Site icon Vistara News

Conversion In Pakistan: ಪಾಕ್‌ನಲ್ಲಿ 81 ಹಿಂದು ಹೆಣ್ಣುಮಕ್ಕಳ ಮತಾಂತರ; ಸಂಘಟನೆಗಳಿಂದ ಪ್ರತಿಭಟನೆ

Members of Pakistan’s Hindu community protest against forced conversions

Members of Pakistan’s Hindu community protest against forced conversions

ಇಸ್ಲಾಮಾಬಾದ್:‌ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದುಗಳ ಮೇಲೆ ದಶಕಗಳಿಂದಲೂ ದೌರ್ಜನ್ಯ ನಡೆಯುತ್ತಿದೆ. ಹಿಂದುಗಳ ಮೇಲೆ ಹಲ್ಲೆ, ದೇವಸ್ಥಾನಗಳ ಮೇಲೆ ದಾಳಿ, ಹಿಂದು ಬಾಲಕಿಯರ ಮೇಲೆ ಅತ್ಯಾಚಾರ ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ, ಅನಾಚಾರ ನಡೆಯುತ್ತದೆ. ಕ್ರೈಸ್ತರು ಹಾಗೂ ಸಿಖ್ಖರ ಮೇಲೂ ಇಂತಹ ದಾಳಿಗಳು ನಡೆಯುತ್ತಿವೆ. ಅದರಲ್ಲೂ, ಹಿಂದು ಬಾಲಕಿಯರನ್ನು ಬಲವಂತವಾಗಿ ಇಸ್ಲಾಂಗೆ (Conversion In Pakistan) ಮತಾಂತರಗೊಳಿಸುವ ಅನಿಷ್ಟ ಪದ್ಧತಿ ಮುಂದುವರಿದಿದ್ದು, ಇದನ್ನು ಖಂಡಿಸಿ ಹಿಂದುಗಳು ಭಾರಿ ಪ್ರತಿಭಟನೆ ನಡೆಸಿದ್ದಾರೆ. ಆ ಮೂಲಕ ಬಲವಂತದ ಮತಾಂತರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರಾಚಿ ಪ್ರೆಸ್‌ ಕ್ಲಬ್‌ ಮುಂಭಾಗದಲ್ಲಿ ಹಾಗೂ ಸಿಂಧ್‌ ಅಸೆಂಬ್ಲಿ ಕಟ್ಟಡದ ಎದುರು ಮಾರ್ಚ್‌ 30ರಂದು ಹಿಂದುಗಳು, ಹಿಂದು ಸಂಘಟನೆಯಾದ ಪಾಕಿಸ್ತಾನ ದಾರಾವರ್‌ ಇತ್ತೇಹಾದ್‌ (PDI) ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಪಸಂಖ್ಯಾತರಾಗಿರುವ ಹಿಂದು ಬಾಲಕಿಯರನ್ನು ಅಪಹರಿಸಿ, ಅವರನ್ನು ಬಲವಂತವಾಗಿ ಮತಾಂತರಗೊಳಿಸುವುದಲ್ಲದೆ, ಮದುವೆಯಾಗುತ್ತಿರುವ ಪ್ರಕರಣಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಹಾಗೆಯೇ, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದಾಗಿ ಒತ್ತಾಯಿಸಿದ್ದಾರೆ.

“ಪಾಕಿಸ್ತಾನದಲ್ಲಿ ಸಿಂಧಿ ಹಿಂದುಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಅದರಲ್ಲೂ, ಗ್ರಾಮೀಣ ಭಾಗದ ಹಿಂದು ಬಾಲಕಿಯರನ್ನು ಮತಾಂತರ ಮಾಡುತ್ತಿರುವುದು ಖಂಡನೀಯವಾಗಿದೆ. 12-13 ವರ್ಷದ ಬಾಲಕಿಯರನ್ನು ಅಪಹರಿಸಿ, ಅವರನ್ನು ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದೆ. ಹಾಗೆಯೇ, ವೃದ್ಧರ ಜತೆ ಅವರ ಮದುವೆ ಮಾಡಲಾಗುತ್ತಿದೆ. ಮೂಲಭೂತವಾದಿಗಳ ಹಿಂಸಾಚಾರಕ್ಕೆ ಹಿಂದು ಬಾಲಕಿಯರು ಬಲಿಯಾಗುತ್ತಿದ್ದಾರೆ” ಎಂದು ಪಿಡಿಐ ಮುಖಂಡರೊಬ್ಬರು ಹೇಳಿದ್ದಾರೆ.

