ವಾಷಿಂಗ್ಟನ್: ಬ್ರಿಟನ್ ಮೂಲದ ಹಾಲಿವುಡ್ ನಟ, ಆಸ್ಕರ್ ಪುರಸ್ಕೃತ ಎ ರೂಮ್ ವಿತ್ ಎ ವ್ಯೂ (A Room With A View) ಸಿನಿಮಾ ಮೂಲಕವೇ ಜಗತ್ತಿನಾದ್ಯಂತ ಗಮನ ಸೆಳೆದಿದ್ದ ಜೂಲಿಯನ್ ಸ್ಯಾಂಡ್ಸ್ (65) ಶವವಾಗಿ ಪತ್ತೆಯಾಗಿದ್ದಾರೆ. ಐದು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಅವರ ಅಸ್ಥಿಪಂಜರ ಪತ್ತೆಯಾಗಿದ್ದು, ಜಗತ್ತಿನ ಹಲವು ನಟರು ಸಂತಾಪ ಸೂಚಿಸಿದ್ದಾರೆ.
ಜೂಲಿಯನ್ ಸ್ಯಾಂಡ್ಸ್ ಅವರು ಐದು ತಿಂಗಳ ಹಿಂದೆ ದಕ್ಷಿಣ ಕ್ಯಾಲಿಫೋರ್ನಿಯಾದ ಹಿಮಚ್ಛಾದಿತ ಶಿಖರವನ್ನು ಹತ್ತಿದ್ದರು. ಹಿಮದಿಂದಲೇ ಆವೃತವಾದ ಶಿಖರದಲ್ಲಿ ಪರ್ವತಾರೋಹಣ ಮಾಡುವಾಗ ಅವರು ನಾಪತ್ತೆಯಾಗಿದ್ದರು. ಎಷ್ಟು ಹುಡುಕಿದರೂ ಅವರ ಶವ ಸಿಕ್ಕಿರಲಿಲ್ಲ. ಜೂನ್ 25ರಂದು ಅವರ ಅಸ್ಥಿಪಂಜರಗಳು ಸಿಕ್ಕಿದ್ದು, ಸಿಕ್ಕ ಅಸ್ಥಿಪಂಜರ ನಟರದ್ದೇ ಎಂಬುದನ್ನು ದೃಢಪಡಿಸಲಾಗಿದೆ.
ಆದಾಗ್ಯೂ, ಜೂಲಿಯನ್ ಸ್ಯಾಂಡ್ಸ್ ಅವರ ಸಾವಿಗೆ ನಿಜವಾದ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಅವರು ಹತ್ಯೆಗೀಡಾಗಿದ್ದಾರೋ, ಪರ್ವತಾರೋಹಣ ಮಾಡುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೋ ಎಂಬುದರ ಕುರಿತು ತನಿಖೆ ನಡೆಯುತ್ತದೆ. ವೈದ್ಯಕೀಯ ವರದಿ ಬಂದ ಬಳಿಕವೇ ಈ ಕುರಿತು ನಿಖರ ಮಾಹಿತಿ ಲಭ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜೂಲಿಯನ್ ಸ್ಯಾಂಡ್ಸ್ ಅವರು ನಾಪತ್ತೆಯಾದ 24 ಗಂಟೆ ಬಳಿಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಸತತ ಶೋಧನೆ ಬಳಿಕವೂ ಅವರನ್ನು ಪತ್ತೆಹಚ್ಚಲು ಆಗಿರಲಿಲ್ಲ.
ಜೂಲಿಯನ್ ಸ್ಯಾಂಡ್ಸ್ ಅವರು ಪ್ರವಾಸ ಪ್ರಿಯರಾಗಿದ್ದರು. ಹಾಗೆಯೇ, ಹೆಚ್ಚು ಅವರು ಪರ್ವತಾರೋಹಣ ಮಾಡುತ್ತಿದ್ದರು. ಜನವರಿ 13ರಂದು ಅವರೊಬ್ಬರೇ ಲಾಸ್ ಏಂಜಲೀಸ್‌ನಿಂದ 80 ಕಿಲೋಮೀಟರ್ ದೂರದಲ್ಲಿರುವ ಬಾಲ್ಡಿ ಬೌಲ್ ಶಿಖರ ಹತ್ತಿದ್ದರು. ಬಾಲ್ಡಿ ಬೌಲ್ ಶಿಖರವು ತುಂಬ ಇಳಿಜಾರಿನಿಂದ ಕೂಡಿದ್ದು, ಯಾವಾಗಲೂ ಹಿಮಪಾತವಾಗುತ್ತಿರುತ್ತದೆ. ಇದು ಪರ್ವತಾರೋಹಿಗಳಿಗೆ ಹೆಸರುವಾಸಿಯಾದ ತಾಣವಾಗಿದೆ. ಎ ರೂಮ್ ವಿತ್ ಎ ವ್ಯೂ, ಬಾಕ್ಸಿಂಗ್ ಹೆಲೆನಾ, ಲೀವಿಂಗ್ ಲಾಸ್ ವೆಗಾಸ್, ದಿ ಕಿಲ್ಲಿಂಗ್ ಫೀಲ್ಡ್ಸ್, ಓಷಿಯನ್ಸ್ ಥರ್ಟೀನ್ ಸೇರಿ ಹಲವು ಸಿನಿಮಾಗಳು ಜೂಲಿಯನ್ ಸ್ಯಾಂಡ್ಸ್ ಅವರಿಗೆ ಖ್ಯಾತಿ ತಂದುಕೊಟ್ಟಿದ್ದವು.