Site icon Vistara News

Miss Universe 2023: ಭುವನ ಸುಂದರಿಯರಿಗೆ ಕಠಿಣ ಸ್ಪರ್ಧೆ ಒಡ್ಡಿದ ಮಂಗಳಮುಖಿಯರು; ಹಿನ್ನೆಲೆ ಕುತೂಹಲಕರ!

miss

ಅಲ್‌ ಸೆಲ್ವಡಾರ್:‌ ಈ ಬಾರಿಯ ಭುವನ ಸುಂದರಿ (Miss Universe 2023) ಯಾರಾಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಸೆಂಟ್ರಲ್‌ ಅಮೆರಿಕದ ಅಲ್‌ ಸಾಲ್ವಡಾರ್‌ನಲ್ಲಿರುವ ಜೋಸ್‌ ಅಡೊಲ್ಫೊ ಪಿನಡೇ ಅರೇನಾದಲ್ಲಿ (Jose Adolfo Pineda Arena) ನಡೆದ 72ನೇ ಭುವನ ಸುಂದರಿ ಸ್ಪರ್ಧೆಯಲ್ಲಿ ನಿಕಾರಗುವಾದ ಶೆಯ್‌ನ್ನಿಸ್‌ ಪಲಾಸಿಯೋಸ್‌ (Sheynnis Palacios) ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ವಿಶೇಷ ಎಂದರೆ ಈ ಬಾರಿಯ ಸ್ಪರ್ಧೆಯಲ್ಲಿ ಲಿಂಗ ಪರಿವರ್ತನೆ ಮಾಡಿಕೊಂಡ ಇಬ್ಬರು ಮಹಿಳೆಯರು ಪಾಲ್ಗೊಂಡಿದ್ದರು.

ಭುವನ ಸುಂದರಿ ಪಟ್ಟಕ್ಕಾಗಿ ಸುಮಾರು 84 ಮಂದಿ ಸ್ಪರ್ಧಿಸಿದ್ದರು. ಈ ಪೈಕಿ ಮಿಸ್ ಪೋರ್ಚುಗಲ್ ಮರೀನಾ ಮಚ್ಚೆ ಮತ್ತು ಮಿಸ್ ನೆದರ್‌ಲ್ಯಾಂಡ್ಸ್‌ ರಿಕ್ಕಿ ಕೊಲ್ಲೆ ಫ್ಯಾಷನ್‌ ಪ್ರಿಯರ ಗಮನ ಸೆಳೆದಿದ್ದಾರೆ. ಯಾಕೆಂದರೆ ಇವರಿಬ್ಬರು ಲಿಂಗ ಪರಿವರ್ತನೆ ಮಾಡಿಕೊಂಡವರು.

ಯಾರು ಈ ಮರೀನಾ ಮಚ್ಚೆ?

ಮರೀನಾ ಮಚ್ಚೆ ಅಕ್ಟೋಬರ್‌ನಲ್ಲಿ ನಡೆದ 2023ರ ಮಿಸ್ ಪೋರ್ಚುಗಲ್ ಸ್ಪರ್ಧೆಯಲ್ಲಿ ಜಯ ಗಳಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಮಂಗಳಮುಖಿ ಎನಿಸಿಕೊಂಡಿದ್ದರು. “ನಾನು ಧೈರ್ಯ ಮತ್ತು ಶಕ್ತಿಯಿಂದ ಎದುರಿಸಿದ ಸವಾಲುಗಳ ಬಗ್ಗೆ ತುಂಬಾ ಹೆಮ್ಮೆ ಇದೆ. ನನ್ನ ಜೀವನದಲ್ಲಿ ಇತರರ ಬಗ್ಗೆ ಮಾನವೀಯತೆ ಮತ್ತು ದಯೆಯನ್ನು ಬೆಳೆಸಿಕೊಳ್ಳಲು ಇದು ಸಹಾಯ ಮಾಡುತ್ತದೆʼʼ ಎಂದು ಅವರು ಹೇಳಿಕೊಂಡಿದ್ದರು.

Miss Universe 2023: ನಿಕಾರಗುವಾದ ಶೆಯ್‌ನ್ನಿಸ್‌ ಪಲಾಸಿಯೋಸ್‌ಗೆ ಭುವನ ಸುಂದರಿ ಕಿರೀಟ!

