ‍್ಯಾಂಕ್ ಪಡೆದು, ಮೆರಿಟ್ ಲಿಸ್ಟ್‌ನಲ್ಲಿ 152ನೇ ಸ್ಥಾನ ಪಡೆದಿದ್ದರು. ಸದ್ಯ ಅವರು ತರಬೇತಿ ಹಂತದಲ್ಲಿದ್ದು, ಶೀಘ್ರದಲ್ಲೇ ಲ್ಯಾರಿ ಎಂಬ ಕ್ರೈಂ ಪೀಡಿತ ಪ್ರದೇಶಕ್ಕೆ ಡಿಎಸ್‌ಪಿ ಆಗಿ ನಿಯೋಜನೆಗೊಳ್ಳಲಿದ್ದಾರೆ. ಇದುವರೆಗೆ ಪಾಕಿಸ್ತಾನದಲ್ಲಿ ಹಿಂದು ಸಮುದಾಯದ ಮಹಿಳೆಯೊಬ್ಬರು ಡಿಎಸ್‌ಪಿ ಹುದ್ದೆಗೆ ಏರಿರಲಿಲ್ಲ.
ಮನೀಶಾ ರೋಪೇಟಾ ಮೂಲತಃ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ, ಜ್ಯಾಕೋಬಾಬಾದ್‌ನವರು. ಇವರು ಮೊದಲು ತಾವು ವೈದ್ಯರಾಗಬೇಕು ಎಂದು ಬಯಸಿದ್ದರಂತೆ. ಯಾಕೆಂದರೆ, ಆಕೆಯ ಮೂವರೂ ಸೋದರಿಯರೂ ಇದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಮನೀಶಾಗೆ ಎಂಬಿಬಿಎಸ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಆಗಲೇ ಇಲ್ಲ. ಹೀಗಾಗಿ ಆಕೆ ಪೊಲೀಸ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡರು.
ಈ ಬಗ್ಗೆ ಪಿಟಿಐ ಜತೆ ಮಾತನಾಡಿದ ಮನೀಶಾ ರೋಪೇಟಾ, ʼನಾನು ವೈದ್ಯೆಯಾಗಲು ಸಾಧ್ಯವಿಲ್ಲ ಎಂದು ನನಗೆ ಗೊತ್ತಾಯಿತು. ಹಾಗಾಗಿ ಫಿಸಿಕಲ್ ಥೆರಪಿಯಲ್ಲಿ ಪದವಿ ಪಡೆಯುತ್ತೇನೆ ಎಂದು ಮನೆಯವರ ಬಳಿ ಹೇಳಿದೆ. ಹಾಗೇ ಇನ್ನೊಂದೆಡೆ ಸಿಂಧ್ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಗೂ ಸಿದ್ಧಳಾಗುತ್ತಿದ್ದೆ. ನಾನು ಪರೀಕ್ಷೆ ಬರೆದ ವರ್ಷ 468 ಅಭ್ಯರ್ಥಿಗಳು ಇದ್ದರು. ನನಗೆ 16ನೇ ಶ್ರೇಣಿ ಸಿಕ್ಕಿದ್ದು ತುಂಬ ಖುಷಿಯಾಯಿತುʼ ಎಂದಿದ್ದಾರೆ.