ಪ್ರತಿಭಟನೆಯ ವಿಡಿಯೊ ಇಲ್ಲಿದೆ

ನೂರಾರು ಪೊಲೀಸರ ನಿಯೋಜನೆ ಮಧ್ಯೆಯೇ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು. ಹಿಂದು ಬಾಲಕಿಯರು ಹಾಗೂ ಮಹಿಳೆಯರ ಮತಾಂತರವನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಬೇಕು. ಹಿಂದು ಹೆಣ್ಣುಮಕ್ಕಳಿಗೆ ಕಾನೂನಿನ ರಕ್ಷಣೆ ಒದಗಿಸಬೇಕು. ಸಿಂಧ್‌ ಪ್ರಾಂತ್ಯದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

81 ಹೆಣ್ಣುಮಕ್ಕಳ ಮತಾಂತರ

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮತಾಂತರದ ಕುರಿತು ಮಾನವ ಹಕ್ಕುಗಳ ಮೇಲೆ ನಿಗಾ ಇರಿಸುವ ಸಂಸ್ಥೆಯೊಂದು ವರದಿ ಬಿಡುಗಡೆ ಮಾಡಿದ್ದು, 2022ರಲ್ಲಿ ಪಾಕಿಸ್ತಾನದಲ್ಲಿ 81 ಬಾಲಕಿಯರು ಹಾಗೂ ಹೆಣ್ಣುಮಕ್ಕಳನ್ನು ಮತಾಂತರಗೊಳಿಸಲಾಗಿದೆ ಎಂದು ತಿಳಿಸಿದೆ. ಇವರಲ್ಲಿ ಶೇ.23ರಷ್ಟು ಹೆಣ್ಣುಮಕ್ಕಳು 14ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹಾಗೆಯೇ, ಶೇ.36ರಷ್ಟು ಹೆಣ್ಣುಮಕ್ಕಳು 14-18 ವರ್ಷದವರಾಗಿದ್ದಾರೆ ಎಂದು ವರದಿ ನೀಡಿದೆ. ಪಾಕಿಸ್ತಾನದಲ್ಲಿ 75 ಲಕ್ಷ ಹಿಂದುಗಳು ವಾಸಿಸುತ್ತಿದ್ದಾರೆ. ನೆರೆ ರಾಷ್ಟ್ರದಲ್ಲಿ ಶೇ.96ರಷ್ಟು ಜನ ಮುಸ್ಲಿಮರಾಗಿದ್ದು, ಹಿಂದುಗಳ ಪ್ರಮಾಣ ಶೇ.2.1ರಷ್ಟಿದೆ. ಶೇ.1.6ರಷ್ಟಿರುವ ಕ್ರೈಸ್ತರು ಕೂಡ ಸಂಕಷ್ಟದಲ್ಲಿಯೇ ದಿನ ದೂಡುತ್ತಿದ್ದಾರೆ. ಇವರ ಮೇಲೂ ದೌರ್ಜನ್ಯಗಳು ಸಾಮಾನ್ಯ ಎಂಬಂತಾಗಿದೆ. ಇವರಿಗಿಂತ ಕಡಿಮೆ ಇರುವ ಸಿಖ್ಖರ ಪರಿಸ್ಥಿತಿಯೂ ಭಿನ್ನವಾಗಿಲ್ಲ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದು ಮಹಿಳೆಯ ಭೀಕರ ಹತ್ಯೆ; ಗ್ಯಾಂಗ್​ರೇಪ್​ ಮಾಡಿ, ಆಕೆಯ ತಲೆ-ಸ್ತನಗಳನ್ನು ಕತ್ತರಿಸಿ ಕೊಂದ ಕಟುಕರು

Exit mobile version