ಮಾಲೆ: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಲಕ್ಷದ್ವೀಪಕ್ಕೆ (Lakshadweep) ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಮಾಲ್ಡೀವ್ಸ್‌ನಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು. ಬಳಿಕ ಮಾಲ್ಡೀವ್ಸ್ ಸಂಸದರು ಭಾರತದ ಕ್ಷಮೆಯಾಚಿಸಿದ್ದರು. ಇದೀಗ ಮಾಲ್ಡೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝು (Mohamed Muizzu) ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಜನತೆಯ ಕ್ಷಮೆಯಾಚಿಸಬೇಕು ಎಂದು ಮಾಲ್ಡೀವ್ಸ್ ಜುಮ್ಹೋರಿ ಪಕ್ಷ(JP)ದ ಮುಖಂಡ ಖಾಸಿಮ್ ಇಬ್ರಾಹಿಂ (Qasim Ibrahim) ಆಗ್ರಹಿಸಿದ್ದಾರೆ.
ಮಾಲ್ಡೀವ್ಸ್ ಸಂಸತ್ತಿನ ಪ್ರಮುಖ ಪ್ರತಿಪಕ್ಷ ಮಾಲ್ಡೀವ್ಸ್ ಡೆಮೊಕ್ರಾಟಿಕ್ ಪಕ್ಷ (MDP) ಮುಹಮ್ಮದ್ ಮುಯಿಝು ವಿರುದ್ಧ ಸಂಸತ್ತಿನಲ್ಲಿ ಮಹಾಭಿಯೋಗ (ವಾಗ್ದಂಡನೆ) ನಿರ್ಣಯ ಮಂಡಿಸಲು ಮುಂದಾಗಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ. ಇತ್ತೀಚೆಗೆ ಸದನದಲ್ಲಿ ಸರ್ಕಾರದ ಪರ ಸಂಸದರು ಮತ್ತು ವಿರೋಧ ಪಕ್ಷದ ಸಂಸದರ ನಡುವೆ ಘರ್ಷಣೆ ಉಂಟಾಗಿತ್ತು.
ರಾಜತಾಂತ್ರಿಕ ಸಭ್ಯತೆಯ ಮಹತ್ವವನ್ನು ಇಬ್ರಾಹಿಂ ಎತ್ತಿ ಹಿಡಿದರು. ವಿಶೇಷವಾಗಿ ನೆರೆಯ ರಾಷ್ಟ್ರಗಳೊಂದಿಗೆ, ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರುವ ಹೇಳಿಕೆಗಳನ್ನು ತಪ್ಪಿಸಬೇಕು ಎಂದು ಒತ್ತಿ ಹೇಳಿದರು. ರಾಷ್ಟ್ರೀಯ ಕಟ್ಟುಪಾಡುಗಳನ್ನು ಎತ್ತಿಹಿಡಿಯುವ ಅಗತ್ಯವನ್ನು ಅವರು ಹೇಳಿದರು. “ಯಾವುದೇ ದೇಶದ ಬಗ್ಗೆ ವಿಶೇಷವಾಗಿ ನೆರೆಯ ದೇಶಕ್ಕೆ ಸಂಬಂಧಿಸಿದಂತೆ ಸಂಬಂಧದ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಮಾತನಾಡಬಾರದು. ನಮ್ಮ ದೇಶಕ್ಕೆ ನಾವು ಒಂದು ಬಾಧ್ಯತೆಯನ್ನು ಹೊಂದಿದ್ದೇವೆ, ಅದನ್ನು ಪರಿಗಣಿಸಬೇಕು. ಈ ಹಿಂದಿನ ಅಧ್ಯಕ್ಷ ಇಬ್ರಾಹಿಂ ಸೋಲಿಹ್ ಅವರು ಈ ಬಾಧ್ಯತೆಯನ್ನು ಪರಿಗಣಿಸಿ “ಇಂಡಿಯಾ ಔಟ್” ಅಭಿಯಾನವನ್ನು ನಿಷೇಧಿಸಿ ಆದೇಶವನ್ನು ಹೊರಡಿಸಿದ್ದರುʼʼ ಎಂದು ಅವರು ಹೇಳಿದರು.