ಶೋಷಿತ, ಸಂತ್ರಸ್ತೆಯರಾದ ಮಹಿಳೆಯರ ರಕ್ಷಣೆಗೆ ಮಹಿಳೆಯರೇ ಮುಂದಾಗಬೇಕು ಎಂಬ ಆಲೋಚನೆ ತಮ್ಮಲ್ಲಿ ಮೂಡಿದ್ದೇ, ತಾವು ಪೊಲೀಸ್ ಹುದ್ದೆ ಆಯ್ಕೆ ಮಾಡಿಕೊಳ್ಳಲು ಕಾರಣವಾಯಿತು ಎಂದು ಮನೀಶಾ ರೋಪೇಟಾ ಹೇಳಿಕೊಂಡಿದ್ದಾರೆ. ಹಾಗೇ, ಪಾಕಿಸ್ತಾನದಲ್ಲಿ ಮಹಿಳೆಯರ ವಿರುದ್ಧ, ಅದರಲ್ಲೂ ಅಲ್ಪಸಂಖ್ಯಾತ ಸಮುದಾಯಗಳ ಮಹಿಳೆಯರ ಮೇಲಿನ ಶೋಷಣೆ ಮಿತಿಮೀರಿದೆ. ʼದೈಹಿಕ-ಲೈಂಗಿಕ ದೌರ್ಜನ್ಯ, ಮರ್ಯಾದಾ ಹತ್ಯೆ, ಬಲವಂತದ ಮದುವೆʼ ಮತ್ತಿತರ ಕಾರಣಗಳಿಂದ ಮಹಿಳೆಯರು ತೀವ್ರ ಸಂಕಷ್ಟದಲ್ಲಿದ್ದಾರೆ ಮತ್ತು ಇದೇ ಕಾರಣಕ್ಕೆ ಮಹಿಳೆಯರ ಪಾಲಿಗೆ ಪಾಕಿಸ್ತಾನ ಯಾವ ಕಾರಣಕ್ಕೂ ಸುರಕ್ಷಿತವಲ್ಲ ಎಂಬ ಕುಖ್ಯಾತಿ ಪಡೆದಿದೆ. ಇಂಥ ದೇಶದಲ್ಲಿ ಹಿಂದು ಸಮುದಾಯದ ಮಹಿಳೆ ಮನೀಶಾ ಡಿಎಸ್‌ಪಿ ಹುದ್ದೆಗೆ ಏರಿದ್ದಾರೆ.
ಹಾದಿ ಸುಲಭದ್ದಲ್ಲ
ಪಾಕಿಸ್ತಾನದಲ್ಲಿ ಮನೀಶಾ ಡಿಎಸ್‌ಪಿಗೆ ಹುದ್ದೆಗೆ ಏರುವ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಈ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ. ಅವಳ ಕುಟುಂಬದಲ್ಲೇ ಈ ಹುದ್ದೆ ಕುರಿತಾಗಿ ಅಸಮಾಧಾನ ಇತ್ತು. ಸಂಬಂಧಿಕರೂ ಕೂಡ ವಿರೋಧಾತ್ಮಕ ಮಾತುಗಳನ್ನಾಡಿದ್ದರು. ನಾನು ಎಷ್ಟು ದಿನವೂ ಪೊಲೀಸ್ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದೇ ಅವರೆಲ್ಲ ಅಂದುಕೊಂಡಿದ್ದರು. ನನ್ನ ಆತ್ಮವಿಶ್ವಾಸವನ್ನು ಕುಗ್ಗಿಸುವ ಹತ್ತು ಹಲವು ಮಾತುಗಳನ್ನು ಕೇಳಲ್ಪಟ್ಟೆ. ಆದರೆ ಎಲ್ಲವನ್ನೂ ಮೀರಿ ನಾನಿಂದು ಡಿಎಸ್‌ಪಿಯಾಗಿದ್ದೇನೆ. ನಾನು ನನ್ನ ವೃತ್ತಿಯಲ್ಲಿ ಮಹಿಳಾವಾದವನ್ನು ಎತ್ತಿ ಹಿಡಿಯಲು ಬಯಸುತ್ತೇನೆ ಮತ್ತು ಲಿಂಗ ಸಮಾನತೆಯನ್ನು ಆದ್ಯತೆಯಾಗಿಟ್ಟುಕೊಳ್ಳುತ್ತೇನೆ ಎಂದು ಮನೀಶಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral News | ಪಾಕಿಸ್ತಾನದ ವಕ್ರ ಕುತ್ತಿಗೆಯ ಬಾಲಕಿಗೆ ದೇವರಾದ ಭಾರತದ ಡಾಕ್ಟರ್!