Site icon Vistara News

Missile Attack: ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ; ಕೇರಳ ಮೂಲದ ವ್ಯಕ್ತಿ ಸಾವು

Missile Attack

Missile Attack

ಜೆರುಸಲೇಂ: ಲೆಬನಾನ್‌ನಿಂದ (Lebanon) ಉಡಾಯಿಸ್ಪಟ್ಟ ಕ್ಷಿಪಣಿ ಸೋಮವಾರ (ಮಾರ್ಚ್‌ 4) ಇಸ್ರೇಲ್‌ನ ಉತ್ತರದ ಗಡಿ ಮಾರ್ಗಲಿಯಟ್ (Margaliot) ಬಳಿಯ ತೋಟಕ್ಕೆ ಅಪ್ಪಳಿಸಿದ್ದು, ಭಾರತೀಯ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ ಮತ್ತು ಇತರ ಇಬ್ಬರು ಗಾಯಗೊಂಡಿದ್ದಾರೆ. ಈ ಮೂವರು ಕೇರಳ ಮೂಲದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ (Missile Attack).

ಮೃತನನ್ನು ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್‌ವೆಲ್‌ (Patnibin Maxwell) ಎಂದು ಗುರುತಿಸಲಾಗಿದೆ. ಅವರ ಮೃತದೇಹವನ್ನು ಜಿವ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಉತ್ತರ ಇಸ್ರೇಲ್‌ನ ಗೆಲಿಲಿ ಪ್ರದೇಶದ ಮೊಶಾವ್ (ಸಾಮೂಹಿಕ ಕೃಷಿ ಸಮುದಾಯ)ನ ಮಾರ್ಗಲಿಯಟ್‌ ತೋಟಕ್ಕೆ ಕ್ಷಿಪಣಿ ಅಪ್ಪಳಿಸಿದೆ ಎಂದು ರಕ್ಷಣಾ ಸೇವೆಗಳ ವಕ್ತಾರರು ತಿಳಿಸಿದ್ದಾರೆ.

ಈ ಕ್ಷಿಪಣಿ ದಾಳಿಯಿಂದ ಇತರ ಇಬ್ಬರು ಕೇರಳಿಗರಾದ ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಗಂಭೀರ ಗಾಯಗೊಂಡಿದ್ದ ಜಾರ್ಜ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಪ-ಸ್ವಲ್ಪ ಗಾಯಗೊಂಡ ಮೆಲ್ವಿನ್ ಅವರನ್ನು ಉತ್ತರ ಇಸ್ರೇಲ್‌ನ ಸಫೆಡ್‌ನ ಜಿವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು.

ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಹಮಾಸ್ ಅನ್ನು ಬೆಂಬಲಿಸಿ ಅಕ್ಟೋಬರ್ 8ರಿಂದ ಉತ್ತರ ಇಸ್ರೇಲ್ ಮೇಲೆ ಪ್ರತಿದಿನ ರಾಕೆಟ್‌, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುತ್ತಿರುವ ಲೆಬನಾನ್‌ನ ಶಿಯಾ ಹಿಜ್ಬುಲ್ಲಾ ಬಣವು ಈ ದಾಳಿಯನ್ನು ನಡೆಸಿದೆ ಎನ್ನಲಾಗಿದೆ. ʼʼದಾಳಿಯಲ್ಲಿ ಒಟ್ಟು ಏಳು ವಿದೇಶಿ ಕಾರ್ಮಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರು ಗಂಭೀರವಾಗಿದ್ದಾರೆ ಮತ್ತು ಅವರನ್ನು ಆಂಬ್ಯುಲೆನ್ಸ್ ಮತ್ತು ಇಸ್ರೇಲ್ ವಾಯುಪಡೆಯ ಹೆಲಿಕಾಫ್ಟರ್‌ಗಳಲ್ಲಿ ಬೀಲಿನ್ಸನ್, ರಂಬಾಮ್ ಮತ್ತು ಜಿವ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆʼʼ ಎಂದು ಮೂಲಗಳು ತಿಳಿಸಿವೆ.

ಪ್ರತಿದಾಳಿ

ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಇಸ್ರೇಲ್ ರಕ್ಷಣಾ ಪಡೆ (Israel Defence Forces), ʼʼಫಿರಂಗಿಗಳಿಂದ ಪ್ರತಿದಾಳಿ ನಡೆಸಿದ್ದೇವೆ. ದಕ್ಷಿಣ ಲೆಬನಾನ್ ಪಟ್ಟಣ ಚಿಹಿನೆಯಲ್ಲಿನ ಹಿಜ್ಬುಲ್ಲಾ ಕಾಂಪೌಂಡ್ ಮತ್ತು ಐಟಾ ಅಶ್-ಶಾಬ್‌ನಲ್ಲಿನ ಹಿಜ್ಬುಲ್ಲಾಗೆ ಸೇರಿದ ಮತ್ತೊಂದು ಸ್ಥಳದ ಮೇಲೆ ದಾಳಿ ನಡೆಸಿದ್ದೇವೆʼʼ ಎಂದು ಹೇಳಿದೆ.

ಇದನ್ನೂ ಓದಿ: Israel Palestine War: ಗಾಜಾದಲ್ಲಿ ರಕ್ತದೋಕುಳಿ; ಆಹಾರಕ್ಕಾಗಿ ಬಂದವರ ಮೇಲೆ ದಾಳಿ; ಕನಿಷ್ಠ 104 ಮಂದಿ ಸಾವು

ತೀವ್ರ ಸಂಘರ್ಷ

ಹಮಾಸ್‌ಗೆ ಬೆಂಬಲ ಸೂಚಿಸಲು ಹಿಜ್ಬುಲ್ಲಾ ಬಣವು ಅಕ್ಟೋಬರ್ 8ರಿಂದ ಇಸ್ರೇಲ್‌ನ ಉತ್ತರದ ಭಾಗ ಮತ್ತು ಮಿಲಿಟರಿ ಪೋಸ್ಟ್‌ಗಳ ಮೇಲೆ ದಾಳಿ ನಡೆಸುತ್ತಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಈ ಸಂಘರ್ಷದಲ್ಲಿ ಇದುವರೆಗೆ ಇಸ್ರೇಲ್‌ನ 7 ನಾಗರಿಕರು ಮತ್ತು 10 ಐಡಿಎಫ್ ಸೈನಿಕರು ಮೃತಪಟ್ಟಿದ್ದಾರೆ ಎಂದು ಅಂಕಿ-ಅಂಶಗಳು ತಿಳಿಸಿವೆ. ಇತ್ತೀಚೆಗೆ ಇಸ್ರೇಲ್‌ ಪಡೆಯಿಂದ ತಮ್ಮ ಗುಂಪಿನ 229 ಸದಸ್ಯರು ಹತ್ಯೆಗೀಡಾಗಿದ್ದಾರೆ. ಲೆಬನಾನ್‌ ಮಾತ್ರವಲ್ಲ ಸಿರಿಯಾದಲ್ಲಿಯೂ ಈ ಹತ್ಯೆ ನಡೆದಿದೆ ಎಂದು ಹೆಜ್ಬುಲ್ಲಾ ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version