“ಲಿಂಗ ಪರಿವರ್ತನೆ ಮಾಡಿಸಿಕೊಂಡ ಮಹಿಳೆಯಾಗಿ ನಾನು ದಾರಿಯುದ್ದಕ್ಕೂ ಅನೇಕ ಅಡೆತಡೆಗಳನ್ನು ಎದುರಿಸಿದ್ದೇನೆ. ಆದರೆ ಅದೃಷ್ಟವಶಾತ್ ಮತ್ತು ನನ್ನ ಕುಟುಂಬ ಬೆಂಬಲಕ್ಕೆ ನಿಂತಿದೆ. ಪ್ರೀತಿಯು ಅಜ್ಞಾನಕ್ಕಿಂತ ಬಲವಾಗಿದೆ ಎನ್ನುವುದನ್ನು ಅವರು ತೋರಿಸಿಕೊಟ್ಟಿದ್ದಾರೆ” ಎಂದು ಮರೀನಾ ಮಚ್ಚೆ ತಿಳಿಸಿದ್ದಾರೆ.

ರಿಕ್ಕಿ ಕೊಲ್ಲೆ ಹಿನ್ನೆಲೆ  ಏನು?

ಮಿಸ್ ನೆದರ್‌ಲ್ಯಾಂಡ್ಸ್‌ ಪಟ್ಟಕ್ಕೇರಿದ ರಿಕ್ಕಿ ಕೊಲ್ಲೆ 22 ವರ್ಷದ ರೂಪದರ್ಶಿ ಮತ್ತು ಎಲ್‌ಬಿಟಿಕ್ಯುಐಎ+ (LGBTQIA+) ಹಕ್ಕುಗಳ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿದ್ದಾರೆ. ಈ ವರ್ಷದ ಜುಲೈನಲ್ಲಿ ಇತರ ಒಂಬತ್ತು ಫೈನಲಿಸ್ಟ್‌ಗಳನ್ನು ಸೋಲಿಸಿ ಅವರು ಮಿಸ್ ನೆದರ್‌ಲ್ಯಾಂಡ್ಸ್‌ ಕಿರೀಟವನ್ನು ತೊಟ್ಟುಕೊಂಡಿದ್ದರು. 2018ರಲ್ಲಿ ಸ್ಪೇನ್ ಪ್ರತಿನಿಧಿಸಿದ ಏಂಜೆಲಾ ಪೊನ್ಸ್ ನಂತರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಎರಡನೇ ಮಂಗಳಮುಖಿ ಎನಿಸಿಕೊಂಡಿದ್ದಾರೆ.

ಕೊಲ್ಲೆ ʼಹಾಲೆಂಡ್‌ ನೆಕ್ಸ್ಟ್ ಟಾಪ್ ಮಾಡೆಲ್ʼ(Holland’s Next Top Model)ನಲ್ಲಿ ಸ್ಪರ್ಧಿಸಿದ್ದರು. ಈ ಹಿಂದೆ ಫಾರ್ ವಾಯ್ಸ್‌ ಚೇಂಜ್ ಅಭಿಯಾನಕ್ಕಾಗಿ (Voices for Change campaign) ಹಂಚಿಕೊಂಡ ವೀಡಿಯೊದಲ್ಲಿ ಅವರು ಸಮಾನತೆಯನ್ನು ಪ್ರತಿಪಾದಿಸಿದ್ದರು. ಮಿಸ್ ನೆದರ್‌ಲ್ಯಾಂಡ್ಸ್‌ ಆಗುವ ಮೊದಲು ಕೊಲ್ಲೆ ತನ್ನ ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ವಿವರಿಸಿದ್ದರು.

ಈ ಬಾರಿಯ ಭುವನ ಸುಂದರಿ ಸ್ಪರ್ಧೆಯ ಇನ್ನೊಂದು ವಿಶೇಷತೆ ಎಂದರೆ ನೇಪಾಳದ ಜೇನ್‌ ದೀಪಿಕಾ ಗ್ಯಾರೆಟ್‌ ನೋಡಲು ದಪ್ಪ ಇದ್ದರೂ ಭಾಗವಹಿಸುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಆ ಮೂಲಕ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಿದ ಜಗತ್ತಿನ ಮೊದಲ ಪ್ಲಸ್‌ ಸೈಜ್‌ (ದಪ್ಪ ಇರುವವರು) ರೂಪದರ್ಶಿ ಎಂಬ ಖ್ಯಾತಿಗೂ ಪಾತ್ರರಾಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version