Site icon Vistara News

Miss international queen 2022: ಮಂಗಳಮುಖಿಯರ ಸೌಂದರ್ಯ ಸ್ಪರ್ಧೆಯಲ್ಲಿ ಫಿಲಿಪೈನ್ಸ್ ನ ಫುಶಿಯಾಗೆ ಕಿರೀಟ

Fuchsia Anne Ravena, who crowned the crown

ಥಾಯ್ಲೆಂಡ್: ಮಂಗಳಮುಖಿಯರಿಗಾಗಿ ನಡೆಯುವ Miss international queen 2022 (ಮಿಸ್ ಇಂಟರ್‌ನ್ಯಾಷನಲ್‌ ಕ್ವೀನ್) ಸೌಂದರ್ಯ ಸ್ಪರ್ಧೆಯಲ್ಲಿ ಫಿಲಿಪೈನ್ಸ್‌ನ ೨೭ ವರ್ಷದ ಫುಶಿಯಾ ಆನ್ ರವೆನಾ ಅವರು ಪರಮ ಸುಂದರಿಯಾಗಿ ಕಿರೀಟ ಧರಿಸಿದರು. ಕೊಲಂಬಿಯಾದ ಜಾಸ್ಮಿನ್ ಜಿಮೆನೆಜ್ ಮೊದಲ ರನ್ನರ್ ಅಪ್, ಫ್ರಾನ್ಸ್‌ನ ಏಲಾ ಶನೆಲ್ ಎರಡನೇ ಸ್ಥಾನ ಪಡೆದರು.

ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ಜನಪ್ರಿಯ ಟ್ರಾನ್ಸ್‌ಜೆಂಡರ್ ಸ್ಪರ್ಧೆ ಇದಾಗಿದೆ. ಕೊರೊನಾ ಕಾರಣದಿಂದ ಎರಡು ವರ್ಷಗಳಿಂದ ಇದು ನಡೆದಿರಲಿಲ್ಲ. ಶನಿವಾರ ಥಾಯ್ಲೆಂಡ್ ನಲ್ಲಿ ಈ ಸ್ಪರ್ಧೆ ಆಯೋಜನೆಗೊಂಡಿತ್ತು. ಪ್ರಶಸ್ತಿ ಪಡೆದ ಫುಶಿಯಾ ಆನ್ ರವೆನಾ‌ ಅವರು ಉದ್ಯಮಿಯಾಗಿದ್ದು, ಫಿಲಿಪೈನ್ಸ್‌ಗೆ ಈ ಗೌರವ ತಂದು ಕೊಟ್ಟ ಮೂರನೇ ಮಹಿಳೆಯಾಗಿದ್ದಾರೆ. ರವೆನಾ ಇತರ 22 ಸ್ಪರ್ಧಿಗಳ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದಾರೆ.

ಈ ವಿಶಿಷ್ಟ ಸೌಂದರ್ಯ ಸ್ಪರ್ಧೆಯ ಕೆಲವು ಆಕರ್ಷಕ ಚಿತ್ರಗಳು ಇಲ್ಲಿವೆ.

ಸಮಾನತೆಯ ಪ್ರಚಾರ ಹೇಗೆ ಮಾಡುವಿರಿ ಎಂಬ ಪ್ರಶ್ನೆಗೆ ಫುಶಿಯಾ ನೀಡಿದ ಗೆಲುವಿನ ಉತ್ತರ ಇದು:

“ಎಲ್ಲರಿಗೂ ನನ್ನ ಮೊದಲ ಸಂದೇಶವೆಂದರೆ ನಾವೆಲ್ಲರೂ ಪ್ರೀತಿ ಶಾಂತಿ ಮತ್ತು ಏಕತೆಯನ್ನು ಹರಡೋಣ. ಏಕೆಂದರೆ ಇದು ಜಗತ್ತಿನ ಈ ಕ್ಷಣದ ತುರ್ತು ಅಗತ್ಯ. ನಾವು ಒಂದೇ ಆಕಾಶದ ಅಡಿಯಲ್ಲಿ ವಾಸಿಸುತ್ತೇವೆ ಮತ್ತು ಅದೇ ಗಾಳಿಯನ್ನು ಉಸಿರಾಡುತ್ತೇವೆ. ಪರ‌ಸ್ಪರ ಭಿನ್ನತೆಗಳಿದ್ದರೂ ಪ್ರೀತಿಯಿಂದ ಬದುಕುತ್ತೇವೆʼʼ ಎಂದು ಫುಶಿಯಾ ಹೇಳಿದರು.

ಕೊಲಂಬಿಯಾದ ಜಾಸ್ಮಿನ್ ಜಿಮೆನೆಜ್ ಮೊದಲ ರನ್ನರ್ ಅಪ್ ಸ್ಥಾನ ಪಡೆದರು. ಫ್ರಾನ್ಸ್‌ನ ಏಲಾ ಶನೆಲ್ ಎರಡನೇ ಸ್ಥಾನ ಪಡೆದರು.