“ಅಲ್ಲದೆ, ಚೀನಾ ಪ್ರವಾಸದ ನಂತರ ತಮ್ಮ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರಲ್ಲಿ ಔಪಚಾರಿಕವಾಗಿ ಕ್ಷಮೆಯಾಚಿಸುವಂತೆ ನಾನು ಅಧ್ಯಕ್ಷ ಮುಯಿಝು ಅವರನ್ನು ಒತ್ತಾಯಿಸುತ್ತೇನೆ” ಎಂದು ಅವರು ಆಗ್ರಹಿಸಿದರು.
ಕಳೆದ ವರ್ಷದ ಆರಂಭದಲ್ಲಿ, ಮಾಲ್ಡೀವ್ಸ್ ಅಧ್ಯಕ್ಷರಾಗಿದ್ದ ಇಬ್ರಾಹಿಂ ಸೋಲಿಹ್ ಅವರು ಪ್ರತಿಪಕ್ಷಗಳ ‘ಇಂಡಿಯಾ ಔಟ್’ ಅಭಿಯಾನವು ʼರಾಷ್ಟ್ರೀಯ ಭದ್ರತೆಗೆ ಬೆದರಿಕೆʼ ಎಂದು ಹೇಳುವ ಆದೇಶಕ್ಕೆ ಸಹಿ ಹಾಕಿದ್ದರು. ಪ್ರೊಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (PPM) ಮಾಜಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ನೇತೃತ್ವದ ಪ್ರತಿಪಕ್ಷಗಳು ‘ಇಂಡಿಯಾ ಔಟ್’ ಅಭಿಯಾನವನ್ನು ಮುನ್ನಡೆಸುತ್ತಿದ್ದವು. ಮಾಲ್ಡೀವ್ಸ್‌ನಲ್ಲಿ ಬೀಡುಬಿಟ್ಟಿರುವ ಭಾರತೀಯ ಮಿಲಿಟರಿ ಅಧಿಕಾರಿಗಳಿಂದ ದೇಶದ ಸಾರ್ವಭೌಮತ್ವಕ್ಕೆ ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿದ್ದವು. ಸೋಲಿಹ್ ಮತ್ತು ಮಾಲ್ಡೀವ್ಸ್ ಡೆಮಾಕ್ರಟಿಕ್ ಪಕ್ಷವನ್ನು ಗುರಿಯಾಗಿಸಿಕೊಂಡ ಈ ಅಭಿಯಾನ ನಡೆಸಲಾಗಿತ್ತು. ಸೋಲಿಹ್ ಅವರು ಭಾರತದ ಪರ ಒಲವು ಹೊಂದಿದ್ದರು.
ಇದನ್ನೂ ಓದಿ: Maldives Tourism: ಮಾಲ್ಡೀವ್ಸ್‌ಗೆ ತೆರಳುವ ಭಾರತೀಯರ ಸಂಖ್ಯೆ ಕುಸಿತ; ಬಾಯ್ಕಾಟ್ ಪೆಟ್ಟು
ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಮಾಲ್ಡೀವ್ಸ್ ದ್ವೀಪ ರಾಷ್ಟ್ರದಿಂದ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವುದನ್ನು ತ್ವರಿತಗೊಳಿಸಲು ಭಾರತ ಒಪ್ಪಿಕೊಂಡಿವೆ. ಮಾಲ್ಡೀವ್ಸ್‌ನಲ್ಲಿರುವ ಭಾರತೀಯ ಪಡೆಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡುವುದು ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ಮುಯಿಝು ಅವರ ಮುಖ್ಯ ಪ್ರಚಾರದ ವಿಷಯವಾಗಿತ್ತು. ಅಧಿಕಾರ ವಹಿಸಿಕೊಂಡ ಎರಡನೇ ದಿನ ಮುಯಿಝು ಅಧಿಕೃತವಾಗಿ ಮಾಲ್ಡೀವ್ಸ್‌ನಿಂದ ಮಿಲಿಟರಿ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವಂತೆ ಭಾರತ ಸರ್ಕಾರವನ್ನು ಆಗ್ರಹಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