ನ್ಯೂಯಾರ್ಕ್: ಯುಎಸ್ನಲ್ಲಿ ಮತ್ತೊಮ್ಮೆ ಗುಂಡಿನ ದಾಳಿಯಾಗಿದೆ. ಈ ಸಲ ಉತ್ತರ ಕೆರೊಲಿನಾದ ನ್ಯೂಸ್ ರಿವರ್ ಗ್ರೀನ್ ವೇ ಬಳಿ ಶೂಟೌಟ್ ನಡೆದಿದ್ದು, ಇದರಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಸೇರಿ, ಆರು ಮಂದಿ ಹತ್ಯೆಯಾಗಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಮುಖ್ಯ ಆರೋಪಿಯನ್ನು ಜಾರ್ಜಿಯಾ ಬಳಿ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಲಿ ಪೊಲೀಸರು, ನಾವು ತನಿಖೆ ಪ್ರಾರಂಭ ಮಾಡಿದ್ದೇವೆ. ಈ ಭಾಗದ ಜನರು ನಮ್ಮ ಮುಂದಿನ ಸೂಚನೆವರೆಗೆ ಯಾರೂ ಮನೆಯಿಂದ ಹೊರಬೀಳಬಾರದು ಎಂದು ಹೇಳಿದ್ದಾರೆ.
ಇಂದಿನ ಶೂಟೌಟ್ನಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನೆಲ್ಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಡೆದ ಸ್ಥಳದಲ್ಲಷ್ಟೇ ಅಲ್ಲದೆ, ಅದರ ಅಕ್ಕಪಕ್ಕದ ಸ್ಥಳಗಳಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಕಾನೂನು-ಸುವ್ಯವಸ್ಥೆ ಪಾಲನೆ ಮಾಡುವಂತೆ ಅಲ್ಲಿನ ಜನರಿಗೆ ಪೊಲೀಸರು ಸೂಚಿಸಿದ್ದಾರೆ. ಉತ್ತರ ಕೆರೊಲಿನಾದ ಗವರ್ನರ್ ರಾಯ್ ಕೂಪರ್ ಅವರು ರಾಲಿ ಮೇಯರ್ ಬಾಲ್ಡ್ವಿನ್ ಜತೆ ಈ ಶೂಟೌಟ್ ಬಗ್ಗೆ ಮಾತನಾಡಿದ್ದಾರೆ. ಜನರ ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ.
ಅಮೆರಿಕದಲ್ಲಿ ಇತ್ತೀಚೆಗೆ ಪದೇಪದೆ ಶೂಟೌಟ್ ನಡೆಯುತ್ತಿದೆ. ಮೇ ತಿಂಗಳಲ್ಲಿ ಟೆಕ್ಸಾಸ್ನ ಶಾಲೆಯೊಂದರ ಮೇಲೆ ಗುಂಡಿನ ದಾಳಿಯಾಗಿತ್ತು. ಅದರಲ್ಲಿ 19 ಮಕ್ಕಳು ಮೃತಪಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲೇ ಅದೊಂದು ಭಯಾನಕವಾದ ದಾಳಿಯಾಗಿತ್ತು. ಹಾಗೇ, ಜುಲೈ 4ರಂದು ನಡೆದ ಯುಎಸ್ ಸ್ವಾತಂತ್ರ್ಯ ದಿನಾಚರಣೆ ವೇಳೆ ಚಿಕಾಗೋದ ಉಪವಲಯದಲ್ಲಿ ಸ್ವಾತಂತ್ರ್ಯೋತ್ಸವ ಪರೇಡ್ ಮೇಲೆ ಶೂಟೌಟ್ ನಡೆದಿತ್ತು. ಇದರಲ್ಲಿ ಕೂಡ ಆರು ಮಂದಿ ಮೃತಪಟ್ಟಿದ್ದರು.
ಇದನ್ನೂ ಓದಿ: ಅಮೆರಿಕದಲ್ಲಿ ಒಂದೇ ರಾತ್ರಿಯಲ್ಲಿ 3 ಕಡೆ ಶೂಟೌಟ್; 9 ಮಂದಿ ಸಾವು, 28 ಜನರಿಗೆ ಗಾಯ