ಟಾಪ್‌ ತ್ರೀ ಪರಮ ಸುಂದರಿಯರು

ಟ್ರಾನ್ಸ್ ಜನರಿಗೆ ಒಂದು ವೇದಿಕೆ
ಮಿಸ್ ಇಂಟರ್‌ನ್ಯಾಶನಲ್ ಕ್ವೀನ್ ಸ್ಪರ್ಧೆಯು ಪ್ರಪಂಚದಾದ್ಯಂತದ ಟ್ರಾನ್ಸ್‌ಜೆಂಡರ್‌ಗಳನ್ನು ಒಟ್ಟುಗೂಡಿಸುತ್ತದೆ. ಟ್ರಾನ್ಸ್‌ಜೆಂಡರ್ ಮಹಿಳೆಯರನ್ನು ಸಮಾಜವು ಹೆಚ್ಚು ಒಪ್ಪಿಕೊಳ್ಳಲು ಸಹಾಯವಾಗಲಿ ಎಂಬ ಉದ್ದೇಶದಿಂದ ದಶಕದ ಹಿಂದೆ ಇದನ್ನು ಆರಂಭ ಮಾಡಲಾಯಿತು.

ಕಸ್ಟಮ್-ನಿರ್ಮಿತ ಸಿಲ್ವರ್ ಗೌನ್‌ನಲ್ಲಿ ಬೆರಗುಗೊಳಿಸಿದ ಫುಶಿಯಾ
ಮಿಸ್ ಇಂಟರ್‌ನ್ಯಾಷನಲ್‌ ಕ್ವೀನ್ ಫಿಲಿಪೈನ್ಸ್ 2022 ಸ್ಪರ್ಧೆಯಲ್ಲಿ ಕಿರೀಟ ಧರಿಸಿದ ಫುಶಿಯಾ ರವೆನಾ ಅವರು ಫಿಲಿಪಿನೋ ವಾಸ್ತುಶಿಲ್ಪಿ ಮತ್ತು ಫ್ಯಾಷನ್ ಡಿಸೈನರ್ ಫ್ರಾನ್ಸಿಸ್ ಲಿಬಿರಾನ್ ಅವರು ವಿನ್ಯಾಸಗೊಳಿಸಿದ ಗೌನ್‌ಗಳನ್ನು ಧರಿಸಿ ರ‍್ಯಾಂಪ್‌ ವಾಕ್‌ ಮಾಡಿದರು. ಅವರ ನಡಿಗೆ ಮತ್ತು ನಡವಳಿಕೆಗಳಲ್ಲಿ ಆತ್ಮವಿಶ್ವಾಸ ಎಲ್ಲರನ್ನೂ ಮೋಡಿ ಮಾಡಿತು. ರವೆನಾ ಹೈ-ಸ್ಲಿಟ್ ಗೌನ್‌ನಲ್ಲಿ ಓಪನ್‌ ನೆಕ್‌ಲೈನ್‌ನೊಂದಿಗೆ ಗಮನ ಸೆಳೆದರು. ಡೈಮಂಡ್ ಕಿವಿಯೋಲೆಗಳು ಮತ್ತು ಹೈ ಹೀಲ್ಸ್‌ ಅದಕ್ಕೆ ಇನ್ನಷ್ಟು ಮೆರುಗು ನೀಡಿತು.

ಮಂಗಳಮುಖಿಯರ ಹಕ್ಕಿನ ಪ್ರಬಲ ಧ್ವನಿ

ಫುಶಿಯಾ ಅವರು ಮಂಗಳಮುಖಿಯರು ಮತ್ತು ಅವರ ಹಕ್ಕುಗಳಿಗಾಗಿ ಬಲವಾದ ಧ್ವನಿಯಾಗುವ ಧೈರ್ಯ ತೋರಿದ್ದಾರೆ. ವೇದಿಕೆ ಏರುವ ಮೊದಲು, ಕಿರೀಟ ಧಾರಣೆ ಸಂದರ್ಭದಲ್ಲಿ ಅವರು ಆಡಿದ ಮಾತು, ಹರಿ ಬಿಟ್ಟ ಆಲೋಚನೆಗಳು ಈ ನಿಟ್ಟಿನಲ್ಲಿ ಬೆಳಕು ಮೂಡಿಸಿವೆ. ನಾವು ಎಲ್ಲರ ಮುಂದೆ ತಲೆ ಎತ್ತಿ ನಡೆಯಬೇಕು. ನಾವು ಯಾರೆಂಬುದರ ಬಗ್ಗೆ ಹೇಳಿಕೊಳ್ಳಲು ನಾಚಿಕೆ ಪಡಬಾರದು ಎಂಬ ಆಕೆಯ ಆತ್ಮವಿಶ್ವಾಸದ ಮಾತು ಸಭಾಂಗಣದಲ್ಲಿ ಅನುರಣಿಸಿತು.

ಇದನ್ನೂ ಓದಿ: Ethnic Fashion: ಡಿಸೈನರ್‌ ಸಲ್ವಾರ್ ಸೂಟ್ ನ ರೀ ಎಂಟ್ರಿ

Exit mobile version